ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಕುಡಿಯುವ ನೀರಿನ ತೊಂದರೆ ಉದ್ಭವಿಸುವ ಗ್ರಾಮಗಳ ಪಟ್ಟಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಿದ್ಧಪಡಿಸಿ ನೀರು ಪೂರೈಕೆಗೆ ತಕ್ಷಣವೇ ಕಾರ್ಯೋನ್ಮುಖರಾಗುವಂತೆ ತಹಸೀಲ್ದಾರ್ ಡಾ.ನಾಗವೇಣಿ ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೇವಲ ಬಾಯಿ ಮಾತಿನ ಭರವಸೆ ಬೇಡ. ನಿಖರ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ಗ್ರಾಮಗಳ ವ್ಯಾಪ್ತಿಯಲ್ಲಿ ಬೋರ್‌ವೆಲ್‌ಗಳ ಪಟ್ಟಿ ಸಿದ್ಧಪಡಿಸಬೇಕು. ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಹೊಸ ಬೋರ್‌ವೆಲ್ ಕೊರೆದು, ಪೈಪ್‍ಲೈನ್ ಅಳವಡಿಸಿ ನೀರು ಸರಬರಾಜು ಮಾಡವ ಕುರಿತು ವಿಸ್ತೃತ ಯೋಜನಾ ವರದಿಯನ್ನು ನೀಡಬೇಕು. ಇದಕ್ಕೆ ಪಿಡಿಓಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್‌ಗಳ ಸಹಾಯ ಪಡೆದುಕೊಳ್ಳುವಂತೆ ಸೂಚಿಸಿದರು.
ಹಲವು ಗ್ರಾಮಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಎಷ್ಟು ಬಾರಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಿವೆ. ಬೋರ್‌ವೆಲ್‌ಗಳಲ್ಲಿ ದೊರಕುವ ನೀರಿನ ಪ್ರಮಾಣ ಏನು ಎಂಬುದರ ಬಗ್ಗೆ ದೃಢೀಕರಣ ನೀಡಬೇಕು. ಈಗಾಗಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ನೀಡಲಾಗಿದೆ. ನಿಮ್ಮ ವ್ಯಾಪ್ತಿಯ ಕಂದಾಯ ನಿರೀಕ್ಷಕರ ಮೂಲಕ ಈ ಟ್ಯಾಂಕರ್‌ಗಳನ್ನು ಪಡೆದುಕೊಳ್ಳುವಂತೆ ಹೇಳಿದರು.ಪ್ರಸ್ತುತ ಬರಪರಿಸ್ಥಿತಿ ಉಂಟಾಗಿದೆ. ಕೆಲಸ ದೊರಕದೆ ಯಾರು ಸಹ ಗುಳೆ ಹೋಗದಂತೆ ನೋಡಿಕೊಳ್ಳಬೇಕು. ನರೇಗಾದಡಿ ಗ್ರಾಮದಲ್ಲಿಯೇ ಕೆಲಸವನ್ನು ಸೃಜಿಸಿ, ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು. ಕುಡಿಯುವ ನೀರು ಸರಬಾಜಿನಲ್ಲಿ ವ್ಯತ್ಯಯ ಉಂಟಾಗಬಾರದು. ಜಾನುವಾರುಗಳಿಗೂ ಕುಡಿಯುವ ನೀರು ಕಲ್ಪಿಸುವ ಕೆಲಸ ಮಾಡುವಂತೆ ತಾಪಂ ಇಓ ಅನಂತರಾಜು ಪಿಡಿಓಗಳಿಗೆ ನಿರ್ದೇಶನ ನೀಡಿದರು.