ಪ್ರಯಾಣಿಕರೇ ಗಮನಿಸಿ: ನಾಗಸಂದ್ರ-ಮಾದಾವರ ಮೆಟ್ರೋ ಮತ್ತೆ ವಿಳಂಬ

KannadaprabhaNewsNetwork | Published : Jan 15, 2024 1:45 AM

ಸಾರಾಂಶ

ಪ್ರಯಾಣಿಕರೇ ಗಮನಿಸಿ: ನಾಗಸಂದ್ರ-ಮಾದಾವರ ಮೆಟ್ರೋ ಮತ್ತೆ ವಿಳಂಬ; 7 ವರ್ಷದಿಂದ ನಡೆಯುತ್ತಿದೆ 3.7 ಕಿ.ಮೀ. ಉದ್ದದ ಕಾಮಗಾರಿ । ಹಳಿ ಅಳವಡಿಕೆ ಬಾಕಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋದ ಅತ್ಯಂತ ವಿಳಂಬ ಕಾಮಗಾರಿ ಎಂದು ಹಣೆಪಟ್ಟಿ ಕಟ್ಟಿಕೊಂಡ ಹಸಿರು ಕಾರಿಡಾರ್‌ನ ನಾಗಸಂದ್ರ- ಮಾದಾವರ ನಡುವಿನ (3.7 ಕಿ.ಮೀ.) ಮೆಟ್ರೋ ಮಾರ್ಗ ಕಾಮಗಾರಿ ಸಂಪೂರ್ಣಗೊಂಡು ಜನ ಸಂಚರಿಸಲು ಇನ್ನೂ ಆರು ತಿಂಗಳು ಕಾಯಬೇಕಾಗಿದೆ.

ಬರೋಬ್ಬರಿ ಏಳು ವರ್ಷದಿಂದ ನಡೆಯುತ್ತಿರುವ ಕಾಮಗಾರಿ ಇದಾಗಿದೆ. ಬರುವ ಜೂನ್‌ನಲ್ಲಿ ಈ ಮಾರ್ಗದ ಪ್ರಾಯೋಗಿಕ ಸಂಚಾರ ನಡೆಸಿ ಜುಲೈನಲ್ಲಿ ಪ್ರಯಾಣಿಕ ಸುರಕ್ಷತಾ ಪರೀಕ್ಷೆಗಾಗಿ ಸಿಎಂಆರ್‌ಎಸ್‌ಗೆ ಆಹ್ವಾನ ನೀಡಲಾಗುವುದು. ಅದೇ ತಿಂಗಳಾಂತ್ಯಕ್ಕೆ ಮೆಟ್ರೋ ರೈಲು ವಾಣಿಜ್ಯ ಸಂಚಾರ ಆರಂಭಿಸುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಏಪ್ರಿಲ್‌ಗೆ ಕಾಮಗಾರಿ ಮುಗಿಸುವಂತೆ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ, ಪ್ರಸ್ತುತ ಸಿವಿಲ್‌ ಕಾಮಗಾರಿ ಪೂರ್ಣಗೊಂಡಿದ್ದು, ಟ್ರ್ಯಾಕ್‌ ಅಳವಡಿಕೆ ಕೆಲಸಗಳು ನಡೆಯುತ್ತಿವೆ. ಈ ಕೆಲಸ ಇನ್ನು ಎರಡೂವರೆ ತಿಂಗಳಲ್ಲಿ ಮುಗಿಯಲಿವೆ. ಇದಾದ ಬಳಿಕ ಸಿಗ್ನಲಿಂಗ್‌ ಕೆಲಸ ಅಂತಿಮಗೊಳಿಸಿ ಸಿಎಂಆರ್‌ಎಸ್‌ ತಪಾಸಣೆಗೆ ಆಹ್ವಾನ ನೀಡುವ ನಿರೀಕ್ಷೆಯಿದೆ. ಆದರೆ, ನಡುವೆ ಲೋಕಸಭಾ ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಈ ವೇಳೆ ನಾಗಸಂದ್ರ-ಮಾದವಾರ ಮೆಟ್ರೋ ಮಾರ್ಗ ಉದ್ಘಾಟನೆ ಅನುಮಾನವಾಗಿದೆ.

