ಹರಿಹರ ಕ್ರೀಡಾಂಗಣ ಮಳಿಗೆಗಳ ಖಾಲಿ ಮಾಡಲು ನೋಟಿಸ್ ಜಾರಿ

KannadaprabhaNewsNetwork | Published : Oct 2, 2024 1:04 AM

ಸಾರಾಂಶ

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಇರುವ ವಾಣಿಜ್ಯ ಸಂಕೀರ್ಣ ಮಳಿಗೆಗಳನ್ನು ಅ.10ರೊಳಗೆ ಹಾಲಿ ಬಾಡಿಗೆದಾರರು ಖಾಲಿ ಮಾಡಬೇಕು. ಅಲ್ಲದೇ, ಅದೇ ದಿನ ತಾಲೂಕು ಕ್ರೀಡಾಂಗಣ ಕಚೇರಿಯಲ್ಲಿ ಮಳಿಗೆಗಳ ಮರುಹರಾಜು ಮಾಡಲಾಗುವುದು.

- ಕ್ರೀಡಾ ಇಲಾಖೆಯಿಂದ ವಾಣಿಜ್ಯ ಸಂಕೀರ್ಣ ಮಳಿಗೆಗಳ ಮರುಹರಾಜಿಗೆ ಟೆಂಡರ್‌

- ನೋಟಿಸ್‌ ಪಡೆಯದವರ ಮಳಿಗೆಗೆ ನೋಟಿಸ್‌ ಅಂಟಿಸಿ ಇಲಾಖೆಯಿಂದ ಚಿತ್ರೀಕರಣ - - - ಕನ್ನಡಪ್ರಭ ವಾರ್ತೆ ಹರಿಹರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಇರುವ ವಾಣಿಜ್ಯ ಸಂಕೀರ್ಣ ಮಳಿಗೆಗಳನ್ನು ಅ.10ರೊಳಗೆ ಹಾಲಿ ಬಾಡಿಗೆದಾರರು ಖಾಲಿ ಮಾಡಬೇಕು. ಅಲ್ಲದೇ, ಅದೇ ದಿನ ತಾಲೂಕು ಕ್ರೀಡಾಂಗಣ ಕಚೇರಿಯಲ್ಲಿ ಮಳಿಗೆಗಳ ಮರುಹರಾಜು ಮಾಡಲಾಗುವುದು.

ನಗರದ ಗಾಂಧಿ ಮೈದಾನದ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದಿರುವ ಬಾಡಿಗೆದಾರರು ಅವಧಿ ಮುಗಿದಿದ್ದರೂ, ರಾಜಕೀಯ ಪ್ರಭಾವ ಬಳಸಿ, ಹಲವು ವರ್ಷಗಳಿಂದ ಮರುಹರಾಜು ಪ್ರಕ್ರಿಯೆ ನಡೆಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಮರುಹರಾಜಿಗೆ ವಿವಿಧ ಸಂಘ ಸಂಸ್ಥೆಗಳು ಒತ್ತಾಯಿಸಿದ್ದವು. ಇದರ ಪರಿಣಾಮ ಕಳೆದ ವರ್ಷ ಡಿ.23ಕ್ಕೆ ಮಳಿಗೆಗಳ ಮರು ಹರಾಜು ಮಾಡಲಾಗುವುದು ಎಂದು ಕ್ರೀಡಾ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಅನಂತರ ನ್ಯಾಯಾಲಯದ ಕಾರಣ ಹೇಳಿ ಹರಾಜು ಪ್ರಕ್ರಿಯೆ ನಿಲ್ಲಿಸಲಾಗಿತ್ತು.

ನೋಟಿಸ್‌ ಅಂಟಿಸಿ ಚಿತ್ರೀಕರಣ:

ಇದಕ್ಕೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಕ್ರೀಡಾ ಇಲಾಖೆ ಅಧಿಕಾರಿಗಳ ವಿರುದ್ಧ ಹೋರಾಟ ಪ್ರಾರಂಭಿಸಿದ್ದರು. ಪರಿಣಾಮವಾಗಿ ಇಲಾಖೆ ಸಹಾಯಕ ನಿರ್ದೇಶಕರು ಈ ಅಕ್ಟೋಬರ್‌ 10ರಂದು ಮಳಿಗೆಗಳ ಮರುಹರಾಜು ಪ್ರಕಟಣೆ ಮೂಲಕ ಅಧಿಕೃತ ಸೂಚನೆ ಹೊರಡಿಸಿದ್ದಾರೆ. ಹಾಲಿ ಇರುವ ಬಾಡಿಗೆದಾರರಿಗೆ ಅ.10ರೊಳಗೆ ಖಾಲಿ ಮಾಡಲು ಅಧಿಕಾರಿಗಳು ಕೆಲ ದಿನಗಳ ಹಿಂದೆ ಖುದ್ದಾಗಿ ಭೇಟಿ ನೀಡಿ, ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಪಡೆಯಲು ನಿರಾಕರಿಸಿದವರ ಮಳಿಗೆಗೆ ನೋಟಿಸ್ ಅಂಟಿಸಿ ಚಿತ್ರೀಕರಣ ಮಾಡಲಾಗಿದೆ ಎಂದು ಕ್ರೀಡಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

