ಕನ್ನಡಪ್ರಭ ವಾರ್ತೆ ಉಡುಪಿ
ಸುಮಾರು 3 ತಿಂಗಳ ನಂತರ ಉಡುಪಿ ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬುಧವಾರ ಮಳೆಗಾಲದ ಹಿನ್ನೆಲೆಯಲ್ಲಿ ತುರ್ತಾಗಿ ಅಧಿಕಾರಿಗಳ ಸಭೆ ನಡೆಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿರುವ ಸುಮಾರು 400 ಕಾಲುಸಂಕಗಳ ಪುನಃನಿರ್ಮಾಣಕ್ಕೆ ಮುಖ್ಯಮಂತ್ರಿ ಅವರು ಲೋಕೋಪಯೋಗಿ ಇಲಾಖೆಗೆ ಆದೇಶಿಸಿದ್ದಾರೆ ಎಂದರು.ಕಳೆದ ವರ್ಷ ಮಳೆಗಾಲದಲ್ಲಿ ಕಾಲುಸಂಕ ಸೇತುವೆಗಳಿಂದಾಗಿ 5 ಮಕ್ಕಳ ದುರ್ಮರಣ ಹೊಂದಿದ್ದರು. ಈ ಬಾರಿ ಹಾಗಾಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಬ್ರಹ್ಮಾವರ ಕೃಷಿ ಡಿಪ್ಲೋಮಾ ಕಾಲೇಜು ಕಳೆದ ವರ್ಷದಿಂದ ಮುಚ್ಚಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸಚಿವೆ ಇದು ತಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ನಿರ್ಧಾರವಲ್ಲ. ಆದರೂ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದರು.
ಹೆಚ್ಚುವರಿ ಬಸ್ ಸೇವೆ: ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಬಸ್ಸು ಸೇವೆ ಅಲಭ್ಯದ ಬಗ್ಗೆ ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ, ರಾಜ್ಯದಲ್ಲಿಯೇ ಶಕ್ತಿ ಯೋಜನೆ ಬಳಿಕ ಸರ್ಕಾರಿ ಬಸ್ಸುಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 209 ಸರ್ಕಾರಿ ಬಸ್ ರೂಟ್ ಪರವಾನಿಗೆಗಳಿವೆ. ಆದರೆ ಇಲ್ಲಿ ಖಾಸಗಿ ಬಸ್ ಗಳ ಹಾವಳಿ ಹೆಚ್ಚಾಗಿದೆ. ರಾಜ್ಯ ಸರ್ಕಾರ ಹೊಸದಾಗಿ 3000 ಬಸ್ಸುಗಳನ್ನು ಖರೀದಿಸುತ್ತಿದೆ. ಅವುಗಳಲ್ಲಿ ಉಡುಪಿ ಜಿಲ್ಲೆಗೂ ಬಸ್ಸುಗಳು ಲಭ್ಯವಾಗಲಿವೆ ಎಂದರು.ಬಿಪಿಎಲ್ ಕಾರ್ಡ್ ವಿತರಣೆಯ ಸಮಸ್ಯೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ಆರೋಗ್ಯ ಸಮಸ್ಯೆ ಇದ್ದವರಿಗೆ ತಕ್ಷಣ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ. ಇತರರಿಗೆ ಬಿಪಿಎಲ್ ಕಾರ್ಡ್ ವಿತರಣೆಗೆ ಆಹಾರ ಮತ್ತು ನಾಗರಿಕ ಸೇವಾ ಸಚಿವರೇ ಉತ್ತರಿಸಬೇಕು ಎಂದರು.