ಕನ್ನಡಪ್ರಭ ವಾರ್ತೆ ಬ್ಯಾಟರಾಯನಪುರ ನವರತ್ನ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಂದು ತಂಡ ಗೆದ್ದಿದೆ ಎನ್ನುವುದಕ್ಕಿಂತ ನವರತ್ನ ಅಗ್ರಹಾರ ಗ್ರಾಮದ ಒಗ್ಗಟ್ಟು, ಐಕ್ಯತೆ, ಸಾಮರಸ್ಯ ಗೆದ್ದಿದೆ ಎಂದು ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್ ಅಭಿಪ್ರಾಯಪಟ್ಟರು. ಬ್ಯಾಟರಾಯನಪುರ ಕ್ಷೇತ್ರದ ನವರತ್ನ ಅಗ್ರಹಾರ ಗ್ರಾಮದಲ್ಲಿ ಗ್ರಾಮದ ಮುತ್ಸದ್ಧಿ ಮುಖಂಡರ ಸಹಕಾರದೊಂದಿಗೆ ನವರತ್ನ ಕ್ರಿಕೆಟ್ ಅಸೋಸಿಯೇಷನ್ (ಎನ್‌ಸಿಎಲ್)ವತಿಯಿಂದ ಆಯೋಜಿಸಿದ್ದ ನವರತ್ನ ಪ್ರಿಮಿಯರ್ ಲೀಗ್ ಸೀಸನ್-4 ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಿದ ಎಂ.ಶ್ರೀನಿವಾಸ್ ಅವರ ಮಾಲೀಕತ್ವದ ನವರತ್ನ ಟೈಗರ್ಸ್ ತಂಡಕ್ಕೆ ಟ್ರೋಫಿ ಮತ್ತು 1 ಲಕ್ಷ ರು. ಬಹುಮಾನ ವಿತರಣೆ ಮಾಡಿದ ನಂತರ ಮಾತನಾಡಿದರು.4 ವರ್ಷಗಳ ಹಿಂದೆ ಗ್ರಾಮದ ಮುಖಂಡರ ಸಹಕಾರದೊಂದಿಗೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಗ್ರಾಮೀಣ ಕ್ರಿಕೆಟ್ ಪಂದ್ಯಾವಳಿಯನ್ನು ಐಪಿಎಲ್ ಮಾದರಿಯಲ್ಲಿ ಎನ್‌ಪಿಎಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಹೊಸದೊಂದು ಕ್ರೀಡಾ ಪರಂಪರೆಗೆ ನವರತ್ನ ಅಗ್ರಹಾರ ಗ್ರಾಮ ಸಾಕ್ಷಿಯಾಗಿತ್ತು. ಅಂದಿನಿಂದ ಇಂದಿನವರೆಗೆ ವರ್ಷ ಕಳೆದಂತೆ ಹೆಚ್ಚಿನ ಯಶಸ್ಸು ಗಳಿಸಿಕೊಳ್ಳುತ್ತಿರುವ ಎನ್‌ಪಿಎಲ್ ಕ್ರಿಕೆಟ್ ಪಂದ್ಯಾವಳಿ, ಗ್ರಾಮದ ಯುವ ಕ್ರಿಕೆಟ್ ಆಟಗಾರರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಗ್ರಾಮದಲ್ಲಿ ಒಗ್ಗಟ್ಟು, ಐಕ್ಯತೆ, ಸಾಮರಸ್ಯ ಹೆಚ್ಚಿಸುವಲ್ಲಿ ಸಹ ಯಶಸ್ವಿಯಾಗಿದೆ. ಈ ಪಂದ್ಯಾವಳಿಯಲ್ಲಿ ನವರತ್ನ ಟೈಗರ್ಸ್ ತಂಡ ಗೆದ್ದು ಟ್ರೋಫಿ ಮುಡಿಗೇರಿಸಿ ಕೊಂಡಿದೆಯಾದರೂ, ವಾಸ್ತವಿಕವಾಗಿ ನವರತ್ನ ಅಗ್ರಹಾರ ಗ್ರಾಮದ ಒಗ್ಗಟ್ಟು, ಐಕ್ಯತೆ, ಸಾಮರಸ್ಯ ಗೆದ್ದಿದೆ ಎಂದರು. ಸಿ.ಶ್ರೀನಿವಾಸ್ ಮಾಲೀಕತ್ವದ ನವರತ್ನ ಲಯನ್ಸ್ ತಂಡ ರನ್ನರ್ ಅಪ್ ಸ್ಥಾನ ಗಳಿಸಿ 50,000 ರು., ಟ್ರೋಫಿ ಪಡೆದುಕೊಂಡಿತು.