ಕನ್ನಡಪಭ ವಾರ್ತೆ ಶಿವಮೊಗ್ಗ
ರೈತವಿರೋಧಿ ಕೃಷಿ ಕಾಯ್ದೆಗಳ ರದ್ದುಪಡಿಸುವಂತೆ ಆಗ್ರಹಿಸಿ ನ.26ರಿಂದ ಅಖಿಲ ಭಾರತ ಕಿಸಾನ್ ಮೋರ್ಚಾ ಜೆಸಿಟಿಐ (ಕಾರ್ಮಿಕ ಜಂಟಿ ಸಮಿತಿ) ಸಹಯೋಗದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 72 ಗಂಟೆಗಳ ಕಾಲ ಮಹಾಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು.ಪ್ರೆಸ್ ಟ್ರಸ್ಟ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಪೊರೇಟ್ ಪರ ನವ ಉದಾರವಾದಿ ನೀತಿಗಳು ದೇಶದ ದುಡಿಯುವ ಜನರನ್ನು ಸಂಕಷ್ಟಕ್ಕೆ ದೂಡಿದೆ. ಕಾರ್ಪೊರೇಟ್ ತೆರಿಗೆಗಳನ್ನು ಕಡಿತ ಮಾಡುತ್ತಿರುವ ಕೇಂದ್ರ ಸರ್ಕಾರ, ಸಾಮಾನ್ಯ ಜನತೆ ಮೇಲೆ ಜಿ.ಎಸ್.ಟಿ ಹೊರೆ ವಿಧಿಸಿದೆ. ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಬಹುತೇಕ ಸಾರ್ವಜನಿಕ ಸೇವೆಗಳ ಜನತೆ ತತ್ತರಿಸುವಂತಾಗಿದೆ ಎಂದು ದೂರಿದರು.
ರಾಜ್ಯ ಸಂಪೂರ್ಣ ಬರಗಾಲವೆಂದು ಘೋಷಿತ ಆಗಿದ್ದರಿಂದ ತತ್‌ಕ್ಷಣದಿಂದ ರೈತರಿಗೆ ಎಕರೆಗೆ ₹20 ಸಾವಿರ ಪರಿಹಾರ ಘೋಷಿಸಬೇಕು. ರಾಜ್ಯದ 214 ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಿದೆ. ಆದರೆ, ರೈತರಿಗೆ ಬರಗಾಲ ಪರಿಹಾರಧನ ವಿತರಿಸುವ ಪ್ರಕ್ರಿಯೆ ಇದುವರೆಗೂ ಪ್ರಾರಂಭಿಸಿಲ್ಲ. ಇತ್ತೀಚೆಗೆ ರೈತರ ಐಪಿ ಸೆಟ್‌ಗಳಿಗೆ ಮೂಲಸೌಕರ್ಯವನ್ನು ರೈತರೇ ಮಾಡಿಕೊಳ್ಳಬೇಕೆಂದು ಸೂಚಿಸಿದೆ. ಇದರಿಂದ ರೈತರಿಗೆ ನಷ್ಟದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಪಾದಿಸಿದರು.ಕಾಂಗ್ರೆಸ್ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತವಿರೋಧಿ ಕಾಯ್ದೆಗಳನ್ನು ತಕ್ಷಣವೇ ವಾಪಾಸ್ ಪಡೆಯಬೇಕು. ವಿದ್ಯುತ್ ಕಾಯ್ದೆ ಖಾಸಗೀಕರಣ ಮಾಡದೇ ವಿಧಾನಸಭೆಯಲ್ಲಿ ನಿರ್ಣಯ ಮಾಡಿ, ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಐಪಿ ಸೆಟ್‌ಗಳಿಗೆ ರೈತರೇ ಸ್ವಯಂ ವೆಚ್ಚದಲ್ಲಿ ಕಂಬ, ತಂತಿ, ಟಿ.ಸಿ.ಗಳನ್ನು ಹಾಕಿಸಿಕೊಳ್ಳಬೇಕೆಂಬ ಆದೇಶ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಬರಗಾಲ ಸಂದರ್ಭದಲ್ಲಿ ಪಹಣಿ, ಮ್ಯುಟೇಷನ್, ಹದ್ದುಬಸ್ತು, ವರಮಾನ ಪ್ರಮಾಣ ಪತ್ರ, ಜಾತಿ ತಕ್ಷಣವೇ ಕಡಿಮೆ ಮಾಡಬೇಕು. ಪ್ರಮಾಣಪತ್ರ ಇತರೆ ಪ್ರಮಾಣ ಪತ್ರಗಳಿಗೆ ಹಿಂದಿಗಿಂತ 3ರಷ್ಟು ದುಬಾರಿ ಶುಲ್ಕ ವಿಧಿಸಿರುವುದನ್ನು ಹಿಂದಡೆಯಬೇಕು. ಆಹಾರ, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ವಿಸ್ತರಿಸಿ, ₹600 ಕೂಲಿ ನೀಡಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಕಸೆಟ್ಟಿ ರುದ್ರೇಶ, ಕೆ.ರಾಘವೇಂದ್ರ, ಹಿಟ್ಟೂರು ರಾಜು, ಸಿ.ಚಂದ್ರಪ್ಪ, ಎಂ.ಡಿ. ನಾಗರಾಜ್ ಮತ್ತಿತರರು ಇದ್ದರು.
- - - (-ಫೋಟೋ: ಎಚ್.ಆರ್. ಬಸವರಾಜಪ್ಪ)