ಮಳಿಗೆಗಳ ಬಾಡಿಗೆ ಬಾಕಿ ವಸೂಲಿಗೆ ಸೂಚನೆ

KannadaprabhaNewsNetwork |  
Published : Jun 27, 2025, 12:48 AM IST
ಸಿಕೆಬಿ-4  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ   ನಡೆದ “ಕ್ರೀಡಾಂಗಣಗಳ ಅಭಿವೃದ್ಧಿ ಕುರಿತ” ಸಭೆಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು | Kannada Prabha

ಸಾರಾಂಶ

ಜಿಲ್ಲಾ ಕೇಂದ್ರದ ಕ್ರೀಡಾಂಗಣ ಸೇರಿದಂತೆ ತಾಲೂಕು ಕೇಂದ್ರಗಳ ಕ್ರೀಡಾಂಗಣಗಳನ್ನು ಅಭಿವೃದ್ಧಿ ಮಾಡಲು ಕ್ರಮವಹಿಸಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿನ ಸರ್ ಎಂ.ವಿ ಕ್ರೀಡಾಂಗಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ 69 ಕೋಟಿ ವೆಚ್ಚದಲ್ಲಿ ನಿರ್ಮಿಸಲಿದ್ದು, ಮೊದಲ ಹಂತದ ಪೆವಿಲಿಯನ್ ಬ್ಲಾಕ್ ನಿರ್ಮಿಸಲು 10 ಕೋಟಿ ಹಣ ಮಂಜೂರಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಂತಾಮಣಿ ನಗರದ ಝಾನ್ಸಿ ರಾಣಿ ಲಕ್ಷೀ ಬಾಯಿ ಕ್ರೀಡಾಂಗಣದ ಅಧೀನದ ಮಳಿಗೆಗಳ ಮಾಲೀಕರು ನೀಡಬೇಕಾದ 1.35 ಕೋಟಿ ಬಾಕಿ ಬಾಡಿಗೆಯನ್ನು ಕಡ್ಡಾಯವಾಗಿ ವಸೂಲಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕ್ರೀಡಾಂಗಣಗಳ ಅಭಿವೃದ್ಧಿ ಕುರಿತು ನಡೆದ ಸಭೆಯ ಪಾಲ್ಗೊಂಡ ಬಳಿಕ ಸುದ್ದಿಗಾರರೂಂದಿಗೆ ಮಾತನಾಡಿದರು.

ಅವಧಿ ಮುಗಿದ ಮಳಿಗೆ ಹರಾಜು

ಚಿಂತಾಮಣಿ ನಗರದ ಝಾನ್ಸಿರಾಣಿ ಲಕ್ಷಿಬಾಯಿ ಕ್ರೀಡಾಂಗಣದ ಕೆಲವು ಮಳಿಗೆಗಳಿಂದ ಸುಮಾರು 1.35 ಕೋಟಿ ಬಾಡಿಗೆಯನ್ನು ವಸೂಲಿ ಮಾಡುವುದು ಜೊತೆಗೆ ಈ ಹಣವನ್ನು ಕ್ರೀಡಾಂಗಣದ ಅಭಿವೃದ್ಧಿಗೆ ಬಳಸಿ ಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಈ ಕಾರ್ಯ ಕಡ್ಡಾಯವಾಗಿ ಆಗಲೇಬೇಕು. ಜೊತೆಗೆ 193 ಮಳಿಗೆಗಳ ಪೈಕಿ ಹರಾಜು ಅವಧಿ ಮುಗಿದಿರುವ ಮಳಿಗೆಗಳನ್ನು ಮರು ಹರಾಜು ಮಾಡಲು ಸೂಚನೆ ನೀಡಿರುವುದಾಗಿ ತಿಳಿಸಿದರು.

ಜಿಲ್ಲಾ ಕೇಂದ್ರದ ಕ್ರೀಡಾಂಗಣ ಸೇರಿದಂತೆ ತಾಲೂಕು ಕೇಂದ್ರಗಳ ಕ್ರೀಡಾಂಗಣಗಳನ್ನು ಅಭಿವೃದ್ಧಿ ಮಾಡಲು ಕ್ರಮವಹಿಸಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿನ ಸರ್ ಎಂ.ವಿ ಕ್ರೀಡಾಂಗಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ 69 ಕೋಟಿ ವೆಚ್ಚದಲ್ಲಿ ನಿರ್ಮಿಸಲಿದ್ದು, ಮೊದಲ ಹಂತದ ಪೆವಿಲಿಯನ್ ಬ್ಲಾಕ್ ನಿರ್ಮಿಸಲು 10 ಕೋಟಿ ಹಣ ಮಂಜೂರಾಗಿದೆ ಎಂದರು.

ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ

ಚಿಂತಾಮಣಿಯ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲು 9 ಕೋಟಿ ಮಂಜೂರಾಗಿದೆ. ಚಿಂತಾಮಣಿ ನಗರದ ಲೋಕೋಪಯೋಗಿ ಇಲಾಖೆಯ ಬಳಿ 9 ಎಕರೆ ಜಾಗದಲ್ಲಿ ನೈಜ ಹುಲ್ಲು ಹಾಸಿನ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು 7 ಕೋಟಿ ಅನುದಾನ ಮಂಜೂರಾಗಿದೆ. ಈ ಎಲ್ಲಾ ಕಾರ್ಯಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.ಸೀಟ್‌ ಬ್ಲಾಕ್‌ ದಂಧೆ: ದೂರು

ಸಿಇಟಿಯಲ್ಲಿ ಪಾಸಾಗಿ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಪೋಲಿಸರಿಗೆ ದೂರು ನೀಡಲಾಗಿದೆ. ಸೀಟ್ ಬ್ಲಾಕಿಂಗ್‌ನಿಂದ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಪ್ರತ್ಯೇಕ ಆ್ಯಪ್ ಗಳಿಂದ ತಂತ್ರಜ್ಞಾನ ಬಳಸಿ ಈ ಧಂದೆಯಲ್ಲಿ ಶಾಮೀಲಾಗಿದ್ದ ಗುತ್ತಿಗೆ ನೌಕರರನನ್ನು ವಜಾ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್, ಡೀಸಿ ಪಿ.ಎನ್ ರವೀಂದ್ರ, ಎಸ್ಪಿ ಕುಶಾಲ್ ಚೌಕ್ಸೆ, ಅಪರ ಡೀಸಿ ಡಾ. ಎನ್.ಭಾಸ್ಕರ್, ಎಸಿ ಡಿ.ಹೆಚ್.ಅಶ್ವಿನ್ ಹಾಗೂ ಇತರ ಅಧಿಕಾರಿಗಳು ಇದ್ದರು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