- - -

ಬಾಕ್ಸ್‌-1* ಡಿ.ಡಿ. ತೆಗೆಸಲು ಕಾಲಾವಕಾಶ ನೀಡಿ ಹರಾಜು ಪ್ರಕಟಣೆ ಹೊರಡಿಸಿರುವ ಅಧಿಕಾರಿಗಳು ಪ್ರತಿ ಮಳಿಗೆಗಳಿಗೆ ಪ್ರತ್ಯೇಕ ₹1 ಲಕ್ಷ ಠೇವಣಿ ಹಾಗೂ ಟೆಂಡರ್ ಅರ್ಜಿ ಮೊತ್ತ ₹500 ನಿಗದಿ ಮಾಡಿದ್ದಾರೆ. ಅ.1ರಿಂದ 4ರವರೆಗೆ ಕೇವಲ ನಾಲ್ಕು ದಿನಗಳಲ್ಲಿ ಮಾತ್ರ ಅರ್ಜಿ ಪಡೆಯಲು ಕಾಲಾವಕಾಶ ನೀಡಿದ್ದಾರೆ. ಅಕ್ಟೋಬರ್‌ 10ಕ್ಕೆ ತಾಲೂಕು ಕ್ರೀಡಾಂಗಣ ಕಚೇರಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿವೆ ಎಂದು ತಿಳಿಸಲಾಗಿದೆ.

ಆದರೆ, ಹರಾಜು ಪ್ರಕಟಣೆ ಹೊರಡಿಸಿರುವ ಅಧಿಕಾರಿಗಳು ಅರ್ಜಿ ಪಡೆದವರು ಅ.5ರಂದು ₹1 ಲಕ್ಷ ಡಿ.ಡಿ.ಯೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ. ಹಣ ಹೊಂದಿಸಲು ಡಿ.ಡಿ. ತೆಗೆಸಲು ಹೆಚ್ಚಿನ ಕಾಲಾವಕಾಶ ಹಾಗೂ ಅರ್ಜಿ ಪಡೆಯಲು ಕಾಲಮಿತಿ ಹೆಚ್ಚಿಸಬೇಕು. ಹರಾಜು ಪ್ರಕ್ರಿಯೆ ನಡೆಯುವ ಮೊದಲೇ ಹಾಲಿ ಇರುವ ಅಂಗಡಿಗಳನ್ನು ತೆರವು ಮಾಡಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

- - -

ಬಾಕ್ಸ್‌-2 * ಮೊದಲೇ ಅರ್ಜಿ ಪಡೆದವರು ಅತಂತ್ರ ಕಳೆದ ಡಿಸೆಂಬರಿನಲ್ಲಿ ಮಾಡಲಾಗಿದ್ದ ಹರಾಜು ಪ್ರಕಟಣೆಯಲ್ಲಿ ಟೆಂಡರ್ ಅರ್ಜಿ ಮೊತ್ತ ₹500 ಪಡೆದು ಸುಮಾರು 175ಕ್ಕೂ ಹೆಚ್ಚು ಜನರಿಗೆ ಅರ್ಜಿ ವಿತರಣೆ ಮಾಡಲಾಗಿತ್ತು. ಈಗ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲು ಕ್ರೀಡಾ ಇಲಾಖೆಯಿಂದ ಪ್ರಕಟಣೆ ಹೊರಡಿಸಿರುವುದು ಹಲವು ಗೂಂದಲಗಳಿಗೆ ಕಾರಣವಾಗಿದೆ. ಈ ಮಧ್ಯೆ ಈ ಹಿಂದೆಯೇ ಅರ್ಜಿ ಪಡೆದವರ ಗತಿ ಏನು ಎಂಬುದು ಯಕ್ಷಪ್ರಶ್ನೆ. ಈಗ ನಡೆಯುವ ಮಳಿಗೆಗಳ ಹರಾಜಿನಲ್ಲಿ ಹಿಂದೆ ಅರ್ಜಿ ಪಡೆದವರು ಭಾಗವಹಿಸಲು ಅವಕಾಶ ಇದೆಯೇ ಅಥವಾ ಇಲ್ಲವೋ ಎಂಬುದನ್ನು ಅಧಿಕಾರಿಗಳು ಪ್ರಕಟಣೆ ಮೂಲಕ ಸ್ಪಷ್ಟಪಡಿಸಬೇಕೆಂದು ಅರ್ಜಿ ಪಡೆದವರ ಆಗ್ರಹವಾಗಿದೆ.

- - - -01ಎಚ್‍ಆರ್‍ಆರ್1: ಹರಿಹರದ ತಾಲೂಕು ಕ್ರೀಡಾಂಗಣದಲ್ಲಿ ಇರುವ ಮಳಿಗೆಗಳು.

Share this article