ಈಗ ‘ಲಕ್ಕುಂಡಿ ಬಂಗಾರ’ದ ಸುತ್ತ ಹೈಡ್ರಾಮಾ!

KannadaprabhaNewsNetwork |  
Published : Jan 13, 2026, 02:30 AM IST
ಆಭರಣಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿರುವ ಕುಟುಂಬವನ್ನು ಶಾಸಕ ಸಿ.ಸಿ.ಪಾಟೀಲ ಸನ್ಮಾನಿಸಿದರು. | Kannada Prabha

ಸಾರಾಂಶ

ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಶನಿವಾರ ಮನೆಯ ಅಡಿಪಾಯ ತೋಡಿದಾಗ ಸಿಕ್ಕ ಬಂಗಾರದ ಆಭರಣಗಳ ಸುತ್ತ ಹೈಡ್ರಾಮಾ ನಡೆಯುತ್ತಿದೆ. ಈ ವಿಷಯವಾಗಿ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ ಅವರು ಸೋಮವಾರ ಉಲ್ಟಾ ಹೊಡೆದಿದ್ದು, ಗ್ರಾಮಸ್ಥರು ಹಾಗೂ ಕುಟುಂಬಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ಕನ್ನಡಪ್ರಭ ವಾರ್ತೆ ಗದಗ

ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಶನಿವಾರ ಮನೆಯ ಅಡಿಪಾಯ ತೋಡಿದಾಗ ಸಿಕ್ಕ ಬಂಗಾರದ ಆಭರಣಗಳ ಸುತ್ತ ಹೈಡ್ರಾಮಾ ನಡೆಯುತ್ತಿದೆ. ಈ ವಿಷಯವಾಗಿ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ ಅವರು ಸೋಮವಾರ ಉಲ್ಟಾ ಹೊಡೆದಿದ್ದು, ಗ್ರಾಮಸ್ಥರು ಹಾಗೂ ಕುಟುಂಬಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ಕೇಂದ್ರ ಪುರಾತತ್ವ ಇಲಾಖೆಯ ಅಧೀಕ್ಷಕ ರಮೇಶ್ ಮೂಲಿಮನಿ ಅವರು, ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಇದು ನಿಧಿಯಲ್ಲ, ಅವರ ಪೂರ್ವಜರು ಇಟ್ಟಿದ್ದ ಬಂಗಾರ ಎಂದು ಹೇಳಿಕೆ ನೀಡಿದ್ದರು. ಇದರಿಂದಾಗಿ ನಮ್ಮ ಬಂಗಾರ ನಮಗೆ ಕೊಟ್ಟು ಬಿಡಿ ಎಂದು ಕುಟುಂಬಸ್ಥರು ಬೇಡಿಕೆ ಇಟ್ಟಿದ್ದರು. ಆದರೆ ಸೋಮವಾರ ಅದೇ ಅಧಿಕಾರಿ ಗ್ರಾಮಕ್ಕೆ ಬಂದು ಇದು ಸರ್ಕಾರದ ಆಸ್ತಿ ಎಂದು ಹೇಳಿರುವುದು ಸಹಜವಾಗಿಯೇ ಗ್ರಾಮಸ್ಥರನ್ನು ಕೆರಳಿಸಿದೆ.

ಇದೇ ವೇಳೆ, ಹಂಪಿ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧಿಕಾರಿಗಳು ಸೋಮವಾರ ಭೇಟಿ ಪರಿಶೀಲನೆ ನಡೆಸಿದರು. ಹಂಪಿ ವಿಭಾಗದ ನಿರ್ದೇಶಕ ಆರ್.ಸೈಜೇಶ್ವರ ಸ್ಥಳ ಪರಿವೀಕ್ಷಣೆ ವೇಳೆ ಮಾತನಾಡಿ, 1962ರ ನಿಯಮದ ಪ್ರಕಾರ ₹10 ಮೌಲ್ಯಕ್ಕಿಂತ ಹೆಚ್ಚಿನ ಮೊತ್ತದ ವಸ್ತು ಸಿಕ್ಕರೆ ಸರ್ಕಾರಕ್ಕೆ ಸಲ್ಲುತ್ತದೆ. ಭೂಮಿಯ ಒಂದು ಅಡಿ ಆಳದಲ್ಲಿ ಏನೇ ಸಿಕ್ಕರೂ ಅದು ಸರ್ಕಾರದ್ದಾಗಿದೆ. ಇನ್ನು, ಇದು ಯಾವ ಕಾಲಕ್ಕೆ ಸೇರಿದ್ದು, ಯಾರ ಆಳ್ವಿಕೆಯದು ಎಂಬುದರ ಬಗ್ಗೆ ಪರಿಶೀಲನೆ ನಡೆಯಬೇಕಿದೆ ಎಂದರು.

