ತೃತೀಯ ಲಿಂಗಿ ವ್ಯಕ್ತಿಗೆ ನರೇಗಾ ಆಸರೆ

KannadaprabhaNewsNetwork |  
Published : May 23, 2026, 02:30 AM IST
ಪೋಟೋ | Kannada Prabha

ಸಾರಾಂಶ

ಕುರಿ ಕಾಯುತ್ತಾ ಸಾಗುತ್ತಿದ್ದ ರಮೇಶನ ಬದುಕಿನಲ್ಲಿ ಹೊಸ ಭರವಸೆಯ ಬೆಳಕು ಮೂಡಿಸಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.

ರೋಣ: ತೃತೀಯ ಲಿಂಗಿಯೊಬ್ಬರ ಬದುಕಿಗೆ ನರೇಗಾ ಯೋಜನೆ ಆಸರೆಯಾಗಿದ್ದು, ಕಷ್ಟಪಟ್ಟು ಬೆವರು ಸುರಿಸಿ ಮಣ್ಣನ್ನೇ ನಂಬಿ ಬದುಕುತ್ತೇವೆ ಎಂಬುದನ್ನು ತಾಲೂಕಿನ ಸವಡಿ ಗ್ರಾಮದ 42 ವರ್ಷದ ತೃತೀಯ ಲಿಂಗಿ ರಮೇಶ ವಿರೂಪಾಕ್ಷಪ್ಪ ಕಂಬಳಿ ಸಾಧಿಸಿ ತೋರಿಸಿದ್ದಾರೆ.ಸವಡಿ ಗ್ರಾಮದಲ್ಲಿ ಹುಟ್ಟಿದ ರಮೇಶ ಸುಮಾರು 20 ವರ್ಷಗಳ ಹಿಂದೆ, ತನ್ನ ದೇಹ ಹಾಗೂ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳ ಬದಲಾವಣೆಗಳನ್ನು ಕಂಡಾಗ ಜಗತ್ತೇ ಶೂನ್ಯವೆನಿಸಿತ್ತು. ತಾನು ತೃತೀಯ ಲಿಂಗಿ ಎಂದು ಸಮಾಜಕ್ಕೆ ಗೊತ್ತಾದಾಗ ಎದುರಿಸಬೇಕಾಗಿ ಬಂದ ಚುಚ್ಚುಮಾತುಗಳು, ಹೀಯಾಳಿಸುವ ನೋಟ ಒಂದೆರಡಲ್ಲ. ಹೆತ್ತ ತಂದೆಯೂ ಕಣ್ಣು ಮುಚ್ಚಿದಾಗ ಇಡೀ ಕುಟುಂಬ ಅನಾಥವಾಯಿತು. ಆದರೆ, ಇಂತಹ ಕಠಿಣ ಪರಿಸ್ಥಿತಿಯಲ್ಲೂ ಮಗುವನ್ನು ಕೈ ಬಿಡದ ವೃದ್ಧ ತಾಯಿ, ಆ ಜೀವಕ್ಕೆ ಆಸರೆಯಾಗಿ ನಿಂತಳು.

ದಾರಿದೀಪವಾದ ನರೇಗಾ: ​ಕುರಿ ಕಾಯುತ್ತಾ ಸಾಗುತ್ತಿದ್ದ ರಮೇಶನ ಬದುಕಿನಲ್ಲಿ ಹೊಸ ಭರವಸೆಯ ಬೆಳಕು ಮೂಡಿಸಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. 5 ವರ್ಷಗಳ ಹಿಂದೆ ಮೊದಲ ಬಾರಿಗೆ ನರೇಗಾ ಅಡಿಯಲ್ಲಿ ಮಣ್ಣು ಅಗೆಯಲು ಗುದ್ದಲಿ ಹಿಡಿದಾಗ, ಅದು ಕೇವಲ ಒಂದು ಕೆಲಸವಾಗಿರಲಿಲ್ಲ. ಬದಲಿಗೆ ಅದು ಅವರ ಸ್ವಾಭಿಮಾನದ ಸಂಕೇತವಾಗಿತ್ತು.

ಸದ್ಯ ಸಿಗುತ್ತಿರುವ ಮೈತ್ರಿ ಯೋಜನೆಯ ಮಾಸಾಶನ ವೃದ್ಧ ತಾಯಿಯ ಔಷಧಿ ವೆಚ್ಚಕ್ಕೆ ನೆರವಾಗುತ್ತಿದೆಯಾದರೂ, ಇವರ ಸ್ವಂತ ಕಾಲಿನ ಮೇಲೆ ನಿಲ್ಲುವಲ್ಲಿ ಸರ್ಕಾರದಿಂದ ಸಹಾಯಹಸ್ತವನ್ನು ರಮೇಶ್ ಬಯಸುತ್ತಾರೆ. ಜತೆಗೆ ಸರ್ಕಾರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವಿಶೇಷ ಸೌಲಭ್ಯ ದೊರೆತರೆ ಅವರ ಕುಟುಂಬಕ್ಕೆ ಒಳಿತಾಗುತ್ತದೆ. ಈ ಮೂಲಕ ಇವರ ಕುಟುಂಬ ಆರ್ಥಿಕವಾಗಿ ಮತ್ತಷ್ಟು ಸಬಲರಾಗಲು ಸರ್ಕಾರ ಸಹಾಯಹಸ್ತ ಚಾಚಬೇಕಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.ಒಂದು ಎಕರೆ ಒಣ ಬೇಸಾಯದ ಜಮೀನು ಮತ್ತು ಒಂದು ಪುಟ್ಟ ಮನೆಯಲ್ಲಿ ತಾಯಿಯ ಜತೆ ವಾಸವಿರುವ ರಮೇಶ, ನರೇಗಾ ಕೆಲಸವಿಲ್ಲದ ದಿನಗಳಲ್ಲಿ ಖಾಲಿ ಕೂರದೆ ಬೇರೆ ರೈತರ ಹೊಲಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಕಾಯಕವೇ ಕೈಲಾಸ ಎಂಬಂತೆ ದುಡಿಯುವುದೊಂದೇ ಇವರ ಕಣ್ಣ ಮುಂದಿರುವ ಗುರಿ.

