ಬಾಲಕಿಯರ ಹಾಸ್ಚೆಲ್‌ಗೆ ಜಿಪಂ ಸಿಇಒ ಭೇಟಿ

KannadaprabhaNewsNetwork | Published : Sep 21, 2024 1:47 AM

ಸಾರಾಂಶ

ಮಕ್ಕಳು ಓದಲು ಸರಿಯಾದ ರೀತಿಯಲ್ಲಿ ಬೆಳಕಿನ ವ್ಯವಸ್ಥೆ ಮಾಡುವಂತೆ ಹಾಗೂ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಪಡೆಯುವಂತೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿ ಮೊಹಲ್ಲಾದಲ್ಲಿರುವ ಮೆಟ್ರಿಕ್ ನಂತರದ ಪಿಯುಸಿ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ನಗರದ ವಿ.ವಿ. ಮೊಹಲ್ಲಾದಲ್ಲಿ ಅಕ್ಕಪಕ್ಕ ಇರುವ ಎರಡು ವಿದ್ಯಾರ್ಥಿಗಳಿಗೆ ಭೇಟಿ ನೀಡಿದ ವೇಳೆ ಮಕ್ಕಳೊಂದಿಗೆ ಬೆರೆತು ಅವರ ಸಮಸ್ಯೆ ಹಾಗೂ ಇತರ ವಿಷಯಗಳನ್ನು ಕುರಿತು ಅವರು ಚರ್ಚಿಸಿದರು. ಶೌಚಾಲಯ, ಮಕ್ಕಳು ತಂಗುವ ಕೊಠಡಿ, ಅಡುಗೆ ಮನೆ, ಊಟದ ಮನೆ ಮುಂತಾದವನ್ನು ಪರಿಶೀಲಿಸಿದರು.

ಮಕ್ಕಳು ಓದಲು ಸರಿಯಾದ ರೀತಿಯಲ್ಲಿ ಬೆಳಕಿನ ವ್ಯವಸ್ಥೆ ಮಾಡುವಂತೆ ಹಾಗೂ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಪಡೆಯುವಂತೆ ಸೂಚಿಸಿದರು. ತಾಜಾ ತರಕಾರಿಗಳನ್ನು ಉಪಯೋಗಿಸಿ ಉತ್ತಮ ರೀತಿಯಲ್ಲಿ ಅಡುಗೆ ತಯಾರಿಸಬೇಕು ಎಂದು ಅವರು ಸೂಚಿಸಿದರು.

ಕನಿಷ್ಠಪಕ್ಷ ಪ್ರತಿ ಎರಡು ತಿಂಗಳಿಗೆ ಒಮ್ಮೆ ಆರೋಗ್ಯ ಇಲಾಖೆಯಿಂದ ವೈದ್ಯರ ಸಹಾಯ ಪಡೆದು ಮಕ್ಕಳಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು. ಕ್ರೀಡಾ ಇಲಾಖೆಗೆ ಪತ್ರ ಬರೆದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿಶೇಷ ಘಟಕ ಯೋಜನೆಯಲ್ಲಿ ಇರುವ ಅನುದಾನದಲ್ಲಿ ಕ್ರೀಡಾ ಸಾಮಗ್ರಿಗಳನ್ನು ಪಡೆಯುವಂತೆ ಸೂಚಿಸಿದರು.

ಜೊತೆಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದು ಗಣಿತ, ವಿಜ್ಞಾನ, ಇಂಗ್ಲಿಷ್ ನಲ್ಲಿ ನುರಿತ ಶಿಕ್ಷಕರಿಂದ ವಿಶೇಷ ತರಗತಿಗಳನ್ನು ಏರ್ಪಡಿಸುವಂತೆ ಸೂಚಿಸಿದರು.

ಮೆಟ್ರಿಕ್ ನಂತರದ ಪಿಯುಸಿ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿನಿಯರು ಓದಿಕೊಳ್ಳಲು ಹೊರಭಾಗದ ಹುಲ್ಲು ಹಾಸಿನ ಮೇಲೆ ಹಾಗೂ ಕಾರಿಡಾರ್ ಗಳಲ್ಲಿ ಬೆಳಕಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ರಾಘವೇಂದ್ರ, ಹಾಸ್ಟೆಲ್ ವಾರ್ಡನ್ ಗಳು ಮೊದಲಾದವರು ಇದ್ದರು.

Share this article