ಜಿಲ್ಲೆಯ ನದಿ ಜೋಡಣೆ ಯೋಜನೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಧಿವೇಶನದಲ್ಲಿ ಚರ್ಚೆಯಾಗಿ ಅನುಮೋದನೆಗೊಂಡಿದೆ.
ಕನ್ನಡಪ್ರಭ ವಾರ್ತೆ ಶಿರಸಿ
ಜಿಲ್ಲೆಯ ನದಿ ಜೋಡಣೆ ಯೋಜನೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಧಿವೇಶನದಲ್ಲಿ ಚರ್ಚೆಯಾಗಿ ಅನುಮೋದನೆಗೊಂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಬಿಜೆಪಿಯ 5 ಶಾಸಕರು, ಇಬ್ಬರು ಮಂತ್ರಿ ಹಾಗೂ ಇಲ್ಲಿಯವರೇ ಸಭಾಧ್ಯಕ್ಷರಿದ್ದರು. ಆ ಸಂದರ್ಭದಲ್ಲಿ ವಿರೋಧ ಮಾಡದೇ ಈಗ ನಮ್ಮ ಮೇಲೆ ದೂರುವುದು ದುರಂತ ಎಂದು ಜಿಲ್ಲಾ ಉಸ್ತುವಾರಿ ಮಂಕಾಳ ವೈದ್ಯ ತಿರುಗೇಟು ನೀಡಿದರು.ಸೋಮವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಇಬ್ಬರು ಮಂತ್ರಿಗಳಿದ್ದರೂ, ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ದಕ್ಷಿಣ ಕನ್ನಡದವರನ್ನು ಮಂತ್ರಿಯಾಗಿಸಿದರು. ಬೇಡ್ತಿ-ವರದಾ-ಅಘನಾಶಿನಿ ನದಿ ಜೋಡಣೆ ಮಾಡಿ ಹಾವೇರಿ, ರಾಯಚೂರು ಸೇರಿದಂತೆ ಉತ್ತರಕರ್ನಾಟಕ ಭಾಗಕ್ಕೆ ನೀರು ತೆಗೆದುಕೊಂಡು ಹೋಗುವ ಯೋಜನೆ ಬಿಜೆಪಿ ಸರ್ಕಾರದಲ್ಲಿ ನಿರ್ಧಾರವಾಗಿದೆ. ಈಗ ನಮ್ಮ ಮೇಲೆ ದೂರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ನದಿ ಜೋಡಣೆಯಿಂದ 1,500 ಎಕರೆ ಅರಣ್ಯ ಭೂಮಿ, ಸುಮಾರು 1 ಲಕ್ಷದಷ್ಟು ಮರ ನಾಶವಾಗುತ್ತದೆ. ಇದು ಕೇಂದ್ರ ಸರ್ಕಾರದ ಆಸ್ತಿ. 300 ಎಕರೆ ಸಾಮಾನ್ಯ ಬಡ ಜನರ ಜಮೀನಿಗೆ ಹಾನಿಯಾಲಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ವಿರೋಧದ ಚರ್ಚೆ ನಡೆಯುತ್ತಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ಹೋರಾಟ ನಡೆಯುತ್ತಿದೆ. ಅವರ ಮಾರ್ಗದರ್ಶನ ಮತ್ತು ಅವರು ಏನು ಹೇಳುತ್ತಾರೋ ಅದನ್ನು ಪಾಲಿಸಲು ನಾವು ತಯಾರಿದ್ದೇವೆ ಎಂದರು.ಇಲ್ಲಿ ಚರ್ಚೆ ಮಾಡುವ ಬದಲು ಅನುಭವ ಇದ್ದವರು, ಮಂತ್ರಿಯಾದವರು, ಸಭಾಧ್ಯಕ್ಷರಾದವರು ಕೇಂದ್ರ ಸರ್ಕಾರದ ಅಧಿವೇಶನದಲ್ಲಿ ಚರ್ಚೆ ಮಾಡಲಿ ಅಥವಾ ನೇರವಾಗಿ ಪ್ರಧಾನಿ ಮೋದಿ ಭೇಟಿಯಾಗಿ ಈ ಯೋಜನೆ ಕೈಬಿಡಿಸುತ್ತಾರೆ ಎಂಬ ನಂಬಿಕೆ ಇದೆ. ಅಲ್ಲದೇ ಗುರುಗಳ ಸಮ್ಮುಖದಲ್ಲಿ ಮಾತು ನೀಡಿದ್ದಾರೆ. ರಾಜ್ಯ ಅತ್ಯಲ್ಪ ಹಣ. ಕೇಂದ್ರ ಸರ್ಕಾರ ಶೇ.90 ರಷ್ಟು ಅನುದಾನದ ಯೋಜನೆ. ಈ ಯೋಜನೆಗೆ ಘಂಟಾಘೋಷವಾಗಿ ನಾವು ವಿರೋಧ ಮಾಡುತ್ತೇವೆ. ಯೋಜನೆ ಕೈಬಿಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಒಂದು ನಿಮಿಷದ ಕೆಲಸ. ನೇರವಾಗಿ ಹೋಗಿ ಯೋಜನೆ ಆಗಲು ಬಿಡುವುದಿಲ್ಲ. ಶರಾವತಿ ಪಂಪ್ಡ್ ಸ್ಟೊರೇಜ್ ಯೋಜನೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾದ ಯೋಜನೆ. ಕೇಂದ್ರ ಸರ್ಕಾರದಿಂದ ಪರಿಸರ ಅನುಮತಿ ಇಲ್ಲದೇ ಆಗುವುದಿಲ್ಲ. ಒಂದು ಗುಂಟೆ ಜಾಗ ನೀಡದಿದ್ದರೂ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು. 75 ಸಾವಿರ ಅತಿಕ್ರಮಣದಾರರ ಕುಟುಂಬದ ಜಮೀನು ಜಿಪಿಎಸ್ ಆಗಿ ಅವರಿಗೆ ಮಂಜೂರಿ ನೀಡಬೇಕು ಎಂದು 2013 ರಿಂದ 2018 ವರೆಗೆ ಮಾಡಿರುವುದನ್ನು ಈಗ ಅನುಷ್ಠಾನ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದರು.ಬಡವರು ಮನೆ ನಿರ್ಮಿಸಿಕೊಂಡರೆ 37 ಸಾವಿರ ರೂ. ಉದ್ಯೋಗ ಖಾತರಿ ಯೋಜನೆಯಲ್ಲಿ ಸಿಗುತ್ತಿತ್ತು. ರೈತರಿಗೆ ಬಾವಿ, ಜಾನುವಾರುಗಳ ಕೊಟ್ಟಿಗೆ, ಕೃಷಿ ಹೊಂಡ, ಜಮೀನು ಕೆಲಸ, ಸಣ್ಣ ರಸ್ತೆಗಳ ನಿರ್ಮಾಣಕ್ಕೆ ಅವಕಾಶ ಇತ್ತು. ಅದನ್ನು ಕೇಂದ್ರ ಸರ್ಕಾರ ತೆಗೆಯಲು ಹೊರಟಿದೆ. ಅದರ ಕುರಿತು ಚರ್ಚೆಗೆ ಮುಖ್ಯಮಂತ್ರಿಗಳು ವಿಶೇಷ ಅಧಿವೇಶನ ಕರೆದಿದ್ದಾರೆ. ಅಲ್ಲಿ ಜಿಲ್ಲೆಯ ಅಭಿವೃದ್ಧಿ ಸಮಸ್ಯೆಗಳನ್ನು ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.