ಕಲಗಾರು ಲಕ್ಷ್ಮೀನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ತಾಳಗುಪ್ಪ ದಟ್ಟಾರಣ್ಯದ ನಡುವಿನ ಶಿವಕ್ಷೇತ್ರ ಭೀಮೇಶ್ವರದಲ್ಲಿ ಈಗ ಶಿವರಾತ್ರಿಯ ಪರ್ವಕಾಲ. ಶಿವ ಸಾನ್ನಿಧ್ಯದಲ್ಲಿ ಪೆಬ್ರವರಿ 25 ರಿಂದ ಮಾರ್ಚ್ 1 ರವರೆಗೆ ಮಹಾಶಿವರಾತ್ರಿ ಮಹೋತ್ಸವ ನಡೆಯುತ್ತಿದೆ. ಜನ ನಿಬಿಡ ಪ್ರದೇಶದಲ್ಲಿ 5 ದಿನಗಳ ಕಾಲ ನಡೆಯುವ ಈ ಧಾರ್ಮಿಕ ಕಾರ್ಯಕ್ರಮ ಕುಗ್ರಾಮಕ್ಕೆ ಜೀವ ಕಳೆ ತುಂಬುತ್ತದೆ. ಭೀಮೇಶ್ವರ :ಸಾಗರ ತಾಲೂಕಿನ ಬಾರಂಗಿ ಹೋಬಳಿಯ ದಟ್ಟ ಕಾನನದ ಮಧ್ಯೆ, ಗೋವನರ್ಧನಗಿರಿಯ ಕಡಿದಾದ ಪಾರ್ಶ್ವವದಲ್ಲಿರುವ ಭೀಮೇಶ್ವರ ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು, ಉತ್ತರ ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖಿತವಾದ ಶಿವ ಕ್ಷೇತ್ರವಾಗಿದೆ. ಪಾಂಡವರು ತಮ್ಮ ವನವಾಸ ಕಾಲದಲ್ಲಿ ಇಲ್ಲಿ ಕೆಲಕಾಲವಿದ್ದರು ಎಂಬ ಪ್ರತೀತಿ ಇದೆ. ಅದಕ್ಕೆ ಪೂರಕವಾಗಿ ದೇವಾಲಯದ ಸಮೀಪದಲ್ಲಿ ಪಾಂಡವರ ದಿಬ್ಬ ಎಂಬ ಪ್ರದೇಶವೂ, ಹಿಡಿಂಬಾವನ ಎನ್ನುವ ಪ್ರದೇಶವೂ ಇದೆ.ಇಲ್ಲಿನ ಭೀಮೇಶ್ವರ ಲಿಂಗವು ಪಾಂಡವರ ಪ್ರತಿಷ್ಠಾಪನೆ ಎಂಬ ನಂಬಿಕೆಗೆ ಪಾತ್ರವಾಗಿದೆ. ಶಿವನನ್ನು ಪೂಜಿಸುವ ತನ್ನ ತಾಯಿಯ ಇಚ್ಛೆ ಪೂರೈಸಲು ಪಾಂಡವರಲ್ಲೊಬ್ಬನಾದ ಭೀಮಸೇನ ಸ್ವರ್ಗದಿಂದ ಈ ಶಿವಲಿಂಗ ತಂದು ಗೋವನರ್ಧನಗಿರಿಯ ಒಂದು ಪಾರ್ಶ್ವದ ಬೃಹತ್ ಬಂಡೆಯನ್ನು ಕಿತ್ತು ಪೊಟರೆಯಂತಹ ಸ್ಥಳದಲ್ಲಿ ಪ್ರತಿಷ್ಠಾಪಿಸಿದ. ಅರ್ಜುನ ಬಾಣ ಬಿಟ್ಟು ಶಿವನ ಅಭಿಷೇಕಕ್ಕೆ ಜಲದಾರೆ ಸೃಷ್ಟಿಸಿದ ಎಂದು ಪುರಾಣ ಕಥೆಗಳಿವೆ. ಈ ಕಥೆಯನ್ನು ಪುಷ್ಟಿಕರಿಸುವಂತೆ ಭೀಮೇಶ್ವರ ಲಿಂಗ ಪರ್ವತದ ಕಡಿದಾದ ಪಾರ್ಶ್ವದಲ್ಲಿ ನೆಲಮಟ್ಟದಿಂದ ಸುಮಾರು 200 ಅಡಿ ಎತ್ತರದಲ್ಲಿ, ಪೊಟರೆಯಂತಹ ಸ್ಥಳದಲ್ಲಿದೆ. ಈ ಲಿಂಗಕ್ಕೆ ಬೃಹತ್ ಬಂಡೆಯೇ ಚಾವಣಿಯಾಗಿದೆ. ಭೀಮಲಿಂಗೇಶ್ವರ ಲಿಂಗದ ಬಲಭಾಗದಲ್ಲಿ ಸಾವಿರಾರು ವರ್ಷದ ಕಲಾತ್ಮಕ ಕೆತ್ತನೆಯ ಬಸವ ಮಂಟಪ ಇದೆ. ದೇವಾಲಯಕ್ಕೆ ತೆರಳಲು 150 ಮೆಟ್ಟಲು ಹತ್ತಿ ಸಾಗಬೇಕಿದೆ.
