ಕನ್ನಡಪ್ರಭ ವಾರ್ತೆ ಮಳವಳ್ಳಿ
ವಿದ್ಯಾರ್ಥಿಗಳು ವ್ಯಕ್ತಿತ್ವ ವೃದ್ಧಿಸಿಕೊಂಡು ಸಮಾಜದ ಜವಾಬ್ದಾರಿ ಅರಿಯಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಸುಜಾತ ಕೆ.ಎಂ.ಪುಟ್ಟು ಹೇಳಿದರು.ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದಲ್ಲಿ ಶಾಂತಿ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಮಾಜದೊಂದಿಗೆ ಬೇರೆಯಲು ಮತ್ತು ಅದನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳಲು ಇಂಥ ಚಟುವಟಿಕೆಗಳು ಅತ್ಯಂತ ಅವಶ್ಯಕವಾಗಿವೆ ಎಂಬುದನ್ನು ವಿದ್ಯಾರ್ಥಿಗಳು ತಿಳಿಯಬೇಕು. ನಿಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ್ಯವನ್ನು ಪ್ರದರ್ಶಿಸಬೇಕು ಎಂದರು.ವಿದ್ಯಾರ್ಥಿಗಳು ಪರಿಪೂರ್ಣವಾಗಿ ಬೆಳೆಯುವ ಜೊತೆಗೆ ವ್ಯಕ್ತಿತ್ವ ವೃದ್ಧಿಸಿಕೊಳ್ಳಲು, ಓದುವುದರ ಜೊತೆಗೆ ಸಮಾಜದ ಜವಾಬ್ದಾರಿ ಅರಿಯಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ. ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುವ ಎನ್ಎಸ್ಎಸ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕು. ವ್ಯಕ್ತಿತ್ವ ಎನ್ನುವುದು ಹುಟ್ಟಿನಿಂದ ಬರುವುದಿಲ್ಲ. ಅದನ್ನು ಸಮಾಜದೊಂದಿಗಿನ ಒಡನಾಟದಿಂದ ರೂಪಿಸಿಕೊಳ್ಳಬೇಕು ಎಂದರು.
ಶಾಂತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎಚ್.ಕೆಂಪಯ್ಯ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಸಮುದಾಯ ಸೇವೆ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಶೈಕ್ಷಣಿಕ ಕಾರ್ಯಕ್ರಮವಾಗಿದೆ. ಇದರ ಮೂಲ ಪರಿಕಲ್ಪನೆಯು ಉನ್ನತ ಶಿಕ್ಷಣ ವ್ಯವಸ್ಥೆಗೆ ವಿಸ್ತೃತ ಆಯಾಮ ನೀಡುವುದು ಮತ್ತು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವಾಗ ಸಮುದಾಯ ಸೇವೆಗೆ ಒಲವು ತೋರುತ್ತದೆ ಎಂದರು.ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನವನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭಾರತಿ ಉದ್ಘಾಟಿಸಿ ಶಿಬಿರಕ್ಕೆ ಶುಭ ಕೋರಿದರು. ಶಾಂತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪುಟ್ಟರಾಜು, ಕಲ್ಕುಣಿ ವೈದ್ಯಾಧಿಕಾರಿ ಡಾ.ಸುಪ್ರಿಯಾ, ಪ್ರಾಂಶುಪಾಲರಾದ ಜಿ.ವೇದಮೂರ್ತಿ, ಸಿ.ಅನಿತಾ, ಶಿಬಿರ ಅಧಿಕಾರಿ ಅನಿಲ್, ಸಹ ಶಿಬಿರಾಧಿಕಾರಿ ಸಿದ್ದಯ್ಯ ಹಾಗೂ ಗ್ರಾಮದ ಮುಖಂಡರು ಇದ್ದರು.