ಒಡಂಬಡಿಕೆ ತಕ್ಕಂತೆ ನಡೆದುಕೊಳ್ಳದ ಕಾನೂನು ವಿವಿಗೆ ನೋಟಿಸ್‌!

KannadaprabhaNewsNetwork |  
Published : Oct 31, 2025, 02:30 AM IST
ಹುಬ್ಬಳ್ಳಿಯ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪಾಲಿಕೆ ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ಈ ಹಿಂದೆ ಜಾಗದ ಕುರಿತು ಮಾಡಿಕೊಳ್ಳಲಾಗಿದ್ದ ಒಡಂಬಡಿಕೆಗೆ ತಕ್ಕಂತೆ ನಡೆದುಕೊಳ್ಳದ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ನೋಟಿಸ್‌ ನೀಡಲು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಹುಬ್ಬಳ್ಳಿ: ಈ ಹಿಂದೆ ಜಾಗದ ಕುರಿತು ಮಾಡಿಕೊಳ್ಳಲಾಗಿದ್ದ ಒಡಂಬಡಿಕೆಗೆ ತಕ್ಕಂತೆ ನಡೆದುಕೊಳ್ಳದ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ನೋಟಿಸ್‌ ನೀಡುವುದು ಹಾಗೂ ಪಾಲಿಕೆ ನೀಡಿದ್ದ ಜಾಗದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿ ಸ್ಥಗಿತಗೊಳಿಸಿ ಕಾನೂನು ಹೋರಾಟ ಕೈಗೊಳ್ಳುವ ಕುರಿತು ಗುರುವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಈ ಕುರಿತು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಚಂದ್ರಶೇಖರ ಮನಗುಂಡಿ, ಈ ಹಿಂದೆ ರಾಮಪ್ಪ ಬಡಿಗೇರ ಅವರು ಮೇಯರ್ ಆಗಿದ್ದ ಅವಧಿಯಲ್ಲಿ ಸಚಿವ ಎಚ್.ಕೆ. ಪಾಟೀಲ ಅವರ ಮನವಿಯ ಮೇರೆಗೆ ನವನಗರದಲ್ಲಿನ ಪಾಲಿಕೆಯ 39 ಗುಂಟೆ ಭೂಮಿಯನ್ನು ಕಾನೂನು ವಿವಿಗೆ ನೀಡುವುದು ಅದರ, ಬದಲಾಗಿ ಹುಬ್ಬಳ್ಳಿಯ ಹಳೆಯ ನ್ಯಾಯಾಲಯ ಸಂಕೀರ್ಣವನ್ನು ಪಾಲಿಕೆಗೆ ಬಿಟ್ಟುಕೊಡುವಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆದರೆ, ಪಾಲಿಕೆಯ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡ ಬಳಿಕ, ನ್ಯಾಯಾಲಯದ ಜಾಗೆಯನ್ನು ಹಸ್ತಾಂತರಿಸಿಕೊಳ್ಳಲು ಪಾಲಿಕೆ ನಡೆಸಿದ್ದ ಪ್ರಕ್ರಿಯೆಯನ್ನು ಸರ್ಕಾರ ತಿರಸ್ಕರಿಸಿದೆ. ಈ ಕುರಿತು ಮೇಯರ್‌ ಸ್ಪಷ್ಟ ಮಾಹಿತಿ ನೀಡುವಂತೆ ಸಭೆಯ ಗಮನಕ್ಕೆ ತಂದರು.

ಸದಸ್ಯ ಈರೇಶ ಅಂಚಟಗೇರಿ ಮಾತನಾಡಿ, ಜಾಗದ ಕೊರತೆಯಿದ್ದಾಗಲೂ ಶಿಕ್ಷಣದ ದೃಷ್ಟಿಯಿಂದ ಹಾಗೂ ಹಳೆಯ ಕೋರ್ಟ್‌ ಕಟ್ಟಡ ಪಾಲಿಕೆಗೆ ದೊರೆಯುತ್ತದೆ ಎಂದು ಜಾಗ ನೀಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ಒಪ್ಪಂದವಾಗಿತ್ತು. ಕೊಟ್ಟ ಜಾಗ ಮರಳಿ ಪಡೆದು, ಅಲ್ಲಿ ಪೌರ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಡೋಣ ಎಂದರು. ಅದಕ್ಕೆ ಸದಸ್ಯರಾದ ಶಿವು ಹಿರೇಮಠ, ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ ದನಿಗೂಡಿಸಿದರು.

ನೋಟಿಸ್‌ಗೆ ಸೂಚನೆ

ಈ ಕುರಿತು ಮಾತನಾಡಿದ ಮೇಯರ್‌ ಜ್ಯೋತಿ ಪಾಟೀಲ, ಈಗಾಗಲೇ ಪಾಲಿಕೆ ನೀಡಿದ್ದ ಜಾಗದಲ್ಲಿ ಕಾನೂನು ವಿವಿ ಕಾಮಗಾರಿ ಕೈಗೊಂಡಿರುವುದು ಗಮನಕ್ಕೆ ಬಂದಿದೆ. ಈ ಕೂಡಲೇ ಅಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ತಕ್ಷಣ ನೋಟಿಸ್ ನೀಡುವಂತೆ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿಗೆ ಸೂಚಿಸಿದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