ಜಾಗದ ಸರ್ವೆ ಆಗುವ ತನಕ ಯಥಾಸ್ಥಿತಿ ಕಾಪಾಡಲು ಸೂಚನೆ

KannadaprabhaNewsNetwork | Published : Jun 14, 2024 1:01 AM

ಸಾರಾಂಶ

ಆ್ಯಂಬುಲೆನ್ಸ್‌ ಸೇರಿದಂತೆ ದೊಡ್ಡ ದೊಡ್ಡ ವಾಹನಗಳಿಗೆ ತಿರುಗಾಡಲು ಇರುವ ಏಕೈಕ ರಸ್ತೆಯನ್ನು ಪೊಲೀಸರು ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಭಟ್ಕಳ: ಅನಾದಿ ಕಾಲದಿಂದ ಸಾರ್ವಜನಿಕರು ಓಡಾಡುತ್ತಿದ್ದ ಪೊಲೀಸ್ ಮೈದಾನ ಮತ್ತು ವಸತಿಗೃಹಕ್ಕೆ ತೆರಳುವ ರಸ್ತೆಗೆ ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ತಿರುಗಾಡದಂತೆ ನಿರ್ಬಂಧ ಹೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಸಹಾಯಕ ಆಯುಕ್ತೆ ಡಾ. ನಯನಾ ಅವರು ಸ್ಥಳದ ಸರ್ವೆ ಮಾಡುವ ತನಕ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದ್ದಾರೆ.

ಪಟ್ಟಣದ ಸಾಗರ ರಸ್ತೆಯಲ್ಲಿರುವ ಪೊಲೀಸ್ ಮೈದಾನದ ರಸ್ತೆಗೆ ಪೊಲೀಸರು ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಓಡಾಡಕ್ಕೆ ನಿರ್ಬಂಧ ಹೇರಿದ್ದರಿಂದ ಬುಧವಾರ ಸಂಜೆ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ರಸ್ತೆಗೆ ಹಾಕಿದ ಬ್ಯಾರಿಕೇಡ್ ತಕ್ಷಣ ತೆರವುಗೊಳಿಸಬೇಕೆಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆ ಗುರುವಾರ ಎಸಿ ಕಚೇರಿಯಲ್ಲಿ ಈ ಕುರಿತು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಜಾಲಿ ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ನಾಯ್ಕ ಮಾತನಾಡಿ, ಅನಾದಿ ಕಾಲದಿಂದಲೂ ಸಾರ್ವಜನಿಕರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಪೊಲೀಸರು ಏಕಾಏಕಿಯಾಗಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿರುವುದು ಸರಿಯಲ್ಲ.

ಆ್ಯಂಬುಲೆನ್ಸ್‌ ಸೇರಿದಂತೆ ದೊಡ್ಡ ದೊಡ್ಡ ವಾಹನಗಳಿಗೆ ತಿರುಗಾಡಲು ಇರುವ ಏಕೈಕ ರಸ್ತೆಯನ್ನು ಪೊಲೀಸರು ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಹುರಳಿಸಾಲ, ಡಿ.ಪಿ. ಕಾಲನಿ, ಕಡವಿನಕಟ್ಟೆ ಗ್ರಾಮದವರಿಗೆ, ಶಾಲಾ ಮಕ್ಕಳಿಗ ಈ ರಸ್ತೆ ಅನುಕೂಲವಾಗಿತ್ತು. ತಕ್ಷಣದಿಂದಲೇ ರಸ್ತೆಗೆ ಪೊಲೀಸರು ಹಾಕಿರುವ ಬ್ಯಾರಿಕೇಡ್ ತೆರವುಗೊಳಿಸಿ ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಡಬೇಕಂದು ಆಗ್ರಹಿಸಿದರು.

