ಬಿಡದಿ ಹೋಬಳಿ ಕೇತಗಾನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 11 ಮಂದಿ ಒತ್ತುವರಿದಾರರಿಗೆ ರಾಮನಗರ ತಹಸೀಲ್ದಾರ್ ತೇಜಸ್ವಿನಿ ನೋಟಿಸ್ ಜಾರಿ ಮಾಡಿದ್ದಾರೆ.
ರಾಮನಗರ: ಬಿಡದಿ ಹೋಬಳಿ ಕೇತಗಾನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 11 ಮಂದಿ ಒತ್ತುವರಿದಾರರಿಗೆ ರಾಮನಗರ ತಹಸೀಲ್ದಾರ್ ತೇಜಸ್ವಿನಿ ನೋಟಿಸ್ ಜಾರಿ ಮಾಡಿದ್ದಾರೆ.
ಕೇತಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 7,8,9, 16 ಹಾಗೂ 29ರಲ್ಲಿ 16 ಬ್ಲಾಕ್‌ಗಳಿದ್ದು, 11 ಮಂದಿ ಮಾಲೀಕರಿದ್ದಾರೆ. ಈ ಸರ್ವೆ ನಂಬರ್‌ಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಎಲ್ಲ 11 ಮಂದಿಗೆ ಅವರು ವಾಸವಿರುವ ಮನೆ ವಿಳಾಸಕ್ಕೆ ನೇರವಾಗಿ ಹಾಗೂ ಪೋಸ್ಟಲ್ ಮೂಲಕ ನೋಟಿಸ್ ನೀಡಲಾಗಿದೆ.
ಸರ್ವೆ ನಂಬರ್ 8 ಮತ್ತು 9ರಲ್ಲಿ ಕುಮಾರಸ್ವಾಮಿರವರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ 5 ಎಕರೆ 25 ಗುಂಟೆ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದೆ. ಇದೀಗ ನೋಟಿಸ್ ಪಡೆದಿರುವ 11 ಮಂದಿ 7 ದಿನದೊಳಗೆ ಸದರಿ ಭೂಮಿಯ ದಾಖಲೆ, ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಇಲ್ಲದಿದ್ದರೆ ಜಿಲ್ಲಾಡಳಿತ ಒತ್ತುವರಿ ಜಾಗ ತೆರವು ಮಾಡಲಿದೆ.
ಎಸ್ ಐಟಿ ತಂಡ ನೀಡಿದ ವರದಿ ಪ್ರಕಾರ ಸರ್ವೆ ಇಲಾಖೆ ಒತ್ತುವರಿಯಾಗಿರುವ 14 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಿ ಕೆಂಪು ಬಾವುಟ ಅಳವಡಿಸಿದ್ದಾರೆ. ಗುರುವಾರ ಕೆಂಪು ಬಾವುಟ ಇರುವ ಜಾಗಗಳಲ್ಲಿ ಕಲ್ಲಿನ ಕಂಬಗಳನ್ನು ನೆಡಲಾಗಿದೆ.
ನೋಟಿಸ್ ನಲ್ಲಿ ಏನಿದೆ ?
ಕೇತಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 8ರ ಬ್ಲಾಕ್ ನಂಬರ್ 3ರಲ್ಲಿ ಸರ್ಕಾರಿ ಗೋಮಾಳ ಜಾಗದಲ್ಲಿ ಹಾದು ಹೋಗಿರುವ 12 ಗುಂಟೆ ಹಳ್ಳವನ್ನು ಒತ್ತುವರಿ ಮಾಡಿಕೊಂಡಿರುವ ಲಕ್ಷ್ಮಮ್ಮ ಎಂಬುವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಒತ್ತುವರಿ ಮಾಡಿ ಸ್ವಾಧೀನದಲ್ಲಿರುವುದರಿಂದ ಏಕೆ ನಿಮ್ಮಿಂದ ಕರ್ನಾಟಕ ಭೂ ಕಂದಾಯ ಕಾಯ್ದ 1964ರ ಕಲಂ 94ರಡಿಯಲ್ಲಿ ದಂಡ ವಸೂಲಿ ಮಾಡಬಾರದೆಂಬುದಕ್ಕೆ ಹಾಗೂ ಸದರಿ ಸರ್ಕಾರಿ ಜಮೀನಿಗೆ ಅನಧಿಕೃತವಾಗಿ ಪ್ರವೇಶಿಸಿ ಒತ್ತುವರಿ ಮಾಡಿರುವುದಕ್ಕೆ ಏಕೆ ನಿಮ್ಮ ವಿರುದ್ಧ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 192 (ಎ)ರಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಾರದು ಎಂಬುದಕ್ಕೆ ಈ ನೋಟಿಸ್ ತಲುಪಿದ 7 ದಿನದೊಳಗಾಗಿ ನಿಮ್ಮ ಸಮಜಾಯಿಷಿ ಅಥವಾ ದಾಖಲೆಗಳು ಏನಾದರೂ ಇದ್ದಲ್ಲಿ ಸಲ್ಲಿಸುವುದು. ಇಲ್ಲದಿದ್ದರೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಎಚ್ಚರಿಕೆ ನೀಡಿದ್ದಾರೆ.