ಶಿವಮೊಗ್ಗ: ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳು ದೇವಸ್ಥಾನಗಳಾಗಿದ್ದವು. ಈ ಮಸೀದಿಗಳನ್ನು ಒಡೆಯುತ್ತೇವೆ ಎಂದು ಕೆನರಾ ಸಂಸದ ಅನಂತ ಕುಮಾರ ಹೆಗಡೆ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ. ಭಾನುವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದುಗಳ ದೇವಸ್ಥಾನ ಒಡೆದು ಮಸೀದಿ ಕಟ್ಡಿದ್ದಾರೆ. ಈಗ ಮಸೀದಿ ಒಡೆದು ದೇವಸ್ಥಾನ ಕಟ್ಟುತ್ತೇವೆ ಎಂದಿದ್ದಾರೆ. ಇದನ್ನು ಎಲ್ಲ ಭಾರತೀಯರು ಸ್ವಾಗತ ಮಾಡಬೇಕು ಎಂದರು.
ಸಿದ್ದರಾಮಯ್ಯ ಮೊದಲು ನಾನು ಅಯೋಧ್ಯೆಯ ರಾಮಮಂದಿರಕ್ಕೆ ಹೋಗಲ್ಲ ಅಂದಿದ್ದರು. ಆಮೇಲೆ, ಜ.22ರ ನಂತರ ಹೋಗ್ತೇನೆ ಅಂದಿದ್ದರು. ಈಗ ಮತ್ತೆ ನಾನು ರಾಮಮಂದಿರಕ್ಕೆ ಹೋಗಲ್ಲ, ಹೋಗ್ತೀನಿ ಅಂತಾ ಹೇಳಿಲ್ಲ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರು ನಿಮಿಷಕ್ಕೊಂದು ಮಾತನಾಡ್ತಾರೆ. ಅವರ ಹೆಸರಿನಲ್ಲಿ ಸಿದ್ದ, ರಾಮ ಎರಡೂ ಇದೆ. ಅವರು ರಾಮಮಂದಿರಕ್ಕೆ ಹೋಗಿ, ಪಾಪ ಕಳೆದುಕೊಂಡು ಬರಲಿ ಎಂದು ಸಲಹೆ ನೀಡಿದರು.ರಾಮಮಂದಿರ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿಲ್ಲ. ಆದರೆ, ಕಾಂಗ್ರೆಸ್‌ನವರು ಇದು ಬಿಜೆಪಿ ರಾಮಮಂದಿರ ಎಂದು ಬಿಂಬಿಸುತ್ತಿದ್ದಾರೆ. ಇಡೀ ಪ್ರಪಂಚದ ಹಿಂದುಗಳನ್ನು ಒಂದು ಮಾಡಲು ಶ್ರೀರಾಮ ಇರೋದು. ಇದರಲ್ಲಿ ಯಾವ ರೀತಿಯ ರಾಜಕಾರಣ ಮಾಡ್ತಿದ್ದೇವೆ ಅಂತಾ ಅವರು ಹೇಳಿದ್ರೆ ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡ್ತೇವೆ ಎಂದರು.
ಮಗನಿಗೆ ಹಾವೇರಿ ಟಿಕೆಟ್ ಕೇಳಿದ್ದೇನೆ: ‘ನನ್ನ ಮಗನಿಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಡಿ ಅಂತಾ ಕೇಳಿದ್ದೇನೆ. ಟಿಕೆಟ್ ಸಿಗುವ ವಿಶ್ವಾಸ ಇದೆ’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ನಾನು ದೆಹಲಿಗೆ ಹೋಗಿದ್ದೆ. ಅಮಿತ್ ಶಾ, ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿದ್ದೇನೆ. ಯತ್ನಾಳ್, ಸೋಮಣ್ಣ ಅವರನ್ನು ಕರೆದು ಮಾತನಾಡಿ ಅಂತಾ ಹೇಳಿದ್ದೇನೆ. ನನಗೆ ನೀವು ಚುನಾವಣೆಗೆ ನಿಲ್ಲಬೇಡಿ ಅಂದಿದ್ದರು. ಚುನಾವಣೆಗೆ ಸ್ಪರ್ಧೆ ಮಾಡಲಿಲ್ಲ, ಆಗ ಪಕ್ಷ ಸಂಘಟನೆ ಮಾಡ್ತೀನಿ, ಜವಾಬ್ದಾರಿ ಕೊಡಿ ಅಂದಿದ್ದೆ. ಆದರೆ, ನನಗೆ ಇದುವರೆಗೆ ಯಾವುದೇ ಜವಾಬ್ದಾರಿ ಕೊಟ್ಟಿಲ್ಲ ಎಂದರು.