ಗ್ರಾಪಂಗೆ ತೆರಿಗೆ ಕಟ್ಟದೆ ಸತಾಯಿಸುತ್ತಿದೆ ಎನ್‌ಟಿಪಿಸಿ

KannadaprabhaNewsNetwork |  
Published : Jul 15, 2025, 01:45 AM IST
ಗ್ರಾಪಂ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ ಕೂಡಗಿ ಎನ್‌ಟಿಪಿಸಿ ತನ್ನ ವ್ಯಾಪ್ತಿಯ ಐದು ಗ್ರಾಮಗಳ ಭೂ ಸ್ವಾಧೀನಕ್ಕೆ ಪ್ರತಿಯಾಗಿ ಆಯಾ ಗ್ರಾಮ ಪಂಚಾಯತಿಗಳಿಗೆ ನೀಡಬೇಕಿದ್ದ ತೆರಿಗೆ ಹಣವನ್ನು ಕಳೆದ ಮೂರು ವರ್ಷಗಳಿಂದ ನೀಡದೇ ಸತಾಯಿಸುತ್ತಿರುವ ಪರಿಣಾಮ ಐದೂ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಪಂ ಅಧ್ಯಕ್ಷರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಕೂಡಗಿ ಎನ್‌ಟಿಪಿಸಿ ತನ್ನ ವ್ಯಾಪ್ತಿಯ ಐದು ಗ್ರಾಮಗಳ ಭೂ ಸ್ವಾಧೀನಕ್ಕೆ ಪ್ರತಿಯಾಗಿ ಆಯಾ ಗ್ರಾಮ ಪಂಚಾಯತಿಗಳಿಗೆ ನೀಡಬೇಕಿದ್ದ ತೆರಿಗೆ ಹಣವನ್ನು ಕಳೆದ ಮೂರು ವರ್ಷಗಳಿಂದ ನೀಡದೇ ಸತಾಯಿಸುತ್ತಿರುವ ಪರಿಣಾಮ ಐದೂ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಪಂ ಅಧ್ಯಕ್ಷರು ಆರೋಪಿಸಿದ್ದಾರೆ.ಈ ಕುರಿತು ಮುತ್ತಗಿ ಬಳಿಯ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ತೆಲಗಿ ಗ್ರಾಪಂ ಅಧ್ಯಕ್ಷ ಅರವಿಂದ ಕೊಪ್ಪದ ಮಾತನಾಡಿ ಎನ್‌ಟಿಪಿಸಿ ಪ್ರತಿ ವರ್ಷ ಕೂಡಗಿ ಗ್ರಾಪಂಗೆ ₹ ೨,೫೪,೯೦,೬೪೯, ಮಸೂತಿ ಗ್ರಾಪಂಗೆ ₹ ೯೯,೪೭,೦೦೦, ತೆಲಗಿ ಗ್ರಾಪಂಗೆ ₹ ೭೮,೩೩,೪೫೩, ಗೊಳಸಂಗಿ ಗ್ರಾಪಂಗೆ ₹ ೬೨,೧೫,೦೦೦, ಮುತ್ತಗಿ ಗ್ರಾಪಂಗೆ ₹ ೩,೧೬,೦೦೦, ಸೇರಿ ಒಟ್ಟು ವರ್ಷಕ್ಕೆ ₹ ೪,೯೮,೦೨,೧೦೨ ತೆರಿಗೆ ಪಾವತಿಸಬೇಕು. ಕಳೆದ ೨೦೨೨-೨೩, ೨೪ ಮತ್ತು ೨೫ ನೇ ಸಾಲಿನ ಮೂರು ವರ್ಷದ ಒಟ್ಟು ತೆರಿಗೆ ₹ ೧೪,೯೪,೦೬,೩೦೬ ಯಾಗಿದೆ. ಅದನ್ನು ನಮ್ಮ ಐದು ಗ್ರಾಮ ಪಂಚಾಯತಿಗಳಿಗೆ ಸಂದಾಯ ಮಾಡಬೇಕಿದೆ ಎಂದರು.

ಗೊಳಸಂಗಿ ಗ್ರಾಪಂ ಅಧ್ಯಕ್ಷ ರಾವುತ ಸೀಮಿಕೇರಿ ಮಾತನಾಡಿ, ಎನ್‌ಟಿಪಿಸಿ ಅಧಿಕಾರಿಗಳು ತೆರಿಗೆ ನೀಡಲು ಸತಾಯಿಸುತ್ತಿದ್ದಾರೆ. ಹೀಗಾಗಿ ನೀರು, ರಸ್ತೆ, ವಿದ್ಯುತ್, ಪರಿಸರ ಸುರಕ್ಷತೆಯಂತ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಹೆಣಗಾಡುವಂತಾಗಿದೆ. ಕಾರಣ ನಮ್ಮ ಪರಿಸ್ಥಿತಿಯನ್ನು ಎನ್‌ಟಿಪಿಸಿ ಅಧಿಕಾರಿಗಳು ಅರಿತು ಕೂಡಲೇ ಮೂರು ವರ್ಷದ ತೆರಿಗೆ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಆದಷ್ಟು ಶೀಘ್ರ ನಮ್ಮ ಗ್ರಾಪಂಗಳ ನೇತೃತ್ವದಲ್ಲಿ ಐದೂ ಗ್ರಾಮಸ್ಥರು ಸೇರಿ ಎನ್‌ಟಿಪಿಸಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೂಡಗಿ ಗ್ರಾಪಂ ಅಧ್ಯಕ್ಷೆ ಹುಸೇನಬಿ ಮಾಶಾಳ, ಮಸೂತಿ ಗ್ರಾಪಂ ಅಧ್ಯಕ್ಷೆ ರೇಣುಕಾ ಹರಿಜನ, ಮುತ್ತಗಿ ಗ್ರಾಪಂ ಅಧ್ಯಕ್ಷೆ ನಿಜವ್ವ ಕುದರಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’