ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ಕಂಪ್ಲಿ, ಬಳ್ಳಾರಿ ಗ್ರಾಮೀಣ, ನಗರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಗಟ್ಟೆ ಸಿಬ್ಬಂದಿಗೆ ಮತ ಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿ ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಬಳ್ಳಾರಿ ನಗರದ ವಿವಿಧೆಡೆ ಸೋಮವಾರ ಅಚ್ಚುಕಟ್ಟಾಗಿ ನೆರವೇರಿದ್ದು, ಮತದಾನ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿ, ಸಿಬ್ಬಂದಿ ಮತಗಟ್ಟೆಗಳತ್ತ ಬಿರು ಬಿಸಿಲಿನ ನಡುವೆಯೂ ಹುರುಪಿನಿಂದ ತೆರಳಿದರು.
ಮತಗಟ್ಟೆಗಳಿಗೆ ನೇಮಕಗೊಂಡಿರುವ ಅಧಿಕಾರಿ, ಸಿಬ್ಬಂದಿಗಳು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಮಸ್ಟರಿಂಗ್ ಕಾರ್ಯ ಜರುಗುವ ಕಾಲೇಜುಗಳ ಆವರಣದಲ್ಲಿ ಸೇರತೊಡಗಿದರು. ಇದರ ಜೊತೆಗೆ ಚುನಾವಣೆ ಕಾರ್ಯ ಹಾಗೂ ಮತಗಟ್ಟೆಯ ಬಂದೋಬಸ್ತ್‌ಗಾಗಿ ನಿಯೋಜನೆಗೊಂಡಿರುವ ಪೊಲೀಸರು, ಸಿಆರ್‌ಪಿಎಫ್ ಯೋಧರು, ಗೃಹರಕ್ಷಕ ದಳದ ಸಿಬ್ಬಂದಿ ಆಗಮಿಸಿದ್ದರು. ಮತದಾನ ಪ್ರಕ್ರಿಯೆಗೆ ತೆರಳುವ ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸರು, ಯೋಧರನ್ನು ಕರೆದುಕೊಂಡು ಹೋಗಲು ಬಸ್, ಕ್ರೂಸರ್ ಹಾಗೂ ಜೀಪ್‍ಗಳ ವ್ಯವಸ್ಥೆ ಮಾಡಲಾಗಿತ್ತು.
ಆಯಾ ವಿಧಾನಸಭಾ ಕ್ಷೇತ್ರಗಳ ಗ್ರಾಮಗಳಲ್ಲಿನ ಮತಗಟ್ಟೆಗಳತ್ತ ತೆರಳುವಂತಹ ಮಾರ್ಗಗಳನ್ನು ಗುರುತಿಸಿ, ಬಸ್, ಕ್ರೂಸರ್ ಹಾಗೂ ಮಿನಿ ಬಸ್ ಮುಂತಾದ ವಾಹನಗಳನ್ನು ನಿಯೋಜಿಸಲಾಗಿತ್ತು. ಕಾಲೇಜು ಆವರಣದಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ತಾವು ತೆರಳಬೇಕಿರುವ ಮತಗಟ್ಟೆಯ ವಿವರ ಹಾಗೂ ಬಸ್‍ಗಳ ವಿವರವನ್ನು ಧ್ವನಿವರ್ಧಕ ಮೂಲಕ ತಿಳಿಸಲಾಯಿತು.ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣಾ ಸಾಮಗ್ರಿ, ಇವಿಎಂ ಯಂತ್ರಗಳ ಪೆಟ್ಟಿಗೆ, ವಿವಿ ಪ್ಯಾಟ್ ಯಂತ್ರದ ಪೆಟ್ಟಿಗೆ ಹಾಗೂ ವಿಶೇಷ ಕಿಟ್ ಬ್ಯಾಗ್ ಜೊತೆಗೆ ಹೆಲ್ತ್ ಕಿಟ್ ನ್ನು ವಿತರಿಸಲು ಸೆಕ್ಟರ್‌ವಾರು ಕೌಂಟರ್‌ಗಳನ್ನು ಸ್ಥಾಪಿಸಿ, ಆ ಮೂಲಕ ಸಂಬಂಧಪಟ್ಟ ಮತಗಟ್ಟೆಗಳ ಸಿಬ್ಬಂದಿಗೆ ಚುನಾವಣಾ ಸಾಮಗ್ರಿ ವಿತರಿಸುವ ಕಾರ್ಯ ವ್ಯವಸ್ಥಿತವಾಗಿ ಕೈಗೊಳ್ಳಲಾಯಿತು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಚಂದ್ರಶೇಖರ್ ಸಖಮುರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನಗರದ ಕೋಟೆ ಪ್ರದೇಶದ ಸಂತಜಾನ್ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮಸ್ಟರಿಂಗ್ ಕಾರ್ಯ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಬಿರುಬಿಸಲಿದೆ. ಅಧಿಕಾರಿ, ಸಿಬ್ಬಂದಿ ತಮ್ಮ ಆರೋಗ್ಯದ ಕಡೆಗೂ ಗಮನವಿರಿಸಿಕೊಂಡು, ಆತಂಕವಿಲ್ಲದೆ, ಧೈರ್ಯದಿಂದ ಹಾಗೂ ಪ್ರಾಮಾಣಿಕತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸುವಂತೆ ನೈತಿಕ ಸ್ಥೈರ್ಯ ತುಂಬಿದರು. ಚುನಾವಣೆ ಕೆಲಸವನ್ನು ಯಾವುದೇ ಲೋಪ-ದೋಷಗಳು ಆಗದಂತೆ ಚುನಾವಣೆ ನಿಯೋಜಿತವಾದ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.ಇದಕ್ಕೂ ಮುನ್ನ ಸಂಡೂರು ಕ್ಷೇತ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು.ಮಧ್ಯಾಹ್ನದ ಊಟಕ್ಕೆ ಚಪಾತಿ, ಕಾಳು ಪಲ್ಯೆ, ಅನ್ನ ಸಾಂಬಾರ್ ಜೊತೆಗೆ, ಪಾಯಸದ ಸಿಹಿ ತಿನಿಸಿನ ವ್ಯವಸ್ಥೆ ಮಾಡಲಾಗಿತ್ತು. ಊಟದ ವಿತರಣೆ ಸ್ಥಳದಲ್ಲಿ ಗೊಂದಲ ಉಂಟಾಗದಂತೆ, ಸಾಕಷ್ಟು ಸಂಖ್ಯೆಯಲ್ಲಿ ಕೌಂಟರ್‌ಗಳನ್ನು ತೆರೆದು, ಸರದಿ ಸಾಲಿನಲ್ಲಿ ಬಂದು ಊಟ ಸ್ವೀಕರಿಸಲು ವ್ಯವಸ್ಥೆಗೊಳಿಸಲಾಗಿತ್ತು. ಮತದಾನ ಕಾರ್ಯಕ್ಕೆ ನೇಮಕಗೊಂಡಿರುವ ಹಲವು ಅಧಿಕಾರಿ, ಸಿಬ್ಬಂದಿಗಳೂ ಕೂಡ ಮಸ್ಟರಿಂಗ್ ಕಾರ್ಯಕ್ಕೆ ಕೈಗೊಂಡ ವ್ಯವಸ್ಥೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಮಧ್ಯಾಹ್ನದ ಊಟ ಸವಿದ ಅಧಿಕಾರಿ ಹಾಗೂ ಸಿಬ್ಬಂದಿ ಅತ್ಯುತ್ತಮ ಊಟದ ವ್ಯವಸ್ಥೆ ಮಾಡಿದ ಜಿಲ್ಲಾಡಳಿತ ಕಾರ್ಯವನ್ನು ಸ್ಮರಿಸಿದರು. ಬಳಿಕ ತಮಗೆ ನಿಯೋಜಿಸಲಾದ ಮತಗಟ್ಟೆಗಳಿಗೆ ಆಯಾ ಮಾರ್ಗದ ವಾಹನಗಳ ಮೂಲಕ ತೆರಳಿದರು.