ಪ್ರಾಂಶುಪಾಲರನ್ನು ಬೆಂಗಳೂರಿಗೆ ಕರೆಸಿಕೊಂಡು ಚರ್ಚಿಸಿದ ಆಯುಕ್ತರು
ನಾಳೆಯಿಂದಲೇ ಬೋಧಕೇತರ ಸಿಬ್ಬಂದಿ ನೇಮಕ ಪ್ರಕ್ರಿಯೆ ಶುರುಮಂಜುನಾಥ ಕೆ.ಎಂ.
ಕನ್ನಡಪ್ರಭ ವಾರ್ತೆ ಬಳ್ಳಾರಿಇಲ್ಲಿನ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಮಸ್ಯೆಗೆ ಸಂಬಂಧಿಸಿದಂತೆ ಕನ್ನಡಪ್ರಭ ಆರಂಭಿಸಿದ ಸರಣಿ ವರದಿಗೆ ಸ್ಪಂದಿಸಿರುವ ಆಯುಷ್ ಇಲಾಖೆಯ ಆಯುಕ್ತರು, ಕಾಲೇಜಿನ ಪ್ರಾಂಶುಪಾಲರನ್ನು ಬೆಂಗಳೂರಿಗೆ ಕರೆಸಿಕೊಂಡು ಚರ್ಚಿಸಿದ್ದು, ಹೊರಗುತ್ತಿಗೆ ಆಧಾರದಲ್ಲಿ ಬೋಧಕೇತರ ಸಿಬ್ಬಂದಿ ನೇಮಕ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಸಿಬ್ಬಂದಿ ಕೊರತೆಯಿಂದಾಗಿಯೇ ಬಿಎಎಂಎಸ್ ಕೋರ್ಸ್‌ಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯ ಕಡಿತಗೊಳಿಸಿರುವ ಭಾರತೀಯ ವೈದ್ಯಪದ್ಧತಿಗಳ ರಾಷ್ಟ್ರೀಯ ಆಯೋಗಕ್ಕೆ ಪತ್ರ ಬರೆಯುವುದು ಸೇರಿದಂತೆ, ಬೋಧಕೇತರ ಸಿಬ್ಬಂದಿ ಸಮಸ್ಯೆ ನಿವಾರಣೆಗೆ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಕೂಡಲೇ ಕ್ರಮ ವಹಿಸಬೇಕು. ಒಳ ಮೀಸಲಾತಿ ಆಗುವವರೆಗೆ ಯಾವುದೇ ನೇಮಕಾತಿ ಮಾಡಲು ಬರುವುದಿಲ್ಲವಾದ್ದರಿಂದ ಬೋಧಕ ಸಿಬ್ಬಂದಿ ವಿಚಾರದಲ್ಲಿ ಯಾವುದೇ ನಿಲುವು ತೆಗೆದುಕೊಳ್ಳಲು ಬರುವುದಿಲ್ಲ. ಹೀಗಾಗಿ ಬೋಧಕೇತರ ಸಿಬ್ಬಂದಿ ಸಮಸ್ಯೆ ದೊಡ್ಡ ಪ್ರಮಾಣದಲ್ಲಿದ್ದು ಅದನ್ನು ಕೂಡಲೇ ಸರಿಪಡಿಸಿ. ಇದರಿಂದ ಕಡಿತಗೊಂಡಿರುವ ಬಿಎಎಂಎಸ್ ಪ್ರವೇಶಾತಿ ಸಂಖ್ಯೆಯ ಸಮಸ್ಯೆಯನ್ನು ನೀಗಿಸಲು ಸಾಧ್ಯವಿದೆ. ಫಿಜಿಯೋಥೆರಪಿ ಹಾಗೂ ಯೋಗ-ನ್ಯಾಚರೋಪತಿ ವಿಭಾಗದ ಇಬ್ಬರು ಬೋಧಕ ಸಿಬ್ಬಂದಿಯ ವರ್ಗಾವಣೆಯನ್ನು ತಡೆ ಹಿಡಿದು ಸದ್ಯಕ್ಕೆ ಮುಂದುವರಿಸಿ ಎಂದು ಆಯುಕ್ತ ವಿಪಿನ್ ಸಿಂಗ್ ಅವರು ತಿಳಿಸಿದ್ದು, ಇದರಿಂದ ಈ ಎರಡು ವಿಭಾಗಗಳು ಮುಚ್ಚುವ ಆತಂಕದಿಂದ ದೂರವಾದಂತಾಗಿದೆ.ಟೆಕ್ನಿಷಿಯನ್ ವರ್ಗಾವಣೆಯಿಂದ ಕಳೆದ ಒಂದು ತಿಂಗಳಿನಿಂದ ಮುಚ್ಚಿರುವ ಸುಮಾರು ₹40 ಲಕ್ಷ ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನದ ಎಕ್ಸ್-ರೇ ಮಿಷನ್‌ಗೆ ಸಂಬಂಧಿಸಿದಂತೆ ಕೂಡಲೇ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಇಲ್ಲವೇ ಜಿಲ್ಲಾ ಆರೋಗ್ಯ ಅಧಿಕಾರಿಗಳ ಜೊತೆ ಚರ್ಚಿಸಿ, ಓರ್ವ ಸಿಬ್ಬಂದಿಯನ್ನು ನಿಯೋಜಿಸುವಂತೆ ಮನವಿ ಮಾಡಿಕೊಳ್ಳಿ ಎಂದು ಪ್ರಾಂಶುಪಾಲರಿಗೆ ಕಟ್ಟುನಿಟ್ಟಾಗಿ ಹೇಳಿದ್ದಾರೆ.
