ರಾಮನಗರ: ನಾವ್ಯಾರು ಗಿಫ್ಟ್ ಬಾಕ್ಸ್ ಗಳನ್ನು ಕೊಡುತ್ತಿಲ್ಲ. ಪಕ್ಷದ ಕಾರ್ಯಕರ್ತರು ತಮ್ಮ ಖುಷಿಗಾಗಿ ಗಿಫ್ಟ್ ಗಳನ್ನು ಕೊಡುತ್ತಿರಬಹುದು ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದರು.
ಬೇರೆ ಪಕ್ಷದವರು ಯಾರೂ ಕೊಡುತ್ತಿಲ್ಲವೇ, ಕೊಡಬಾರದೆಂದು ಏನಾದರು ಇದೆಯಾ. ಚುನಾವಣೆ ಬರುತ್ತವೆ ಹೋಗುತ್ತವೆ. ಡೇರಿ, ವಿಎಸ್ಎಸ್ಎನ್ ಚುನಾವಣೆ ನಡೆಯುತ್ತವೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆ ನಡೆಯಿತು. ಎಲ್ಲ ಚುನಾವಣೆಗಳಿಗೂ ಗಿಫ್ಟ್ ಕೊಡುತ್ತಾರಾ, ಕೊಡಲು ಸಾಧ್ಯವೇ. ಹಬ್ಬ ಹುಣ್ಣಿಮೆ, ಗಣೇಶ, ರಾಮನ ಹೆಸರಿನಲ್ಲಿ ಗಿಫ್ಟ್ ಕೊಡುತ್ತಾರೆ. ಬಿಜೆಪಿಯವರು ಮೊದಲು ಕೆಲಸ ಮಾಡಲಿ ಹೇಳಿ ಎಂದು ತಿರುಗೇಟು ನೀಡಿದರು.
ಕಸಬಾ ಹೋಬಳಿ ಭಾಗದ ಕೆರೆಕಟ್ಟೆಗಳನ್ನು ತುಂಬಿಸಲು ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆಗೆ 14 ವರ್ಷಗಳಿಂದಲೂ ಬೇಡಿಕೆ ಇತ್ತು. ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದ ಅವಧಿಯಿಂದಲೂ ರೈತರು ಬೇಡಿಕೆ ಇಡುತ್ತಲೇ ಬಂದಿದ್ದರು. ಸಂಸದ ಡಿ.ಕೆ.ಸುರೇಶ್ ರವರ ಪರಿಶ್ರಮ, ಹೋರಾಟದಿಂದಾಗಿ ಸುಮಾರು 28 ಕೋಟಿ ರು.ವೆಚ್ಚದಲ್ಲಿ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಶುರುವಾಗಿದೆ. ಮೂರು ನಾಲ್ಕು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.ಅರ್ಕಾವತಿ ನದಿಯಿಂದ 11.4 ಕಿ.ಮೀ ದೂರ ಸ್ಟೀಲ್ ಪೈಪ್ ಲೈನ್ ಕಾಮಗಾರಿ ನಡೆಯಲಿದೆ. ಕಾಳೇಗೌಡನದೊಡ್ಡಿ, ಬಿಳಗುಂಬ, ಅರೆಹಳ್ಳಿ, ಕೂನಮುದ್ದನಹಳ್ಳಿ, ಪಾದರಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕೆರೆಗಳಿಗೆ ಏತನೀರಾವರಿ ಮೂಲಕ ನೀರು ಹರಿಸಲಾಗುವುದು. ರೈತರಿಗೆ ಅನುಕೂಲವಾಗುವ ಇಂತಹ ಜನೋಪಯೋಗಿ ಕಾರ್ಯಗಳ ಮೂಲಕ ನಾವು ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ರಾಮನಗರ ಕ್ಷೇತ್ರಕ್ಕೆ ನಿರೀಕ್ಷೆಗೂ ಮೀರಿ ಸಾಕಷ್ಟು ಅನುದಾನ ಬಂದಿದೆ. ರಾಮನಗರ ಟೌನ್, ಕಸಬಾ, ಕೈಲಾಂಚ ಹೋಬಳಿಗಳಿಗೆ ಸುಮಾರು 700 ಕೋಟಿ, ಹಾರೋಹಳ್ಳಿ - ಮರಳವಾಡಿಯಲ್ಲಿ ಕುಡಿಯುವ ನೀರಿಗೆ 300 ಕೋಟಿ, ಟೌನಿನಲ್ಲಿ ಚರಂಡಿ, ರಸ್ತೆಗೆ 82 ಕೋಟಿ, ಅರ್ಕಾವತಿ ದಡದಲ್ಲಿ ವಾಕಿಂಗ್ ಪಾಥ್ ನಿರ್ಮಾಣಕ್ಕೆ 157 ಕೋಟಿ, ಯುಜಿಡಿ ಕಾರ್ಯಕ್ಕೆ 22 ಕೋಟಿ ರು. ಅನುದಾನ ಬಂದಿದೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶೇಷ ಅನುದಾನ ಕೊಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ರಾಮನಗರ ಟೌನ್‌ನಲ್ಲಿ 8 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಈಗ ಸಂಸದ ಡಿ.ಕೆ.ಸುರೇಶ್ ರವರ ಸೂಚನೆ ಮೇರೆಗ 22 ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ನಗರ ವ್ಯಾಪ್ತಿಯಲ್ಲಿ 20 ಬೋರ್ ವೆಲ್ ಗಳನ್ನು ಕೊರೆಸಲಾಗುತ್ತಿದೆ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
24ಕೆಆರ್ ಎಂಎನ್ 4.ಜೆಪಿಜಿ