ಇವರ ಮಾತಿಗೆ ಒಪ್ಪದ ಸಹಾಯಕ ಆಯಕ್ತೆ ಡಾ. ನಯನಾ ಅವರು ಈ ಜಾಗ ಪೊಲೀಸರು ತಮಗೆ ಸೇರಿದ್ದು ಎನ್ನುತ್ತಿದ್ದಾರೆ. ಅರಣ್ಯ ಇಲಾಖೆಯಿಂದ 5 ಎಕರೆ ಜಾಗ ಪೊಲೀಸ್ ವಸತಿಗೃಹ ನಿರ್ಮಾಣಕ್ಕೆ ಮಂಜೂರಿ ಕೂಡ ಆಗಿದೆ. ಈ ಬಗ್ಗೆ ಕೂಡಲೇ ನಿರ್ಣಯ ಮಾಡಲು ಸಾಧ್ಯವಿಲ್ಲ. ಜಾಗದ ಸರ್ವೇ ನಡೆಸಿ ಇದು ಯಾರಿಗೆ ಸಂಬಂಧಿಸಿದ್ದು ಎನ್ನುವುದರ ಬಗ್ಗೆ ಖಾತರಿ ಆದ ನಂತರ ನಿರ್ಣಯ ಮಾಡುತ್ತೇವೆ. ಅಲ್ಲಿಯ ತನಕ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದರು.

ಸಹಾಯಕ ಆಯುಕ್ತರ ನಿರ್ಣಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಾಲಿ ಪಟ್ಟಣ ಪಂಚಾಯಿತಿ ಸದಸ್ಯೆ ಶಾಹಿನಾ ಶೇಖ, ಮುಖಂಡ ನಾಗರಾಜ ನಾಯ್ಕ, ನಾಗೇಂದ್ರ ನಾಯ್ಕ ಮತ್ತಿತರರು, ನೀವು ಜನರ ಸಮಸ್ಯೆಗೆ ಸ್ಪಂದಿಸುವುದನ್ನು ಬಿಟ್ಟು ಪೊಲೀಸ್ ಇಲಾಖೆಯ ಒತ್ತಡಕ್ಕೆ ಮಣಿದು ಈ ರೀತಿ ನಿರ್ಧರಿಸುವುದು ಸರಿಯಲ್ಲ. ನಾವು ಹೊಸದಾಗಿ ರಸ್ತೆ ಕೊಡಿ ಎನ್ನುತ್ತಿಲ್ಲ. ಬದಲಾಗಿ ನಾವು ಅನಾದಿ ಕಾಲದಿಂದಲೂ ತಿರುಗಾಡುತ್ತಿದ್ದ ರಸ್ತೆಯಲ್ಲಿ ತಿರುಗಾಡಲು ಕೊಡಿ. ಪೊಲೀಸರು ಏಕಾಏಕಿ ರಸ್ತೆಗೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದರೆ ಸಾರ್ವಜನಿಕರ ಪರಿಸ್ಥಿತಿ ಏನು? ನಾವು ಹಿಂದೆ ಹೇಗೆ ರಸ್ತೆಯಲ್ಲಿ ತಿರುಗಾಡುತ್ತಿದ್ದೆವೋ ಅದೇ ರೀತಿ ಮುಂದೆಯೂ ತಿರುಗಾಡಲು ಅನುವು ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ನಾವು ರಸ್ತೆಗಾಗಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದರು.

ಡಿವೈಎಸ್ಪಿ ಮಹೇಶ, ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಜಾಲಿ ಪಪಂ ಮುಖ್ಯಾಧಿಕಾರಿ ಮಂಜಪ್ಪ ಮುಂತಾದವರಿದ್ದರು. ತೀವ್ರ ಆಕ್ರೋಶ

ಅನಾದಿ ಕಾಲದಿಂದಲೂ ಇದ್ದ ರಸ್ತೆಯನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಧಂಧಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಸ್ತೆ ಬಂದ್ ಮಾಡುವುದಕ್ಕೆ ಪೊಲೀಸರಿಗೆ ಇರುವ ಬಲವಾದ ಕಾರಣವಾದರೂ ಏನು ಎಂದು ಪ್ರಶ್ನಿಸಿರುವ ಸಾರ್ವಜನಿಕರು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಮಧ್ಯೆಪ್ರವೇಶಿಸಿ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

Share this article