ಈ ಮಧ್ಯೆ, ವಶಕ್ಕೆ ಪಡೆದ ಆಭರಣಗಳ ಬಗ್ಗೆ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದ್ದನ್ನು ಬಿಟ್ಟಲ್ಲಿ ಆ ಕುಟುಂಬಕ್ಕೆ ಯಾವುದೇ ಭರವಸೆ ಸೋಮವಾರವೂ ಯಾವ ಅಧಿಕಾರಿಗಳಿಂದಲೂ ಸಿಗಲಿಲ್ಲ. ಚಿನ್ನ ಬೇಡ, ಮನೆ ಕೊಡಿ, ಕುಟುಂಬಸ್ಥರ ಬೇಡಿಕೆ:

ಈ ಮಧ್ಯೆ, ರಿತ್ತಿ ಕುಟುಂಬದ ಸದಸ್ಯರು ಸೋಮವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ನಮಗೆ ಆ ಚಿನ್ನ ಬೇಡ, ಆ ಜಾಗದಲ್ಲಿ ದೋಷವಿದೆ (ಅಪಶಕುನ). ಅಲ್ಲಿ ದೊಡ್ಡ ಸರ್ಪ ಕಂಡಿದ್ದು, ನಮಗೆ ಭಯವಾಗುತ್ತಿದೆ. ಆ ಜಾಗವನ್ನು ಸರ್ಕಾರವೇ ವಶಕ್ಕೆ ಪಡೆದು ದೇವಸ್ಥಾನ ನಿರ್ಮಿಸಲಿ. ನಮಗೆ ವಾಸಿಸಲು ಒಂದು ಸೂರು ಹಾಗೂ ಮಗನಿಗೆ ಉದ್ಯೋಗ ನೀಡಿದರೆ ಸಾಕು ಎಂದು ಮನವಿ ಮಾಡಿದ್ದಾರೆ. ಸಿಕ್ಕಿರುವುದು 466 ಗ್ರಾಂ ಬಂಗಾರ, ಜಿಲ್ಲಾಧಿಕಾರಿ:ಈ ಮಧ್ಯೆ, ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಲಕ್ಕುಂಡಿಯಲ್ಲಿ ದೊರೆತಿರುವ ಬಂಗಾರದ ಆಭರಣಗಳ ಒಟ್ಟು ತೂಕ 466 ಗ್ರಾಂ ಇದ್ದು, 22 ವಿವಿಧ ವಸ್ತುಗಳಿವೆ. ಕುಟುಂಬಕ್ಕೆ ಯಾವ ರೀತಿಯ ನೆರವು ನೀಡಬೇಕು ಎನ್ನುವುದನ್ನು ಹಿರಿಯ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದರು.ಭಾನುವಾರ ಅಧಿಕಾರಿಯೊಬ್ಬರು ಇದು ರಾಜರ ಕಾಲದ್ದು ಎನ್ನುವ ಬಗ್ಗೆ ಮಾಹಿತಿ ಇಲ್ಲ, ಇದು ಕುಟುಂಬಕ್ಕೆ ಸೇರಬೇಕಾದದ್ದು ಎಂದು ಹೇಳಿದ್ದರು. ಇದರಿಂದಾಗಿ ಸಾಕಷ್ಟು ಗೊಂದಲ ಉಂಟಾಗಿದೆ. ಅವರು ಬಾಯಿ ತಪ್ಪಿನಿಂದ ಹೀಗೆ ಆಗಿದೆ. ಅದು ಸರ್ಕಾರದ ಆಸ್ತಿಯೇ ಎಂದು ಹೇಳಿದ್ದಾರೆ. ಸ್ವತಃ ಸುದ್ದಿಗೋಷ್ಠಿಯಲ್ಲಿ ಕೂಡಾ ಇದ್ದಾರೆ ಎಂದು ಸ್ಪಷ್ಟಪಡಿಸಿದರು.ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸಂಜೆ 4ಕ್ಕೆ ಆಯೋಜಿಸಿದ್ದ ಸುದ್ದಿಗೋಷ್ಠಿಗೆ ಜಿಲ್ಲಾಧಿಕಾರಿಗಳು 5.30ಕ್ಕೆ ಅಂದರೆ, ಒಂದೂವರೆ ತಾಸು ತಡವಾಗಿ ಆಗಮಿಸಿದರು. ಯಾವ ಕಾರಣಕ್ಕಾಗಿ ಸುದ್ದಿಗೋಷ್ಠಿ ನಡೆಸಲಾಗುತ್ತಿದೆ ಎನ್ನುವ ಸ್ಪಷ್ಟತೆ ಇಲ್ಲದೇ ಅವರೇ ಗೊಂದಲದಲ್ಲಿದ್ದರು. ನಾನು ಸುದ್ದಿಗೋಷ್ಠಿ ನಡೆಸುತ್ತಿಲ್ಲ. ನಿನ್ನೆ(ಭಾನುವಾರ) ರಮೇಶ ಎನ್ನುವ ಪುರಾತತ್ವ ಇಲಾಖೆ ಅಧಿಕಾರಿಗಳು ಆಭರಣದ ವಿಷಯವಾಗಿ ಜನರಿಗೆ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ನೀಡಿದ್ದರು. ಹಾಗಾಗಿ ಅವರನ್ನು ನಿಮ್ಮ ಮುಂದೆ(ಮಾಧ್ಯಮ) ಕರೆ ತರಲಾಗಿದೆ ಎಂದರು.ಕೋಟ್...

ರಿತ್ತಿ ಕುಟುಂಬದವರು ತಮ್ಮ ಕಡು ಬಡತನದಲ್ಲೂ ಇಷ್ಟು ದೊಡ್ಡ ಮೊತ್ತದ ಬಂಗಾರವನ್ನು ಸರ್ಕಾರಕ್ಕೆ ಒಪ್ಪಿಸಿರುವುದು ಅತ್ಯಂತ ಶ್ಲಾಘನೀಯ. ಅವರಿಗೆ ಮನೆ ಒದಗಿಸುವ ಹಾಗೂ ನೆಮ್ಮದಿಯ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುತ್ತೇನೆ.

- ಸಿ.ಸಿ.ಪಾಟೀಲ, ನರಗುಂದ ಶಾಸಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