ನಾರಾಯಣ ಹೆಗಡೆ
ಭೀಕರ ಬರಗಾಲ ಜಿಲ್ಲೆಯ ಅನ್ನದಾತರ ಬದುಕಿನ ಮೇಲೆ ಬರೆ ಎಳೆದಿದೆ. ಮುಂಗಾರು, ಹಿಂಗಾರು ಮಳೆ ಕೈಕೊಟ್ಟು ಬೆಳೆ ಕೈಗೆ ಸಿಗದೆ ಕಂಗಾಲಾಗಿರುವ ರೈತರು, ಕೃಷಿಯ ಪ್ರಮುಖ ಆಸರೆಯಾಗಿದ್ದ ಜೋಡೆತ್ತುಗಳನ್ನೇ ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಲಕ್ಷಾಂತರ ರುಪಾಯಿ ಕೊಟ್ಟು ಖರೀದಿಸಿ ಮನೆ ಮಕ್ಕಳಂತೆ ಸಲಹಿದ್ದ ಎತ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಬರದ ವಾಸ್ತವವನ್ನು ತೆರೆದಿಡುತ್ತಿದೆ.
ನಗರದ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಗುರುವಾರ ನಡೆದ ದನದ ಸಂತೆಯಲ್ಲಿನ ಈ ರೀತಿಯ ದೃಶ್ಯ ಮನಕಲಕುವಂತಿತ್ತು. ಸಾಲದ ಹೊರೆ, ಬೆಳೆ ನಷ್ಟದ ನೋವಿನ ಜತೆಗೆ ಜಾನುವಾರುಗಳಿಗೆ ಮೇವು-ನೀರು ಒದಗಿಸುವ ಆತಂಕವೂ ರೈತರನ್ನು ಕಾಡುತ್ತಿದ್ದು, ಬರದ ಬಿಸಿ ಅನ್ನದಾತರ ಬದುಕನ್ನು ಯಾವ ಮಟ್ಟಿಗೆ ಸುಟ್ಟಿದೆ ಎಂಬುದಕ್ಕೆ ದನದ ಸಂತೆ ಸಾಕ್ಷಿಯಾಯಿತು.ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಬಹುದು, ಬೆಳೆ ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಮಾಡಿಕೊಂಡಿದ್ದರು. ಹೊಲದ ಉಳುಮೆ ಸೇರಿದಂತೆ ವಿವಿಧ ಕೃಷಿ ಕೆಲಸಗಳಿಗೆ ನೆರವಾಗಲೆಂದು ಉತ್ತಮ ತಳಿಯ ಜೋಡೆತ್ತುಗಳನ್ನು ಖರೀದಿಸಿದ್ದರು. ಒಂದು ಜೋಡಿಗೆ ₹1 ಲಕ್ಷದಿಂದ ₹2 ಲಕ್ಷದವರೆಗೆ, ಕೆಲವೆಡೆ ₹3 ಲಕ್ಷದವರೆಗೂ ಹಣ ವ್ಯಯಿಸಿದ್ದರು. ಕೃಷಿಯಿಂದ ಬರುವ ಆದಾಯದಲ್ಲಿ ಸಾಲ ತೀರಿಸಿ, ಕುಟುಂಬ ನಿರ್ವಹಣೆ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದ್ದರು. ಆದರೆ, ಮಳೆಯ ಅಭಾವದಿಂದ ಬಿತ್ತನೆ ಮಾಡಿದ ಬೆಳೆಗಳೂ ಕೈಕೊಟ್ಟಿದ್ದು, ರೈತರ ನಿರೀಕ್ಷೆಗಳೆಲ್ಲ ಹುಸಿಯಾಗಿವೆ.