ಶಿವಲಿಂಗ ಪ್ರತಿಷ್ಠಾಪಿಸಲು ಭೀಮ ಪರ್ವತದಿಂದಕಿತ್ತಿದ್ದೆಂದು ಹೇಳಲಾಗುವ ಭಾರಿಗಾತ್ರದ ಬಂಡೆಯೊಂದು ಮೇಲಿನಿಂದ ಉರುಳಿ ಬಿದ್ದ ಸ್ಥಿತಿಯಲ್ಲಿ ನೆಲಮಟ್ಟದಲ್ಲಿದೆ. ಅರ್ಜುನನ ಬಾಣದಿಂದ ಹುಟ್ಟಿತು ಎಂಬ ಪ್ರತೀತಿ ಇರುವ ಜಲಧಾರೆ ಬೀಮಲಿಂಗೇಶ್ವರ ಲಿಂಗದಿಂದ ಸುಮಾರು 30- 40 ಅಡಿ ಎತ್ತರದಿಂದ ಕಲ್ಲಿನ ಪದರದಿಂದ ಹನಿ ಹನಿಯಾಗಿ ಜಿನುಗಿ 8-9 ಇಂಚಿನಷ್ಟು ಜಲಧಾರೆಯಾಗಿ ಇಳಿದಿಳಿದು ಬರುತ್ತದೆ. ಭೀಮೇಶ್ವರದಿಂದ ಹೊರಟ ಜಲಧಾರೆ ಸರಳ ಹೊಳೆ ಎಂಬ ಹೆಸರಿನಲ್ಲಿ ಸಣ್ಣ ಪುಟ್ಟ ಹಳ್ಳಗಳನ್ನು ತನ್ನೊಡಲಲ್ಲಿ ಸೇರಿಸಿಕೊಂಡು ಸುಮಾರು 25 ಕಿಮಿ ಹರಿದು, ಮುಂದೆ ವೆಂಕಟಾದ್ರಿ ಹೊಳೆಯಾಗಿ ಭಟ್ಕಳ ಸಮೀಪ ಸಮದ್ರದಲ್ಲಿ ಲೀನವಾಗುತ್ತದೆ. ಭೌಗೋಲಿಕವಾಗಿ ಭೀಮೇಶ್ವರವು ಬಾರಂಗಿ ಹೋಬಳಿಯ ಗುಡೆಹಿತ್ಲು ಗ್ರಾಮಕ್ಕೆ ಸೇರಿದ ಮಜಿರೆ ಗ್ರಾಮವಾಗಿದೆ. ಒಂದು ಕಾಲದಲ್ಲಿ ಜನಭರಿತ ಪ್ರದೇಶವಾಗಿದ್ದ ಭೀಮೇಶ್ವರವು ಕಳೆದ ಶತಮಾನದ ಪ್ರಾರಂಭದಲ್ಲಿ ಕಂಡ ಗುದ್ದಮ್ಮನ ಜ್ವರದಲ್ಲಿ ( ಪ್ಲೇಗ್) ಬಹುತೇಕರು ಸಾವಿಗೀಡಾದ್ದರಿಂದ, ಅಳಿದುಳಿದವರು ಊರನ್ನು ತೊರೆದಿದ್ದರಿಂದ ನಿರ್ವಸಿತ ಪ್ರದೇಶವಾಗಿ, ಕಾಡು ಬೆಳೆಯಿತು. ಕಾಡಿನಲ್ಲಿ ಮನೆಯ ನೆಲಗಟ್ಟಿನ ಕುರುಹುಗಳಿವೆ. ಊರು ತೊರೆದು ಬಂದವರು ಎನ್ನಲಾದ ಹಲವು ಕುಟುಂಬಗಳು ಅರಳಗೋಡು, ಹುಕ್ಲು, ಮಲ್ಲಕ್ಕಿ, ತಲಗಿಣಿ, ಮಾವಿನಗುಂಡಿ ಪ್ರದೇಶದಲ್ಲಿದ್ದು, ಅವರಿಗೆಲ್ಲಾ ಬೀಮಲಿಂಗೇಶ್ವರನೇ ಕುಲದೇವರಾಗಿದ್ದಾನೆ. ಈ ಕುಟುಂಬಗಳು ಆರೇಳು ದಿನಗಳ ಮುಂಚಿತವಾಗಿಯೇ ಸಾಮಾನು ಸರಂಜಾಮನ್ನು ಹೊತ್ತು ಭೀಮೇಶ್ವರಕ್ಕೆ ಬಂದು ಪಾರಂಪರಿಕ ಪೂಜೆ, ಅನ್ನ ಸಂತರ್ಪಣೆ, ನಡೆಸಿ ಶಿವರಾತ್ರೆಯ ಪರ್ವಕಾಲವನ್ನು ಜಾತ್ರೆಯಾಗಿಸುತ್ತಾರೆ.