ಶಾಲೆಯಲ್ಲಿದ್ದ ಸಂಸಾರ ತೆರವಿಗೆ ಸೂಚನೆ

KannadaprabhaNewsNetwork | Published : Jan 12, 2025 1:16 AM

ಸಾರಾಂಶ

ಈ ಹಿಂದೆ ಇಲ್ಲಿ ಸರ್ಕಾರಿ ಉರ್ದು ಶಾಲೆಯನ್ನು ನಡೆಸಲಾಗುತ್ತಿತ್ತು. ಮಕ್ಕಳ ಸಂಖ್ಯೆ ಇಲ್ಲದ ಕಾರಣ ಶಾಲೆಯನ್ನು ಮುಚ್ಚಲಾಗಿತ್ತು ಎಂದು ಹೇಳಲಾಗುತ್ತಿದೆ. ಈಗ ಯಾವುದೇ ಅನುಮತಿ ಪಡೆಯದೇ ಕಟ್ಟಡವನ್ನು ರಿಪೇರಿ ಮಾಡಿ ಸುಣ್ಣವನ್ನು ಬಳಿದು ಜೊತೆಗೆ ಇಲ್ಲಿ ಹಜರತ್ ನಡೆಸಲಾಗುತ್ತಿದೆ ಎಂದು ಹೇಳುತ್ತಿದ್ದು, ಕಟ್ಟಡದಲ್ಲಿ ಸಂಸಾರವೊಂದು ನೆಲೆಸಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸರ್ಕಾರಿ ಶಾಲೆಯ ಕಟ್ಟಡವನ್ನು ಅನಧಿಕೃತವಾಗಿ ವಾಸ್ತವ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ಎರಡು ದಿನಗಳ ಒಳಗಾಗಿ ತೆರವುಗೊಳಿಸಿ ಅಂಗನವಾಡಿ ಕೇಂದ್ರಕ್ಕೆ ನೀಡಲಾಗುತ್ತದೆ ಎಂದು ಬಿಇಒ ಜಿ.ಗುರುಮೂರ್ತಿ ತಿಳಿಸಿದರು. ತಾಲೂಕಿನ ಬೂದಿಕೋಟೆ ಗ್ರಾಮದ ಸರ್ಕಾರಿ ಉರ್ದು ಶಾಲೆಯನ್ನು ಕೆಲವರು ಆಕ್ರಮಿಸಿಕೊಂಡು ಮನೆಯಾಗಿ ಪರಿರ್ವತನೆ ಮಾಡಿಕೊಂಡಿರುವ ಬಗ್ಗೆ ಬಂದ ದೂರಿನ ಮೇರೆಗೆ ಶಾಲೆಗೆ ಭೇಟಿ ನೀಡಿ ಮಾತನಾಡಿದರು.

ಶಾಲಾ ಕಟ್ಟಡದಲ್ಲಿ ಸಂಸಾರ

ಈ ಹಿಂದೆ ಇಲ್ಲಿ ಸರ್ಕಾರಿ ಉರ್ದು ಶಾಲೆಯನ್ನು ನಡೆಸಲಾಗುತ್ತಿತ್ತು. ಮಕ್ಕಳ ಸಂಖ್ಯೆ ಇಲ್ಲದ ಕಾರಣ ಶಾಲೆಯನ್ನು ಮುಚ್ಚಲಾಗಿತ್ತು ಎಂದು ಹೇಳಲಾಗುತ್ತಿದೆ. ಈಗ ಯಾವುದೇ ಅನುಮತಿ ಪಡೆಯದೇ ಕಟ್ಟಡವನ್ನು ರಿಪೇರಿ ಮಾಡಿ ಸುಣ್ಣವನ್ನು ಬಳಿದು ಜೊತೆಗೆ ಇಲ್ಲಿ ಹಜರತ್ ನಡೆಸಲಾಗುತ್ತಿದೆ ಎಂದು ಹೇಳುತ್ತಿದ್ದು, ಕಟ್ಟಡದಲ್ಲಿ ಸಂಸಾರವೂ ಸಹ ಇದೆ ಎಂದರು. ಅಂಗನವಾಡಿಗೆ ಕಟ್ಟಡ ಹಸ್ತಾಂತರ

ಕಟ್ಟಡಕ್ಕೆ ಸಂಬಂಧಿಸಿದಂತೆ ಈ ಸ್ವತ್ತು ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಹೆಸರಿನಲ್ಲಿದೆ. ಆದ್ದರಿಂದ ಇದನ್ನು ಸರ್ಕಾರಿ ಶಾಲಾ ಕಟ್ಟಡ ಎಂದು ಪರಿಗಣಿಸಲಾಗುತ್ತದೆ. ಸಮೀಪದಲ್ಲಿ ಅಂಗನವಾಡಿ ಕೇಂದ್ರವಿದ್ದು, ಅದೂ ಸಹ ಶಿಥಿಲಗೊಂಡಿರುವ ಕಾರಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉರ್ದು ಶಾಲಾ ಕಟ್ಟಡವನ್ನು ಬಳಕೆಗೆ ನೀಡಲು ಮನವಿಯನ್ನು ಮಾಡಿದ್ದಾರೆ. ಅದರಂತೆ ಮಹಜರ್ ಮಾಡಿದ್ದು, ಕಟ್ಟಡದಲ್ಲಿನ ಸಂಸಾರವನ್ನು ತೆರೆವುಗೊಳಿಸಿ ಅಂಗನವಾಡಿ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದರು. ಇದೇ ವೇಳೆ ಕೆಲ ಮುಸ್ಲೀ ಸಮುದಾಯದ ಯುವಕರು ಇದು ವಕ್ಫ್‌ ಆಸ್ತಿಯಾಗಿರುವ ಕಾರಣ ಮದರಸ ನಡೆಸಲಾಗುತ್ತಿದೆ ಎಂದು ತಗಾದೆ ತೆಗೆದರು. ಈ ವೇಳೆ ತಾ.ಪಂ ಮಾಜಿ ಸದಸ್ಯ ವಿ.ಮಾರ್ಕಂಡೇಗೌಡ, ವಿ.ಎಸ್.ಎಸ್.ಎನ್ ಮಾಜಿ ಅದ್ಯಕ್ಷ ಆರ್.ವಿಜಯಕುಮಾರ್, ಗ್ರಾ.ಪಂ ಸದಸ್ಯ ಆರ್.ಸುರೇಶ್ ಕುಮಾರ್, ಸಿಆರ್‌ಪಿ ನಾಗರಾಜ್, ಶಿಕ್ಷಕರಾದ ಶ್ಯಾಮಮೂರ್ತಿ, ವಿಜಯಕುಲಕರ್ಣಿ ಮತ್ತಿತರರು ಇದ್ದರು.

Share this article