ಲಕ್ಷದ ಎತ್ತುಗಳಿಗೆ ₹60-70 ಸಾವಿರ: ಲಕ್ಷಾಂತರ ರುಪಾಯಿ ಕೊಟ್ಟು ಖರೀದಿಸಿದ್ದ ಜೋಡೆತ್ತುಗಳಿಗೆ ಈಗ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ₹1 ಲಕ್ಷದಿಂದ ₹2 ಲಕ್ಷಕ್ಕಿಂತ ಹೆಚ್ಚಿನ ಹಣ ಕೊಟ್ಟು ತಂದಿದ್ದ ಜೋಡೆತ್ತುಗಳನ್ನು ರೈತರು ಈಗ ಕೇವಲ ₹60 ಸಾವಿರದಿಂದ ₹70 ಸಾವಿರಕ್ಕೆ ಮಾರಾಟಕ್ಕೆ ತರುತ್ತಿದ್ದಾರೆ. ಖರೀದಿ ಬೆಲೆಗೆ ಹೋಲಿಸಿದರೆ ಶೇ.50ರಿಂದ 60ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಮಾರಿದರೆ ನಷ್ಟ, ಉಳಿಸಿಕೊಂಡರೆ ಹೊರೆ: ಎತ್ತುಗಳನ್ನು ಮಾರಾಟ ಮಾಡಿದರೆ ಖರೀದಿಗೆ ಮಾಡಿದ ಹೂಡಿಕೆಯ ಬಹುಪಾಲು ನಷ್ಟವಾಗುತ್ತದೆ. ಉಳಿಸಿಕೊಂಡರೆ ಪ್ರತಿದಿನ ಮೇವು, ನೀರು ಹಾಗೂ ನಿರ್ವಹಣೆಗೆ ಹಣ ಹೊಂದಿಸಬೇಕು. ಕೃಷಿಯಿಂದ ಆದಾಯವೇ ಇಲ್ಲದ ಸಂದರ್ಭದಲ್ಲಿ ಈ ಎರಡೂ ಆಯ್ಕೆಗಳು ರೈತರಿಗೆ ಸಂಕಷ್ಟದಾಯಕವಾಗಿವೆ. ಸಾಲ ತೀರಿಸುವ ಅನಿವಾರ್ಯತೆ ಎದುರಾದಾಗ, ಮನಸ್ಸಿಲ್ಲದಿದ್ದರೂ ಜಾನುವಾರುಗಳನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬರಬೇಕಾಗಿದೆ.
ಜಾನುವಾರು ಮಾರುಕಟ್ಟೆಗೂ ಬರದ ಬಿಸಿ: ಬೆಳೆ ನಷ್ಟವಾದರೆ ಮುಂದಿನ ಹಂಗಾಮಿನಲ್ಲಿ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ರೈತರಲ್ಲಿರುತ್ತದೆ. ಆದರೆ ಸತತವಾಗಿ ಮಳೆ ಕೈಕೊಟ್ಟಾಗ ಕೃಷಿ ಆದಾಯದ ಜತೆಗೆ ಜಾನುವಾರುಗಳ ನಿರ್ವಹಣೆಯೂ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಮೇವು-ನೀರಿನ ಲಭ್ಯತೆ ಕಡಿಮೆಯಾಗುವ ಆತಂಕ, ಸಾಲದ ಒತ್ತಡ ಮತ್ತು ದಿನನಿತ್ಯದ ಖರ್ಚುಗಳು ರೈತರನ್ನು ಕಂಗೆಡಿಸಿವೆ. ಇದೇ ವೇಳೆ ಆಂಧ್ರ, ತೆಲಂಗಾಣ ಕಡೆಯಿಂದ ಬರುವ ವ್ಯಾಪಾರಿಗಳು ಇಲ್ಲಿಯ ರೈತರ ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. ಇಲ್ಲಿ ಕಡಿಮೆ ಬೆಲೆಗೆ ಖಿಲಾರಿ ತಳಿಯ ಎತ್ತುಗಳನ್ನು ಖರೀದಿಸಿ ಲಾರಿಗಳಲ್ಲಿ ಸಾಗಿಸುತ್ತಿದ್ದಾರೆ. ಬೆಳೆ ಕೈಕೊಟ್ಟ ನೋವಿನ ಜತೆಗೆ ಕೃಷಿಯ ಜೀವನಾಡಿಯನ್ನೇ ಕಳೆದುಕೊಳ್ಳುವ ಅನಿವಾರ್ಯತೆ ಎದುರಾಗಿರುವುದು ಅನ್ನದಾತರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿದೆ.