ಸಾರಾಂಶ
ನವಲಗುಂದ: ಗೋವಿನಜೋಳ ಬೆಳೆಗೆ ₹3 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು ಹಾಗೂ ಹೆಸರು ಕಾಳನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಿ ರೈತರಿಂದ ಖರೀದಿಸಬೇಕು ಎಂದು ಆಗ್ರಹಿಸಿ ರೈತ ಸೇನಾ ಕರ್ನಾಟಕ ಆರಂಭಿಸಿದ ಆಮರಣ ಉಪವಾಸ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ ಸತ್ಯಾಗ್ರಹ ನಿರತ ರೈತ ಸೇನಾ ಅಧ್ಯಕ್ಷ ಶಂಕರಪ್ಪ ಅಂಬಲಿ ಆರೋಗ್ಯದಲ್ಲಿ ಏರುಪೇರಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಮಾತನಾಡಿದ ಉಪವಾಸ ನಿರತ ರೈತ ಸೇನಾ ಕರ್ನಾಟಕದ ಅಧ್ಯಕ್ಷ ಶಂಕರಪ್ಪ ಅಂಬಲಿ, ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸರ್ಕಾರ ರೈತರ ಬಗ್ಗೆ ನಿಷ್ಕಾಳಜಿ ತೋರಿಸುತ್ತದೆ. ರಾಜ್ಯದಲ್ಲಿ 35 ಲಕ್ಷ ಮೆಟ್ರಿಕ್ ಟನ್ ಗೋವಿನಜೋಳ ಬೆಳೆಯಲಾಗಿದ್ದು ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಪತ್ರ ಮುಖೇನ ಕೇವಲ 10 ಲಕ್ಷ ಮಟ್ರಿಕ್ ಟನ್ ಖರೀದಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಣ್ಣ ಹಿಡುವಳಿದಾರ ರೈತರು ಈಗಾಗಲೇ ತಮ್ಮ ಕುಟುಂಬದ ಸಮಸ್ಯೆ ನಿವಾರಣೆಗೆ ಅನಿವಾರ್ಯವಾಗಿ ಕೇವಲ ₹1500ಕ್ಕೆ ಕ್ವಿಂಟಲ್‌ನಂತೆ ಗೋವಿನಜೋಳ ಮಾರಾಟ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ಕೂಡಲೇ ಎಲ್ಲ ರೈತರ ಗೋವಿನಜೋಳ ಖರೀದಿಗೆ ಮುಂದಾಗಬೇಕು ಎಂದು ಆಗ್ರಹಿದರು.
ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಉಪವಾಸ ಸತ್ಯಾಗ್ರಹ ಹಿಂಪಡೆಯಲು ಮನವಿ ಮಾಡಿದರೂ ಬಗ್ಗದ ಹೋರಾಟಗಾರರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಅನುಕೂಲವಾಗುವಂತೆ ನಿಖರ ಭರವಸೆ ನೀಡುವ ವರೆಗೂ ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಸತ್ಯಾಗ್ರಹಿ ಶಂಕರಪ್ಪ ಅಂಬಲಿ ಅವರು ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದು, ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದರಿಂದ ಸ್ಥಳದಲ್ಲಿಯೇ ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ.
ಸತ್ಯಾಗ್ರಹದಲ್ಲಿ ಶೇಶಪ್ಪ ಬೆಳಹಾರ, ಪ್ರವೀಣ ಯರಗಟ್ಟಿ, ಶಂಕರಗೌಡ ಪಾಟೀಲ್, ಲೋಕನಾಥ ಹೆಬಸೂರ, ಎಸ್.ಎಸ್. ಪಾಟೀಲ, ಅರುಣ ಪಟ್ಟಣಶೆಟ್ಟಿ, ಬಸನಗೌಡ ಪಾಟೀಲ, ಸಿದ್ದಲಿಂಗಪ್ಪ ಮಾಶ್ಯಾಳ, ಸಿದ್ದು ನಿಡವಣಿ, ಈರಣ್ಣ ಸೊಪ್ಪಿನ ಮತ್ತಿತರರು ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))