ಶಿವರಾತ್ರಿಯ ಕಾಲದಲ್ಲಿ 20-25 ಕಿಮಿ ಸುತ್ತ ಮುತ್ತಲಿನ ಗ್ರಾಮಸ್ಥರು ತಾವು ಬೆಳದ ಬೆಳೆಯ ಹೊರೆಗಾಣಿಕೆ ಸಮರ್ಪಿಸಿ ಪೂಜೆ ಸಲ್ಲಿಸುವ ಪರಿಪಾಠವಿದೆ. 5 ದಿನಗಳ ಕಾಲ ನಡೆಯುವ ಮಹೋತ್ಸವ ಕಾಲದಲ್ಲಿ ಶಿವರಾತ್ರಿ ಹಾಗೂ ಅಮವಾಸ್ಯೆ ಪುಣ್ಯಕಾಲ ಎಂದು ಪರಿಗಣಿತವಾಗಿದ್ದು, ಅಂದು ನೂರಾರು ಕಿಮಿ ದೂರದಿಂದಲೂ ಭಕ್ತರು ಬಂದು ಸರಳ ಹೊಳೆಯಲ್ಲಿ ಮಿಂದು ಶಿವಲಿಂಗಕ್ಕೆ ಅಭಿಷೇಕಮಾಡಿ, ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ಕೇದಿಗೆ ಹೂವು, ತಿಲಿಗೆ ಹೂವು ಸಮರ್ಪಿಸುತ್ತಾರೆ. ಮಾರ್ಗ ಸೂಚಿ :
ಸಾಗರ ಪಟ್ಟಣಕ್ಕೆ ಸುಮಾರು 80 ಕಿಮಿ ಇರುವ ಈ ಕ್ಷೇತ್ರ ಕಾರ್ಗಲ್ ಭಟ್ಕಳ ಮಾರ್ಗ ಮಧ್ಯೆ ಇದೆ. ಕೋಗಾರಿನಿಂದ ಸ್ವಲ್ಪ ದೂರದಲ್ಲಿರುವ ಭೀಮೇಶ್ವರ ಕ್ರಾಸಿನಿಂದ ಸುಮಾರು 3 ಕಿಮಿ ಇದೆ. ಹಿಂದೆ ಕಾಲುದಾರಿಯಲ್ಲಿ ನಡೆದು ಹೋಗಬೇಕಿದ್ದ ಈ ಸ್ಥಳಕ್ಕೆ 8-10 ವರ್ಷಗಳಿಂದೀಚಿಗೆ ವಾಹನ ಸಾಗುವಂತಹ ರಸ್ತೆ, ಸರಳ ಹೊಳೆಗೆ ಸೇತುವೆ ನಿರ್ಮಿಸಲಾಗಿದೆ.ಸಾಗರದಿಂದ ಕಾರ್ಗಲ್ ಭಟ್ಕಳ ಮಾರ್ಗದಲ್ಲಿ ಭೀಮಲಿಂಗೇಶ್ವರ ಕ್ರಾಸ್, ಮಂಗಳೂರಿನಿಂದ ಕಾರವಾರ ರಾಷ್ಟ್ರೀಯ ಹೆದ್ದಾರಿ 17ರಿಂದ ಭಟ್ಕಳ ಸಾಗರ ಮಾರ್ಗದಲ್ಲಿ ಭೀಮಲಿಂಗೇಶ್ವರ ಕ್ರಾಸ್, ಹುಬ್ಬಳ್ಳಿಯಿಂದ ಸಿರ್ಸಿ, ಸಿದ್ದಾಪುರ ಜೋಗ್ ಫಾಲ್ಸ ಕಾರ್ಗಲ್, ಭಟ್ಕಳ ರಸ್ತೆ ಬೈಂದೂರಿನಿಂದ , ಕೊಲ್ಲೂರು, ನಾಗೋಡಿ ಸುಳ್ಳಳ್ಳಿ, ಕೋಗಾರ್, ಭಟ್ಕಳ ರಸ್ತೆ.