ಗೌರವ: ನನ್ನಂಥವರಿಗೆ ಸಮಾಜದಲ್ಲಿ ಬದುಕುವುದು ಎಷ್ಟು ಕಷ್ಟ ಅಂತ ನನಗೆ ಗೊತ್ತು. ನನಗೂ ಸಿಟಿಗೆ ಹೋಗಿ ಭಿಕ್ಷೆ ಬೇಡಿ ಸುಲಭವಾಗಿ ದುಡ್ಡು ಮಾಡಬಹುದಿತ್ತು. ಆದರೆ ನನಗೆ ನನ್ನ ತಾಯಿಯ ಸಂಸ್ಕಾರ ಮುಖ್ಯವಾಗಿತ್ತು. ಹಳ್ಳಿಯ ಮಣ್ಣಿನಲ್ಲಿ ಕಷ್ಟಪಟ್ಟು, ಬೆವರು ಸುರಿಸಿ ಬರುವ ನೂರು ರುಪಾಯಿ ಸಾಕು ನನಗೆ. ಈ ನರೇಗಾ ಯೋಜನೆ ನನಗೆ ಕೆಲಸ ಕೊಟ್ಟಿದ್ದಲ್ಲದೇ ಸಮಾಜದಲ್ಲಿ ಎಲ್ಲರಂತೆ ತಲೆಯೆತ್ತಿ ಬಾಳುವ ಗೌರವ ಕೊಟ್ಟಿದೆ ಎಂದು ರಮೇಶ ವಿರೂಪಾಕ್ಷಪ್ಪ ಕಂಬಳಿ ತಿಳಿಸಿದರು.

ತಾಲೂಕಿಗೆ ಹೆಮ್ಮೆ: ನರೇಗಾ ಯೋಜನೆ ಸಮಾಜದಲ್ಲಿ ಸಮಾನತೆ ತರುವ ಕ್ರಾಂತಿ. ತೃತೀಯ ಲಿಂಗಿ ರಮೇಶ ಅವರು 5 ವರ್ಷಗಳಿಂದ ಸತತವಾಗಿ ನರೇಗಾ ಕೆಲಸ ಮಾಡುತ್ತಿರುವುದು ಇಡೀ ತಾಲೂಕಿಗೆ ಹೆಮ್ಮೆ. ಭಿಕ್ಷಾಟನೆ ಮೆಟ್ಟಿ ನಿಂತು ಸ್ವಾವಲಂಬಿಯಾದ ಇವರಿಗೆ ಇಲಾಖೆಯಿಂದ ಸಿಗಬೇಕಾದ ಸೌಲಭ್ಯಗಳನ್ನು ಆದ್ಯತೆಯ ಮೇಲೆ ನೀಡಲು ಬದ್ಧರಾಗಿದ್ದೇವೆ ಎಂದು ತಾಪಂ ಇಒ ಚಂದ್ರಶೇಖರ ಬಿ. ಕಂದಕೂರ ತಿಳಿಸಿದರು.

ನರೇಗಾದ ಮುಖ್ಯ ಉದ್ದೇಶ: ಕೊನೆಯ ಸ್ತರದ ವ್ಯಕ್ತಿಗೂ ಆರ್ಥಿಕ ಭದ್ರತೆ ನೀಡುವುದೇ ನರೇಗಾದ ಮುಖ್ಯ ಉದ್ದೇಶ. ಯಾರ ಮುಂದೆಯೂ ಕೈಯೊಡ್ಡದೆ ಶ್ರಮದಾನ ಮಾಡುತ್ತಿರುವ ರಮೇಶ ಕಂಬಳಿ ಅವರ ಬದುಕು ಜಿಲ್ಲೆಗೆ ಮಾದರಿ. ಇಂತಹ ಕಾಯಕ ಯೋಗಿಗಳಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಅಗತ್ಯವಿರುವ ವೈಯಕ್ತಿಕ ಆಸ್ತಿ ಸೃಜನೆ ಮತ್ತು ಆರ್ಥಿಕ ನೆರವಿನ ಸೌಲಭ್ಯಗಳನ್ನು ಒದಗಿಸಲು ಸಂಪೂರ್ಣ ಪ್ರೋತ್ಸಾಹ ನೀಡಲಾಗುವುದು ಎಂದು ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಸ್ವಾಸ್ಥ್ಯಕ್ಕೆ ತತ್ವಜ್ಞಾನ ಚಿಂತನೆ ಅಗತ್ಯ: ಡಾ. ಶರತ್‌ ರಾವ್‌
ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನ