ರಾಜ್ಯದಲ್ಲೂ ದ್ವಿಭಾಷಾ ನೀತಿ ಜಾರಿಗಾಗಿ ಹೋರಾಟ

KannadaprabhaNewsNetwork | Updated : Jul 01 2025, 06:48 AM IST

ತ್ರಿಭಾಷಾ ಸೂತ್ರಕ್ಕೆ ಮಹಾರಾಷ್ಟ್ರ ಸರ್ಕಾರ ಕೊಕ್ ಕೊಟ್ಟ ಬೆನ್ನಲ್ಲೇ ಕರ್ನಾಟಕದಲ್ಲೂ ತ್ರಿಭಾಷಾ ಸೂತ್ರ ಕೈಬಿಟ್ಟು ದ್ವಿಭಾಷಾ ನೀತಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಲು ಕನ್ನಡಪರ ಹೋರಾಟಗಾರರು, ಸಾಹಿತಿಗಳು ಮುಂದಾಗಿದ್ದಾರೆ.

  ಬೆಂಗಳೂರು :  ತ್ರಿಭಾಷಾ ಸೂತ್ರಕ್ಕೆ ಮಹಾರಾಷ್ಟ್ರ ಸರ್ಕಾರ ಕೊಕ್ ಕೊಟ್ಟ ಬೆನ್ನಲ್ಲೇ ಕರ್ನಾಟಕದಲ್ಲೂ ತ್ರಿಭಾಷಾ ಸೂತ್ರ ಕೈಬಿಟ್ಟು ದ್ವಿಭಾಷಾ ನೀತಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಲು ಕನ್ನಡಪರ ಹೋರಾಟಗಾರರು, ಸಾಹಿತಿಗಳು ಮುಂದಾಗಿದ್ದಾರೆ.

ತ್ರಿಭಾಷಾ ನೀತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಯಾವುದೇ ಅನುಕೂಲವಿಲ್ಲ. ಇದು ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಒಂದು ಭಾಗ. ತ್ರಿಭಾಷಾ ನೀತಿಯಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಮತ್ತೊಂದು ಭಾಷೆ ಕಲಿಯಬೇಕಾದ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ವಿಷಯ ಕಲಿಕೆಗೆ, ಜ್ಞಾನ ಬೆಳೆಸಲು ಎರಡು ಭಾಷೆ ಸಾಕು. ಇಲ್ಲದಿದ್ದರೆ ಭಾಷೆ ಕಲಿಕೆಯೇ ಒಂದು ಹೊರೆಯಾಗಿ ಮಕ್ಕಳು ಭಾಷೆಗಳನ್ನು ಕಲಿಯುವುದಕ್ಕಾಗಿ ತಮ್ಮ ಅಮೂಲ್ಯವಾದ ಸಮಯ ಮೀಸಲಿಟ್ಟು ವಿಷಯಗ್ರಹಣೆ ಮಾಡುವ ಸಮಯಾವಕಾಶ ಕಡಿಮೆಯಾಗುತ್ತದೆ. ಕಡ್ಡಾಯವಾಗಿ ಮೂರು ಭಾಷೆಗಳನ್ನು ಕಲಿಯಬೇಕೆಂಬ ನಿಯಮ ಇಲ್ಲದಿದ್ದಾಗ ಎರಡನ್ನು ಮಾತ್ರ ಕಲಿಯುತ್ತಾರೆ ಎಂಬುದು ಹಲವರ ಅಭಿಪ್ರಾಯ.

ಕನ್ನಡಿಗರು ಕನ್ನಡಿಗರೊಂದಿಗೆ ವ್ಯವಹರಿಸಲು ಕನ್ನಡ ಕಲಿಯುತ್ತಾರೆ. ಮರಾಠಿ, ಫ್ರೆಂಚ್‌, ಜರ್ಮನಿ, ಹಿಂದಿ, ಇಂಗ್ಲಿಷ್‌, ಸೇರಿ ಯಾವುದೇ ಕನ್ನಡೇತರರೊಡನೆ ವ್ಯವಹರಿಸಲು ಇಂಗ್ಲಿಷ್‌ ಭಾಷೆ ಸಾಕು. ಇದೇ ರೀತಿ ಬಹುತೇಕ ಕಡೆ ಇದೇ ಮಾದರಿ ಅನುಸರಿಸಲಾಗುತ್ತಿದೆ. ಹಿಂದಿ ರಾಜ್ಯಕ್ಕೆ ಹೋದರೂ ಅವರ ಮಾತೃಭಾಷೆ ಜೊತೆಗೆ ಇಂಗ್ಲಿಷ್‌ ಕಲಿಯುತ್ತಿದ್ದಾರೆ. ಜಗತ್ತಿನ ಬೇರೆ ಬೇರೆ ದೇಶಗಳಿಗೆ ಹೋದಾಗ ಕೂಡ ದ್ವಿಭಾಷಾ ನೀತಿಯನ್ನೇ ಅನುಸರಿಸುತ್ತಿದ್ದಾರೆ. ಕೆಲವೊಂದು ಹಿಂದಿ ಮೂಲಭೂತವಾದಿಗಳ ಅಹಂ ತಣಿಸಲು ಕನ್ನಡಿಗರು ಇನ್ನೊಂದು ಭಾಷೆ (ಮೂರನೇ ಭಾಷೆ) ಕಲಿಯುವಂತಾಗಿದೆ. ತ್ರಿಭಾಷಾ ಸೂತ್ರ ಎನ್ನುವುದೊಂದು ಮೋಸದ ಸೂತ್ರ.

