ಕನ್ನಡಪ್ರಭವಾರ್ತೆ ಪುತ್ತೂರು
ಬಜರಂಗದಳದಲ್ಲಿ ವಿವಿಧ ಜವಾಬ್ದಾರಿ ಹೊಂದಿರುವ ಅಟೋ ರಿಕ್ಷಾ ಚಾಲಕ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ನಿವಾಸಿ ದಿನೇಶ್, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿರುವ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ ಪ್ರಜ್ವಲ್, ಲತೇಶ್ ಗುಂಡ್ಯ, ತಿಂಗಳಾಡಿ ನಿವಾಸಿ ನಿಶಾಂತ್ ಮತ್ತು ಅಜಲಡ್ಕ ನಿವಾಸಿ ಪ್ರದೀಪ್ ಅವರು ಆರೋಪಿಗಳು. ಈ ಪೈಕಿ ಲತೇಶ್ ಗುಂಡ್ಯ ಅವರು ಬಜರಂಗದಳದ ಪುತ್ತೂರು ಜಿಲ್ಲಾ ಸಹ ಸಂಯೋಜಕ್ ಆಗಿದ್ದಾರೆ. ಆರೋಪಿಗಳ ಮೇಲೆ ಕೋಮು ಗಲಭೆ, ದನಸಾಗಾಟ ಹಲ್ಲೆ, ನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪವಿದೆ. ಪುತ್ತೂರು ನಗರ ಠಾಣೆ ಹಾಗೂ ಸುಳ್ಯ ಠಾಣೆಯಿಂದ ಗಡಿಪಾರಿಗೆ ಮನವಿ ಮಾಡಲಾಗಿದ್ದು, ಲತೇಶ್‌ಗೆ ಬಳ್ಳಾರಿ ಜಿಲ್ಲೆಗೆ, ಪ್ರಜ್ವಲ್ ಗೆ ಬಾಗಲಕೋಟೆ ಜಿಲ್ಲೆಗೆ ಗಡಿಪಾರು ಮಾಡಲು ಮನವಿ ಮಾಡಲಾಗಿದೆ.
ಕರ್ನಾಟಕ ಪೊಲೀಸ್ ಅಧಿನಿಯಮ ೧೯೫೩ರ ಕಲಂ ೫೫ರಡಿ ಗಡಿಪಾರು ನೋಟೀಸ್ ನೀಡಲಾಗಿದ್ದು, ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಆರೋಪಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾದೆ ಹಾಗೂ ಪುತ್ತೂರು ಸಹಾಯಕ ಆಯುಕ್ತರ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ. ವಿಚಾರಣೆಗೆ ಹಾಜರಾದ ಬಳಿಕ ಅಧಿಕೃತವಾಗಿ ಒಂದು ವರ್ಷಗಳ ಕಾಲ ಗಡಿಪಾರು ಆದೇಶ ಸಾಧ್ಯತೆಯಿದೆ ಎನ್ನಲಾಗಿದೆ.---ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರಿನ ಅಸ್ತ್ರ ಪ್ರಯೋಗ: ನಳಿನ್ ವಾಗ್ದಾಳಿ ಪುತ್ತೂರು: ರಾಜ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಕೆಲಸ ನಡೆಸುತ್ತಿರುವ ರಾಜ್ಯ ಸರ್ಕಾರವು ಗೂಂಡಾ ರಾಜ್ಯವಾಗಿ ಬದಲಾಗಿದೆ. ಯಾವುದೇ ಅಪರಾಧವಿಲ್ಲದಿದ್ದರೂ ಇದೀಗ ಸುಳ್ಯ ಹಾಗೂ ಪುತ್ತೂರು ಭಾಗದ ಕಾರ್ಯಕರ್ತರ ಮೇಲೆ ಗಡಿಪಾರಿನ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲೆಯ ಸಂಸದ ಹಾಗೂ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದ್ದಾರೆ.