ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ನಿರ್ಮಾಣದಾರರು, ಗುತ್ತಿಗೆದಾರರು (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996 ಹಾಗೂ ಕರ್ನಾಟಕ ನಿಯಮಗಳು 2006ರಡಿ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆ ವಹಿಸುವುದು ಅವರ ಜವಾಬ್ದಾರಿಯಾಗಿರುತ್ತದೆ. ಇದನ್ನು ಪಾಲಿಸದಿದ್ದರೇ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಎಚ್ಚರಿಕೆ ನೀಡಿದ್ದಾರೆ.ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಕಾಮಗಾರಿ ಆರಂಭ ಮಾಡಿರುವ ಸ್ಥಳಗಳಲ್ಲಿ ಭೂಕುಸಿತ, ಅಪಘಾತ ಹಾಗೂ ಅವಘಡ ಉಂಟಾಗದಂತೆ ಸೂಕ್ತ ಕ್ರಮಗಳನ್ನು ತಕ್ಷಣ ತೆಗೆದುಕೊಂಡು ಯಾವುದೇ ಕಾರ್ಮಿಕರ ಜೀವ ಹಾನಿಯಾಗದಂತೆ ಕಾಮಗಾರಿ ನಡೆಸಬೇಕು. ಮುನ್ನೆಚ್ಚರಿಕೆ ವಹಿಸಲು ಸಾಧ್ಯವಿಲ್ಲದಿದ್ದಲ್ಲಿ ಅಂತಹ ಕಾಮಗಾರಿಯನ್ನು ತತ್‌ಕ್ಷಣ ಸುರಕ್ಷತಾ ದೃಷ್ಠಿಯಿಂದ ನಿಲ್ಲಿಸಬೇಕು ಎಂದವರು ಆದೇಶಿಸಿದ್ದಾರೆ.
ಯಾವುದೇ ಸುರಕ್ಷತೆ ವಹಿಸದೆ ಅಪಘಾತವಾಗಿ ಕಾರ್ಮಿಕರ ಜೀವಹಾನಿ ಹಾಗೂ ಇನ್ನಿತರ ಅವಘಡವಾದಲ್ಲಿ ಅಂತಹ ಕಾಮಗಾರಿಯ ನಿರ್ಮಾಣದಾರರ ವಿರುದ್ಧ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾನೂನು ಕ್ರಮ ಜರುಗಿಸಲಾಗುತ್ತದೆ. ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುವುದು ಮತ್ತು ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ 3 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡವನ್ನು ನ್ಯಾಯಾಲಯ ವಿಧಿಸಬಹುದಾಗಿದೆ ಅಥವಾ ಶಿಕ್ಷೆ ಮತ್ತು ದಂಡ ಎರಡನ್ನು ವಿಧಿಸಬಹುದಾಗಿದೆ. ಆದ್ದರಿಂದ ನಿರ್ಮಾಣ ಸ್ಥಳದಲ್ಲಿ ಸುರಕ್ಷತೆಗಾಗಿ ಮುನ್ನೆಚ್ಚರಿಕೆ ವಹಿಸಿ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಕಾನೂನು ಪಾಲನೆ ಮಾಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿ ಪ್ರಕಟಣೆಯಲ್ಲಿ ಹೇಳಿದೆ.----8ರಂದು ಲಿಂಗತ್ವ ಅಲ್ಪಸಂಖ್ಯಾತರಿಗೆ ಗೃಹಲಕ್ಷ್ಮೀ ಸೌಲಭ್ಯಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳು ಗೃಹಲಕ್ಷ್ಮೀ ಯೋಜನೆಯಡಿ ಪ್ರಯೋಜನ ಪಡೆಯಲು ಅನುವಾಗುವಂತೆ ಗೃಹಲಕ್ಷ್ಮೀ ಯೋಜನೆಯ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿದೆ.ಆದ್ದರಿಂದ ಜುಲೈ 8ರಿಂದ ಲಿಂಗತ್ವ ಅಲ್ಪಸಂಖ್ಯಾತರು ಪ್ರಸ್ತುತ ವಾಸವಾಗಿರುವ ಜಿಲ್ಲೆಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಗೆ ತೆರಳಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಟ್ರಾನ್ಸ್ ಜೆಂಡರ್ಸ್ ಗುರುತಿನ ಚೀಟಿ, ಪಾಸ್ ಪೋರ್ಟ್ ಸೈಜ್ ಫೋಟೋ ಮತ್ತು ಆಧಾರಕಾರ್ಡ್ ಕಡ್ಡಾಯವಾಗಿ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.