60ರ ದಶಕದಲ್ಲಿ ಹಿಂದಿಯನ್ನು ದೇಶದ ಆಡಳಿತ ಭಾಷೆಯನ್ನಾಗಿ ಮಾಡಲು ಹೊರಟಿದ್ದರು. ಅದನ್ನು ವಿರೋಧ ಮಾಡಿದ್ದಕ್ಕಾಗಿಯೇ ತ್ರಿಭಾಷಾ ಸೂತ್ರ ಜಾರಿಗೆ ತರಲಾಗಿತ್ತು. ತ್ರಿಭಾಷಾ ಸೂತ್ರವನ್ನು ಬೇರೆ ಭಾಷೆಗಳನ್ನು ಉದ್ಧಾರ ಮಾಡುವುದಕ್ಕಾಗಿ ತಂದದ್ದಲ್ಲ. ಹಿಂದಿ ಉದ್ಧರಿಸಲು ಹೂಡಿದ ಷಡ್ಯಂತ್ರವಿದು. ಹಿಂದಿಯವರ ಮೋಸದ ಬಲೆಗೆ ನಾವೆಲ್ಲ ಬಿದ್ದಿದ್ದೇವೆ. ಈ ಪರಿಣಾಮವಾಗಿ ಇಂದು ವಿದ್ಯಾರ್ಥಿಗಳು ತ್ರಿಭಾಷಾ ಸೂತ್ರದಿಂದ ಬಳಲುತ್ತಿದ್ದಾರೆ. ಕಳೆದ ವರ್ಷ ಹಿಂದಿ ಭಾಷೆಯ ಪರೀಕ್ಷೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಫೇಲ್‌ ಆಗಿದ್ದಾರೆ. ಇದರಿಂದ ತಮ್ಮ ಭವಿಷ್ಯ ಕಳೆದುಕೊಳ್ಳುವಂತಹ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಆದ್ದರಿಂದ ತ್ರಿಭಾಷಾ ಸೂತ್ರ ತೊಲಗಿಸಿ ದ್ವಿಭಾಷಾ ಸೂತ್ರ ಜಾರಿಗೊಳಿಸಬೇಕು ಎನ್ನುತ್ತಾರೆ ‘ನಮ್ಮ ನಾಡು ನಮ್ಮ ಆಳ್ವಿಕೆ’ ಸಂಸ್ಥೆ ಉಪಾಧ್ಯಕ್ಷ ಅರುಣ್‌ ಜಾವಗಲ್‌.

3ನೇ ಭಾಷೆ ಬೇಡ:

ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರ ಅಗತ್ಯವಿಲ್ಲ. ಪರೀಕ್ಷೆಗೆಂದು ಎರಡು ಭಾಷೆ ಇದ್ದರೆ ಸಾಕು. ಒಂದು ಭಾಷೆಯಾಗಿ ಕನ್ನಡ, ಮತ್ತೊಂದು ಭಾಷೆಯಾಗಿ ಇಂಗ್ಲಿಷ್‌ ಇದ್ದರೆ ಸಾಕು. ಮೂರನೇ ಭಾಷೆ ಕಲಿಸಬೇಕೆಂದಿದ್ದರೆ ಅದನ್ನು ವಿದ್ಯಾರ್ಥಿಗಳ ಆಯ್ಕೆಯ ಪ್ರಕಾರ ಕಲಿಯಲು ಬಿಡಬೇಕು. ಪರೀಕ್ಷೆಯಲ್ಲಿ ಕಡ್ಡಾಯವಾಗಿ ಈ ಭಾಷೆಯಲ್ಲಿ ಉತ್ತೀರ್ಣರಾಗಬೇಕೆಂಬ ನಿರ್ಬಂಧ ಇರಬಾರದು. ಭಾಷಾ ಕಲಿಕೆಗೋಸ್ಕರ ವಿದ್ಯಾರ್ಥಿಗಳು ಸೋದರ ದ್ರಾವಿಡ ಭಾಷೆಗಳಲ್ಲಿ ಒಂದನ್ನು ಕಲಿಯಬಹುದು. ಇಲ್ಲವೇ ಹಿಂದಿಯೂ ಸೇರಿ ಉತ್ತರ ಭಾರತದ ಇತರೆ ಯಾವುದೇ ಒಂದು ಭಾಷೆ ಕಲಿಯಲಿ. ದಕ್ಷಿಣದ ರಾಜ್ಯಗಳಲ್ಲಿ ಎರಡು ಭಾಷೆಗಳು ಸಾಕು. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ ಎನ್ನುತ್ತಾರೆ ಹಿರಿಯ ಸಾಹಿತಿ ಬಂಜಗೆರೆ ಜಯಪ್ರಕಾಶ್‌.

