ರಾಮನಗರ: ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಭೆಗಳಲ್ಲಿ ಗಂಭೀರ ವಿಷಯಗಳು ಚರ್ಚೆಯಾಗುವ ಕಾರಣ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಜಿಲ್ಲಾ ಸಮನ್ವಯ ಸಮಿತಿ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಶೋಕಸ್ ನೋಟಿಸ್ ನೀಡಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಅಪರ ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ಆಯೋಜಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ತಹಶೀಲ್ದಾರರು, ತಾಪಂ ಇಒಗಳು, ಅಬಕಾರಿ ಇಲಾಖೆ, ಕೆಎಸ್‌ಆರ್‌ಟಿಸಿ, ನಗರ-ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆಹಾರ ಮತ್ತು ಗುಣಮಟ್ಟದ ಅಂಕಿತಾ ಅಧಿಕಾರಿ, ಕಾನೂನು ಮಾಪನ ಇಲಾಖೆ, ಕಾರ್ಮಿಕ ಇಲಾಖೆ, ಶಿಶು ಅಭಿವೃದ್ಧಿ, ಪರಿಸರ ಮಾಲಿನ್ಯ ಅಧಿಕಾರಿ, ಪ್ರವಾಸೋದ್ಯಮ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಮುಖ್ಯಸ್ಥರು ಸಭೆಗೆ ಹಾಜರಾಗಬೇಕು. ಆದರೆ, ಈ ಅಧಿಕಾರಿಗಳು ಗೈರು ಹಾಜರಾದ ಕಾರಣ ಸಭೆಯಲ್ಲಿ ಗಂಭೀರ ಚರ್ಚೆಗೆ ಅವಕಾಶವಾಗಿರುವುದಿಲ್ಲ ಆದಕಾರಣ ಇವರೆಲ್ಲರಿಗೂ ತಮ್ಮ ಸಹಿಯುಳ್ಳ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದರು.
ಸಭೆಯನ್ನು ಜುಲೈ 8ಕ್ಕೆ ಮುಂದೂಡಿದ್ದು, ಅಷ್ಟರೊಳಗೆ ತಾಲೂಕು ಮಟ್ಟದಲ್ಲಿ ಮಾಡಬೇಕಾದ ಸಭೆಗಳನ್ನು ಪೂರ್ಣಗೊಳಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹಿಂದಿನ ಜಿಲ್ಲಾ ಸಮನ್ವಯ ಸಮಿತಿ ಅನುಪಾಲನ ವರದಿ ನೀಡುವುದು ಹಾಗೂ ಶಾಲಾ ವಲಯದ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮುಕ್ತ, ಮಾರಾಟ ನಿಷೇಧಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದ ಪ್ರಕರಣಗಳಿಗೆ 2024-25ನೇ ಸಾಲಿನ ಕೋಟ್ಪಾ ಕಾರ್ಯಚರಣೆ ನೀಡುವ ಗುರಿಯನ್ನು ಅನುಷ್ಠಾನಗೊಳಿಸಲು ತಾಲೂಕು ತನಿಖಾಧಿಕಾರಿಗಳ ಕಾರ್ಯಾಚರಣೆ ನಡೆಸಿರುವ ಬಗ್ಗೆ ಅಗತ್ಯ ವರದಿ ನೀಡುವಂತೆ ಸಭೆಯಲ್ಲಿ ತಿಳಿಸಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಚುನಾವಣೆಯ ಯಾವುದೇ ಕೆಲಸಕಾರ್ಯಗಳಿಗೆ ನಿಯೋಜನೆ ಮಾಡುವುದಿಲ್ಲ. ಆದಕಾರಣ ಅವರು ಕಾಲಕಾಲಕ್ಕೆ ತಮ್ಮ ವ್ಯಾಪ್ತಿಯಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡಾ.ನಿರಂಜನ್, ಜೆಆರ್‌ಸಿಎಚ್ ಅಧಿಕಾರಿ ಡಾ.ರಾಜು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಅಧಿಕಾರಿ ಕಿರಣ್ ಶಂಕರ್, ಚನ್ನಪಟ್ಟಣದ ತಾಲೂಕು ಅರೋಗ್ಯ ಆಧಿಕಾರಿ ಡಾ. ರಾಜು, ಮಾಗಡಿಯ ಆರೋಗ್ಯ ಅಧಿಕಾರಿ ಡಾ. ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.
30ಕೆಆರ್ ಎಂಎನ್ 3.ಜೆಪಿಜಿರಾಮನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಅಪರ ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.