2017ರ ಮೇನಲ್ಲಿ ಈ ಮಾರ್ಗದ ಚಾಲನೆ ದೊರಕಿತ್ತು. ಭೂಸ್ವಾಧೀನ, ಕಾಮಗಾರಿಗೆ ₹964 ಕೋಟಿ ಮೀಸಲಾಗಿತ್ತು. ಭೂಸ್ವಾದೀನ ಪ್ರಕ್ರಿಯೆ ಕಗ್ಗಂಟು ಇತ್ಯರ್ಥಕ್ಕೆ ನಾಲ್ಕು ವರ್ಷ ಸೇರಿದಂತೆ ಬಳಿಕ ವಿಳಂಬ ಕಾಮಗಾರಿ ಸಂಬಂಧ ಗುತ್ತಿಗೆದಾರ ಕಂಪನಿ ಬದಲಾವಣೆ, ಕೋವಿಡ್‌ ಕಾರಣಕ್ಕೆ ಒಟ್ಟಾರೆ ಮಾರ್ಗದ ಕಾಮಗಾರಿ ನಿಧಾನವಾಗಿದೆ.

ಈ ಮಾರ್ಗದಲ್ಲಿ ನಾಗಸಂದ್ರ, ಚಿಕ್ಕಬಿದರಕಲ್ಲು, ಮಂಜುನಾಥ ನಗರ, ಮಾದಾವರದಲ್ಲಿ ಎಲಿವೆಟೆಡ್‌ ನಿಲ್ದಾಣಗಳನ್ನು ಹೊಂದಿರಲಿದೆ. ಇಲ್ಲಿ ರೈಲು ಸಂಚಾರದಿಂದ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ. ನೆಲಮಂಗಲದಿಂದ ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ನಗರಕ್ಕೆ ಬರುವ ಜನ ಪ್ರಸ್ತುತ ನಾಗಸಂದ್ರಕ್ಕೆ ಬಂದು ಮೆಟ್ರೋ ಏರುತ್ತಿದ್ದಾರೆ. ಮಾದಾವರವರೆಗೆ ಮೆಟ್ರೋ ತಲುಪುವುದರಿಂದ ಇನ್ನು ಮೂರು ಕಿಮೀ ಮೊದಲೇ ಮೆಟ್ರೋ ಸೇವೆ ಸಿಗಲಿದೆ.

--

ಬಾಕ್ಸ್‌

ಸ್ತ್ರೀಯರಿಗೆ 2 ಬೋಗಿ

ಮೀಸಲು ಸದ್ಯಕ್ಕಿಲ್ಲ

ಇನ್ನು, ಈಚೆಗೆ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾದ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ಎರಡನೇ ಬೋಗಿ ಮೀಸಲಿಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಪೀಕ್‌ ಅವರ್‌ನಲ್ಲಿ ನಿಲ್ದಾಣ ಹಾಗೂ ರೈಲಿನೊಳಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಮಹಿಳೆಯರ ಜೊತೆಗೆ ಅನುಚಿತವಾಗಿ ವರ್ತಿಸಿದ ಮೂರ್ನಾಲ್ಕು ಪ್ರಕರಣ ಒಂದೇ ತಿಂಗಳಲ್ಲಿ ಘಟಿಸಿದೆ.

ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು ಸದ್ಯಕ್ಕೆ ಅಂತಹ ಯೋಚನೆ ಮಾಡಿಲ್ಲ. ಈಗಾಗಲೇ ಒಂದು ಬೋಗಿಯನ್ನು ಮಹಿಳೆಯರಿಗೆ ಮೀಸಲಿಟ್ಟಿದ್ದು, ಹೆಚ್ಚಿನ ಮಹಿಳೆಯರು ಇದರ ಪ್ರಯೋಜನ ಪಡೆಯಬೇಕು. ರೈಲು, ನಿಲ್ದಾಣದಲ್ಲಿ ಯಾವುದೇ ಸಮಸ್ಯೆ ಆದರೆ ಗ್ರಾಹಕರ ಕೇಂದ್ರವನ್ನು ಸಂಪರ್ಕಿಸಿ. ಹೆಚ್ಚಿನ ಇನ್ನೊಂದು ಬೋಗಿ ಮೀಸಲಿಡುವ ಬಗ್ಗೆ ಮುಂದೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

Share this article