ದ್ವಿಭಾಷಾ ನೀತಿಗಾಗಿ ಅಭಿಯಾನ

ತ್ರಿಭಾಷಾ ನೀತಿಯಿಂದ ನಮ್ಮ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಹಿಂದಿ ಕಲಿಯಬೇಕಾಗಿದೆ. 2024-25ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ 1.24 ಲಕ್ಷ ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ. ಅಗತ್ಯವಿಲ್ಲದ ಭಾಷೆಯನ್ನು ಯಾರದ್ದೇ ಅಹಂ ತಣಿಸುವ ಉದ್ದೇಶದಿಂದ ನಮ್ಮ ಮಕ್ಕಳನ್ನು ಬಲಿ ಕೊಡುತ್ತಿದ್ದೇವೆ. ಆದ್ದರಿಂದ ದ್ವಿಭಾಷಾ ನೀತಿ ಬೆಂಬಲಿಸಿ ಅಭಿಯಾನ ನಡೆಸುತ್ತಿದ್ದೇವೆ.

- ಅರುಣ್‌ ಜಾವಗಲ್‌, ಉಪಾಧ್ಯಕ್ಷ, ನಮ್ಮ ನಾಡು ನಮ್ಮ ಆಳ್ವಿಕೆ

ಕನ್ನಡಿಗರಿಗೆ ಅನ್ಯಾಯ

ಮಾತೃಭಾಷೆ ಕನ್ನಡ ಬೇಕು. ಎರಡನೇ ಭಾಷೆಯಾಗಿ ಇಂಗ್ಲಿಷ್‌ ಸಾಕು. ದ್ವಿಭಾಷಾ ಸೂತ್ರ ಒಳ್ಳೆಯದು. ನಮ್ಮ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯ ಅವಶ್ಯಕತೆ ಇಲ್ಲ. ಶಿಕ್ಷಣ, ನೌಕರಿ ಸೇರಿ ಇನ್ನಿತರ ಅವಕಾಶಗಳಲ್ಲಿ ಹಿಂದಿ ಹೇರಲಾಗುತ್ತಿದ್ದು, ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ದ್ವಿಭಾಷಾ ಸೂತ್ರ ಅನುಸರಿಸಬೇಕು.

- ಮನುಬಳಿಗಾರ್‌, ನಿಕಟಪೂರ್ವ ಅಧ್ಯಕ್ಷ, ಕಸಾಪ

ತೃತೀಯ ಸ್ಥಾನಕ್ಕಿಳಿದಿದೆ

ತ್ರಿಭಾಷಾ ಸೂತ್ರದಿಂದ ಕನ್ನಡ ಪ್ರಥಮ ಮತ್ತು ದ್ವಿತೀಯ ಸ್ಥಾನ ಕಳೆದುಕೊಂಡು ತೃತೀಯ ಸ್ಥಾನಕ್ಕೆ ಇಳಿದಿದೆ. ಎಲ್ಲ ಖಾಸಗಿ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕನ್ನಡ ಕಲಿಸಿದರೆ ಕಲಿಸದಿದ್ದರೆ ಇಲ್ಲ. ಕರ್ನಾಟಕದಲ್ಲಿ ಕನ್ನಡ ಕಳೆದು ಹೋಗುವಂತ ಸ್ಥಿತಿ ಕಾರಣವೇ ಈ ತ್ರಿಭಾಷಾ ಸೂತ್ರ. ದ್ವಿಭಾಷಾ ಸೂತ್ರವೇ ನಮಗೆ ಸಾಕು.

- ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ

ನಾವು ದ್ವಿಭಾಷಾ

ಶಿಕ್ಷಣ ನೀತಿ ಪರಮಹಾರಾಷ್ಟ್ರದಲ್ಲಿ ದ್ವಿಭಾಷಾ ಶಿಕ್ಷಣಕ್ಕೆ ಅಸ್ತು ವಿಚಾರ‌ ಗಮನಕ್ಕೆ ಬಂದಿದೆ. ನಾವು ದ್ವಿಭಾಷಾ ಶಿಕ್ಷಣದ ಪರ ಇದ್ದೇವೆ. ಮೊದಲಿನಿಂದಲೂ ನಮ್ಮದು ದ್ವಿಭಾಷಾ ಶಿಕ್ಷಣದ ವಾದ ಇದೆ. ಈಗಲೂ ದ್ವಿಭಾಷಾ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ನಾವು ಬದ್ಧ

-ಸಿದ್ದರಾಮಯ್ಯ, ಮುಖ್ಯಮಂತ್ರಿ

Read more Articles on