ಕನ್ನಡಪ್ರಭ ವಾರ್ತೆ ಹನೂರು
ಮಲೆಮಹದೇಶ್ವರ ಬೆಟ್ಟದ ರಸ್ತೆ ಕಾಮಗಾರಿ ವೈಜ್ಞಾನಿಕವಾಗಿ ಪೂರ್ಣಗೊಳಿಸುವಂತೆ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಶಾಸಕ ಎಂ.ಆರ್.ಮಂಜುನಾಥ್ ಸೂಚನೆ ನೀಡಿದರು.ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮುಖ್ಯ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.17ರಂದು ಕ್ಯಾಬಿನೆಟ್ ಸಭೆ ನಡೆಯುತ್ತಿರುವುದರಿಂದ ಬಹು ನಿರೀಕ್ಷಿತ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಲು ಅಧಿಕಾರಿ ಮತ್ತು ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಕಾಮಗಾರಿಗೆ ಗಡುವು:ಹನೂರು ಪಟ್ಟಣದಿಂದ ಎಲ್ಲೇಮಾಳ ರಸ್ತೆ ಮಾರ್ಗವಾಗಿ ನಡೆಯುತ್ತಿರುವ ಕಿರು ಸೇತುವೆಗಳ ಅಭಿವೃದ್ಧಿ ಕಾಮಗಾರಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಕೌದಳ್ಳಿಯಿಂದ ಮಲೆಮಹದೇಶ್ವರ ಬೆಟ್ಟ ಮತ್ತು ತಾಳುಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟದ ವರೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಡಾಂಬರೀಕರಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ರಸ್ತೆ ಬದಿಯ ಇಕ್ಕೆಲಗಳಿಗೆ ಗ್ರಾವೆಲ್ ಹಾಕುವ ಮೂಲಕ ತೀವ್ರ ತಿರುವುಗಳು ಇರುವ ಕಡೆ, ಸೂಚನಾ ಫಲಕ ಸೇರಿದಂತೆ ಮತ್ತು ಎಚ್ಚರಿಕೆಯ ನಾಮಫಲಕಗಳನ್ನು ಅಳವಡಿಸಿ.
ಶ್ರೀ ಕ್ಷೇತ್ರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಲಕ್ಷಾಂತರ ಭಕ್ತರು ಬಂದು ಹೋಗುವ ರಸ್ತೆಯ ಬದಿಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ವಾಹನ ಸವಾರರಿಗೆ ಸೂಚನಾ ನಾಮಫಲಕಗಳು ಮತ್ತು ರಸ್ತೆಯಲ್ಲಿ ಬೇಕಾದ ಕಡೆ ಸಣ್ಣ ಪ್ರಮಾಣದ ರಸ್ತೆ ಡುಬ್ಬಗಳನ್ನು ನಿರ್ಮಾಣ ಮಾಡಿ ರಸ್ತೆ ಅಪಘಾತಗಳನ್ನು ತಪ್ಪಿಸುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಫೆ.10 ರೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಶಾಸಕರು ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಗಡುವು ನೀಡಿದರು.ಪಟ್ಟಣದಿಂದ ಮಾದೇಶ್ವರ ಬೆಟ್ಟದ ವರೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಜೊತೆ ತೀವ್ರ ತಿರುಗುಗಳಲ್ಲಿ ಮತ್ತು ಕಿರು ಸೇತುವೆಗಳ ಬಳಿ ವಾಹನ ಸವಾರರಿಗೆ ರಸ್ತೆ ಸುರಕ್ಷಿತ ನಾಮಫಲಕದ ಜೊತೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸುವ ಮೂಲಕ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಚಿನ್ನಣ್ಣ, ಎಇ ಸುರೇಂದ್ರ, ಪುರುಷೋತ್ತಮ್, ಗುತ್ತಿಗೆದಾರರಾದ ಓಲೆ ಮಹದೇವ ಹಾಗೂ ಅಶೋಕ್ ಇನ್ನಿತರರು ಇದ್ದರು.