ಹಿರಿಯ ವೈದ್ಯಾಧಿಕಾರಿ ನೇಮಕ ಮಾಡಿಕೊಳ್ಳಲು ವೈದ್ಯಾಧಿಕಾರಿಗಳೇ ಪ್ರಮೋಷನ್ ಆಗಬೇಕು. ಹೀಗಾಗಿ 65 ಜನರ ಪ್ರಮೋಷನ್‌ಗೆ ಸರ್ಕಾರಕ್ಕೆ ಕಳಿಸಿಕೊಡಲಾಗಿದ್ದು ಕೂಡಲೇ ಹಿರಿಯ ವೈದ್ಯಾಧಿಕಾರಿ ಕೊರತೆ ನೀಗುವ ಸಾಧ್ಯತೆಗಳಿವೆ. ಅಲ್ಲಿಯವರೆಗೆ ನಿಮ್ಮ ಹಂತದಲ್ಲಾಗಬೇಕಾದ ಬೋಧಕೇತರ ಸಿಬ್ಬಂದಿ ಸಮಸ್ಯೆಗೆ ಸಂಬಂಧಿಸಿದಂತೆ ಕೂಡಲೇ ಕ್ರಮ ವಹಿಸಿ ಎಂದು ಆಯುಕ್ತರು ತಿಳಿಸಿದ್ದಾರೆ.ಪ್ರಾಂಶುಪಾಲರ ಜೊತೆ ಚರ್ಚೆಯ ವೇಳೆ ಕನ್ನಡಪ್ರಭ ವರದಿಯ ಬಗ್ಗೆ ಶ್ಲಾಘಿಸಿರುವ ಆಯಕ್ತರು, ಬಿಎಎಂಎಸ್ ಪ್ರವೇಶಾತಿ ಸಂಖ್ಯೆಗಳು ಕಡಿತವಾಗದಂತೆ ಭಾರತೀಯ ವೈದ್ಯಪದ್ಧತಿಗಳ ರಾಷ್ಟ್ರೀಯ ಆಯೋಗ (ಎನ್‌ಸಿಐಎಂ)ಗೆ ಪತ್ರ ಬರೆಯಿರಿ. ಇನ್ನೂ ಹದಿನೈದು ದಿನ ಸಮಯ ಇರುವುದರಿಂದ ಕೂಡಲೇ ಬೋಧಕೇತರ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಸದನದಲ್ಲಿ ಧ್ವನಿ ಎತ್ತುವೆ
ಬಳ್ಳಾರಿಯ ಸರ್ಕಾರಿ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಸಮಸ್ಯೆಗಳ ಕುರಿತು ಬೆಳಕುಚೆಲ್ಲಿರುವ ಕನ್ನಡಪ್ರಭ ವರದಿಯನ್ನು ನಿತ್ಯವೂ ಓದುತ್ತಿದ್ದೇನೆ. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಸರ್ಕಾರವನ್ನು ಪ್ರಶ್ನಿಸುವುದಾಗಿ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ತಿಳಿಸಿದ್ದಾರೆ.ಕನ್ನಡಪ್ರಭ ಜೊತೆ ಮಾತನಾಡಿದ ಅವರು, ಪತ್ರಿಕೆಯ ಸರಣಿ ವರದಿ ಕಾಲೇಜಿನಲ್ಲಿ ಒಟ್ಟಾರೆ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದೆ. ಎಲ್ಲವನ್ನೂ ಅಧ್ಯಯನ ಮಾಡಿದ್ದಾನೆ. ಬಿಎಎಂಎಸ್ ಪ್ರವೇಶಾತಿ ಸಂಖ್ಯೆಯನ್ನು ಕಡಿತಗೊಳಿಸಿರುವುದು ತೀವ್ರ ಬೇಸರ ಮೂಡಿಸಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಕನ್ನಡಪ್ರಭ ಸರಣಿ ವರದಿ ಕುರಿತು ಮಾತನಾಡಿದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಸಿರಿಗೇರಿ ಪನ್ನರಾಜ್, ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಂತೆ ಜಿಲ್ಲೆಯ ಶಾಸಕರ ಜೊತೆ ಮಾತನಾಡುವೆ. ಸರ್ಕಾರ ಕ್ರಮ ವಹಿಸದೇ ಹೋದರೆ ಹೋರಾಟ ರೂಪಿಸುವ ಕುರಿತು ಸ್ಥಳೀಯ ಸಂಘಟನೆಗಳ ಜೊತೆ ಚಚಿಸಲಾಗುವುದು ಎಂದು ಹೇಳಿದರು.