ಕಾಂಗ್ರೆಸ್ಸಿನಲ್ಲಿ ನವೆಂಬರ್‌-ಡಿಸೆಂಬರ್‌ ಕ್ರಾಂತಿ: ಜೋಶಿ

KannadaprabhaNewsNetwork |  
Published : Oct 25, 2025, 01:00 AM IST
445456 | Kannada Prabha

ಸಾರಾಂಶ

ಪ್ರಧಾನಿ, ರಾಷ್ಟ್ರಪತಿ, ಸಂಸದರು, ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೋನಿಯಾ ಗಾಂಧಿ ಅವರೊಂದಿಗೆ ಏಕವಚನದಲ್ಲೇ ಮಾತನಾಡುತ್ತಾರೆಯೇ?. ಹಾಗೊಂದು ವೇಳೆ ಮಾತನಾಡಿದರೆ ಮರುಕ್ಷಣವೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ:

ಕಾಂಗ್ರೆಸ್ಸಿನಲ್ಲಿ ನವೆಂಬರ್‌-ಡಿಸೆಂಬರ್‌ ಕ್ರಾಂತಿಯಾಗಲಿದೆ ಎಂದು ಭವಿಷ್ಯ ನುಡಿದಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಂದಿನ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ ಎಂದು ಸಿದ್ದರಾಮಯ್ಯ ಯತ್ರೀಂದ್ರ ಮೂಲಕ ಹೇಳಿಸುತ್ತಿದ್ದಾರೆಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವು ಉತ್ತಮ ಆರ್ಥಿಕತೆ ಹೊಂದಿದೆ. ನಿಮ್ಮ ಧರಿದ್ರ ಆಡಳಿತವನ್ನು ಇಲ್ಲಿ ತರಲು ಹೋಗಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಜೋಶಿ ಕಿಡಿಕಾರಿದರು.

ಪ್ರಧಾನಿ, ರಾಷ್ಟ್ರಪತಿ, ಸಂಸದರು, ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೋನಿಯಾ ಗಾಂಧಿ ಅವರೊಂದಿಗೆ ಏಕವಚನದಲ್ಲೇ ಮಾತನಾಡುತ್ತಾರೆಯೇ? ಹಾಗೊಂದು ವೇಳೆ ಮಾತನಾಡಿದರೆ ಮರುಕ್ಷಣವೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ ಎಂದರು.

ನಾಲಿಗೆ ಮೇಲೆ ಹಿಡಿತವಿರಲಿ:

ಸಾರ್ವಜನಿಕ ಜೀವನದಲ್ಲಿ ಇರುವವರು, ಅದರಲ್ಲೂ ಎರಡು ಬಾರಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರಾದವರು ನಾಲಿಗೆಯ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು. ಸಂಸದ ತೇಜಸ್ವಿ ಸೂರ್ಯ ಅವರಿಗೆ ಅವಾಚ್ಯ ಪದ ಬಳಸಿ ಮಾತನಾಡಿದ್ದೀರಿ, ನಿಮಗೆ ನಾಚಿಕೆಯಾಗಬೇಕು. ನಿಮ್ಮ ಹಾಗೆ ಕೆಟ್ಟ ಭಾಷೆ ಬಳಸಲು ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರು ನಮಗೆ ಹೇಳಿ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಅಡ್ರೆಸ್‌ ಇಲ್ಲದಂತಾಗುತ್ತೀರಿ:

ಸಿದ್ದರಾಮಯ್ಯನವರಿಗೆ ಒಂದು ಬಾರಿಯೂ ಸಂಸತ್ ಸದಸ್ಯರಾಗುವ ಯೋಗ್ಯತೆಯಿಲ್ಲ. ಸಂಸದ ತೇಜಸ್ವಿ ಸೂರ್ಯ ರಾಜಕಾರಣದಲ್ಲಿ ನಿಮಗಿಂತ ಕಿರಿಯರು, ಒಬ್ಬ ಹಿರಿಯ ರಾಜಕಾರಣಿಯಾಗಿ ಕಿರಿಯರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀರಿ. ಈ ಮನಸ್ಥಿತಿಯಲ್ಲಿರುವ ಕಾಂಗ್ರೆಸ್‌ ಪಕ್ಷವನ್ನು ದೇಶದ ಜನತೆ ಮೂಲೆಗುಂಪು ಮಾಡಿದ್ದಾರೆ. ಇನ್ನಾದರೂ ಇವರು ತಮ್ಮ ನಡವಳಿಕೆ ಸುಧಾರಿಸಿಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅಡ್ರೆಸ್ ಇಲ್ಲದಂತೆ ಆಗುತ್ತಾರೆ ಎಂದು ಟೀಕಿಸಿದರು.

ಶೇ. 273 ಪಟ್ಟು ಅನುದಾನ:

ರಾಜ್ಯದ ಅಭಿವೃದ್ಧಿಯ ಬಗ್ಗೆ ಪ್ರಶ್ನಿಸಿದಾಗ ನೇರವಾಗಿ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವ ಕಾಂಗ್ರೆಸ್ ನಾಯಕರು, 2004ರಿಂದ 2014ರ ವರೆಗೆ ಕೇಂದ್ರದಲ್ಲಿದ್ದ ಕಾಂಗ್ರೆಸ್, ರಾಜ್ಯಕ್ಕೆ ಕೇವಲ ₹81,795 ಕೋಟಿ ಅನುದಾನ ನೀಡಿತ್ತು. ಆದರೆ, 2014-2024ರ ವರೆಗೆ ನಮ್ಮ ಸರ್ಕಾರ ರಾಜ್ಯಕ್ಕೆ ₹2.93 ಲಕ್ಷ ಕೋಟಿ ಅನುದಾನ ನೀಡಿದೆ. ಅವರ ಅವಧಿಗೆ ಹೋಲಿಸಿದರೆ ಶೇ. 273ರಷ್ಟು ಹೆಚ್ಚು ಅನುದಾನ ಒದಗಿಸಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದರು.

ಸಿದ್ದರಾಮಯ್ಯ ನಿರ್ಲಜ್ಜ ಸಿಎಂ:

ರಸ್ತೆಯಲ್ಲಿರುವ ತಗ್ಗು-ಗುಂಡಿ ಮುಚ್ಚಿಸಲಾಗದ ನಿರ್ಲಜ್ಜ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು. ಕಾಂಗ್ರೆಸ್ ಪಕ್ಷದವರಿಗೆ ಯಾವುದೇ ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಆಡಳಿತಾತ್ಮಕವಾಗಿ ಅಧೋಗತಿಗೆ ಇಳಿದಿರುವ ರಾಜ್ಯ ಸರ್ಕಾರಕ್ಕೆ ರಾಜಕೀಯ ಅಸ್ಥಿರತೆ ಕಾಡುತ್ತಿದೆ ಎಂದು ಜೋಶಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!