ಕನ್ನಡಪ್ರಭ ವಾರ್ತೆ ಮಂಗಳೂರು
ಮುಕ್ತ, ಪಾರದರ್ಶಕ, ನಿಷ್ಪಕ್ಷಪಾತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣಾ ಆಯೋಗವು ಪ್ರಕಟಿಸಿರುವ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕಿ ಆಕಾಂಕ್ಷ ರಂಜನ್ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳಿಗೆ ಸಲಹೆ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಚುನಾವಣಾ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅವರು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.ಯಾವುದೇ ಕಾರಣಕ್ಕೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶವಿಲ್ಲ. ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೆ 1950ಗೆ ಕರೆ ಮಾಡಿ ತಿಳಿಸುವಂತೆ ಹಾಗೂ ಅಹವಾಲುಗಳಿದ್ದರೆ ತಮ್ಮ ಮೊಬೈಲ್ ನಂಬರ್ 9482698817ಗೆ ಕರೆ ಮಾಡುವಂತೆ ಹೇಳಿದ ಅವರು, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣಾ ಸಂಬಂಧಿತ ಕೆಲಸ ಕಾರ್ಯಗಳಿಗೆ ಸುವಿಧಾ ಆ್ಯಪ್ ಮೂಲಕ ಅನುಮತಿ ಪಡೆಯಬಹುದೆಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಲೋಕಸಭಾ ಅಭ್ಯರ್ಥಿಗಳ ಚುನಾವಣೆಯ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಪ್ರಕಟಿಸಿರುವ ಪುಸ್ತಕವನ್ನು ಈಗಾಗಲೇ ನೀಡಲಾಗಿದೆ, ಅದರನ್ವಯ ಕ್ರಮ ವಹಿಸಬೇಕು ಎಂದರು.ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಲು ಸಂಬಂಧಿಸಿದ ಸಂಬಂಧಿತ ಕಂಪೆಂಡಿಯಂ ಅನ್ನು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ನೀಡಲಾಗಿದೆ. ಅಭ್ಯರ್ಥಿ ಅಥವಾ ಪಕ್ಷದವರು ಯಾವುದೇ ಕಾರಣಕ್ಕೂ ಅದನ್ನು ಉಲ್ಲಂಘಿಸಬಾರದು, ಉಲ್ಲಂಘನೆಯಾದರೆ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು. ಚುನಾವಣಾ ಕಾರ್ಯಕ್ಕೆ ಬಳಸಲಾಗುವ ವಸ್ತುಗಳ ಬಗ್ಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಹಾಗೂ ಅನುಮತಿಯೊಂದಿಗೆ ನೀಡಲಾಗುವ ಷರತ್ತುಗಳನ್ನು ಪಾಲಿಸಬೇಕು ಎಂದು ಹೇಳಿದರು.
ಚುನಾವಣಾ ಸಂಬಂಧಿತ ಅನುಮತಿಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಸಹಾಯಕ ಚುನಾವಣಾಧಿಕಾರಿ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಏಕಗವಾಕ್ಷಿ ಪದ್ಧತಿ ಕೇಂದ್ರದಲ್ಲಿ ಪಡೆಯಬಹುದು. ಮುಖ್ಯವಾಗಿ ಮತದಾನಕ್ಕೆ ಮುನ್ನ 72 ಹಾಗೂ 48 ಗಂಟೆಗಳ ಅವಧಿಯಲ್ಲಿ ಅನ್ವಯವಾಗುವ ನಿರ್ಬಂಧಗಳನ್ನು ಪಾಲಿಸಲೇಬೇಕು. ಅಭ್ಯರ್ಥಿಗಳ ಸ್ವಂತ ವಾಹನ ಇದ್ದಾಗ್ಯೂ ಕೂಡ ಅದನ್ನು ಚುನಾವಣೆಯಲ್ಲಿ ಬಳಸಲು ಅನುಮತಿ ಪಡೆಯಲೇಬೇಕು. ಪಡೆಯದಿದ್ದರೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.ಇವಿಎಂ ಯಂತ್ರಗಳನ್ನು ಈಗಾಗಲೇ ಒಂದು ಬಾರಿ ರಾಂಡಮೈಜೇಷನ್ ಮಾಡಲಾಗಿದೆ, ಮತದಾನದ ನಂತರ ಸುರತ್ಕಲ್ ಎನ್.ಐ.ಟಿ.ಕೆ.ಯ ಸ್ಟ್ರಾಂಗ್ ರೂಮ್‍ನಲ್ಲಿರಿಸಲಾಗುವುದು ಎಂದರು.
85ಕ್ಕೂ ಹೆಚ್ಚು ವಯಸ್ಸಾದ ಹಾಗೂ ವಿಕಲಚೇತನ ಮತದಾರರ ಹೋಮ್ ಓಟಿಂಗ್‍ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 8,010 ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ತಿಂಗಳ 13ರಿಂದ 18ರವರೆಗೆ ಅವರ ಮನೆಗಳಿಗೆ ಹೋಗಿ ಮತದಾನ ಮಾಡಿಸಿಕೊಳ್ಳಲಾಗುವುದು. ಅದಕ್ಕಾಗಿ ಯಾವ ಮತಗಟ್ಟೆ ಅಧಿಕಾರಿಗಳು ಯಾರ ಮನೆಗೆ ಹೋಗುತ್ತಾರೆ ಎಂದು ಮೊದಲೇ ತಿಳಿಸಲಾಗುವುದು. ಹೋಮ್ ಓಟಿಂಗ್ ದಿನ ಮೈಕ್ರೋ ಅಬ್ಸರ್ವವರ್, ಪೋಲಿಂಗ್ ಪಾರ್ಟಿ ಹಾಗೂ ಚುನಾವಣಾ ಸಿಬ್ಬಂದಿ ಅವರ ಮನೆಗೆ ಹೋಗಿ ಗುಪ್ತವಾಗಿ ಮತದಾನ ಮಾಡಿಸಿಕೊಂಡು ಬರಲಿದ್ದಾರೆ, ಹೋಮ್ ವೋಟಿಂಗ್ ಬಗ್ಗೆ ಈಗಾಗಲೇ ಮಾರ್ಗ ಸಿದ್ಧಗೊಂಡಿದೆ ಎಂದು ತಿಳಿಸಿದರು.ಮತದಾರರ ಮಾಹಿತಿ ಪಟ್ಟಿಯನ್ನು ಮುದ್ರಿಸಿ ಬಿಎಲ್‍ಒಗಳ ಮೂಲಕ ಮನೆಮನೆಗೆ ತಲುಪಿಸಲಾಗುವುದು. ಜಿಲ್ಲೆಯಲ್ಲಿ 171 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ, ಅಲ್ಲಿ ಶೇ.100ರಷ್ಟು ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗುವುದು ಎಂದರು.
ಚುನಾವಣಾ ವೆಚ್ಚ ವೀಕ್ಷಕ ಮೆರುಗು ಸುರೇಶ್, ಐಎಎಸ್ ಪ್ರೊಬೇಷನರಿ ಮುಕೇಶ್ ಜೈನ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಚುನಾವಣಾ ವೆಚ್ಚ ತಂಡದ ನೋಡಲ್ ಅಧಿಕಾರಿ ಮೀರಾ ಪಂಡಿತ್, ಏಕಗವಾಕ್ಷಿ ಪದ್ಧತಿ ಕೇಂದ್ರದ ನೋಡಲ್ ಅಧಿಕಾರಿ ಗೋಕುಲ್ ದಾಸ್ ನಾಯಕ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳು ಇದ್ದರು.