ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜಕೀಯ ಯಜಮಾನರಿಗೆ ಕೊಡವರು ಊಳಿಗಮಾನ್ಯ ನಿಷ್ಠೆಯನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಕರೆ ನೀಡಿದ್ದಾರೆ.ನಂದಿನೆರವಂಡ ಒಕ್ಕ ಬಲ್ಯಮನೆಯಲ್ಲಿ ಶನಿವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಂದಿನೆರವಂಡ ಒಕ್ಕದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಸಂವಿಧಾನವು ಅದರ ನಾಗರಿಕರನ್ನು ಆಳುವ ಅತ್ಯುನ್ನತ ದಾಖಲೆಯಾಗಿದೆ. ಈ ಘನವೆತ್ತ ಸಂವಿಧಾನದಡಿಯಲ್ಲಿ ಸೂಕ್ಷ್ಮ ತೀಸೂಕ್ಷ್ಮ ಕೊಡವರ ಹೆಗ್ಗುರುತು ರಕ್ಷಿಸುವ ಸಲುವಾಗಿ ಕೊಡವಲ್ಯಾಂಡ್ ಸಾಧಿಸುವ ಮೂಲಕ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಶ್ರಮಿಸೋಣ ಎಂದರು.
ಕೊಡವರ ಪರ ಹೋರಾಟ ಕಠಿಣ ಕಾರ್ಯವಾಗಿದೆ. ಸರ್ಕಾರ ಮತ್ತು ಕೊಡವ ವಿರೋಧಿ ಅಂಶಗಳಿಂದ ಹಗೆತನವನ್ನು ಅನುಭವಿಸುತ್ತಿದ್ದೇವೆ. 34 ವರ್ಷಗಳ ನಿರಂತರ ಹೋರಾಟ ಕಹಿ ಸಿಹಿ ಅನುಭವದ ಸುದೀರ್ಘ ಪ್ರಯಾಣವಾಗಿದೆ. ದುಃಖವಿಲ್ಲದೆ ಗೆಲುವಿಲ್ಲ, ತ್ಯಾಗವಿಲ್ಲದೆ ಸ್ವಾತಂತ್ರ್ಯವಿಲ್ಲ ಎಂದರು.ನಾವು ನಮ್ಮ ಇತಿಹಾಸವನ್ನು ತಿಳಿದುಕೊಳ್ಳಬೇಕು, ಆಗ ಮಾತ್ರ ನಾವು ಹೊಸ ಇತಿಹಾಸವನ್ನು ರಚಿಸಬಹುದು. ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿಸಲು ಸಾಧ್ಯವೇ ಇಲ್ಲ. ನಾವು ಕೊಡವರು ಈ ನೆಲದ ಆದಿಮಸಂಜಾತ ಮೂಲ ಬುಡಕಟ್ಟು ಜನಾಂಗ. ಈ ನೆಲದ ಸೃಷ್ಟಿಯ ಆರಂಭದಿಂದಲೂ ನಾವು ಇಲ್ಲಿಯೇ ಇದ್ದೇವೆ. ಮಾನವ ಜನಾಂಗದ ಉತ್ಪತ್ತಿಯಾದಗಿನಿಂದಲೂ ಕೊಡವ ಕುಲ ಇಲ್ಲಿ ಅರಳಿ ವಿಕಾಸಗೊಂಡಿದೆ. ಇಡೀ ಕೊಡವಲ್ಯಾಂಡ್ ಮತ್ತು ಪ್ರಾಚೀನ ಭೂ ಆಸ್ತಿಗಳು ವಿವಿಧ ಕೊಡವ ಕುಲಗಳಿಗೆ ಸೇರಿವೆ. ನಂತರ ಆಕ್ರಮಣಕಾರರು, ದಂಡಯಾತ್ರಿಗಳು, ಅನ್ಯ ಪ್ರದೇಶದ ಕೆಳದಿ ರಾಜರು ಮತ್ತು ಬ್ರಿಟಿಷರು ಪ್ರವೇಶಿಸಿ ತೆರಿಗೆಯನ್ನು ಪಾವತಿಸದ ಆರೋಪದೊಂದಿಗೆ ಕೊಡವರ ಈ ಭೂಮಿಯನ್ನು ವಶಪಡಿಸಿಕೊಂಡರು.
ಈ ನಿಟ್ಟಿನಲ್ಲಿ ಅವರ ಅಚಲ ಬದ್ಧತೆ ಈಗ ಪರಾಕಾಷ್ಠೆಯನ್ನು ತಲುಪಿದೆ ಎಂದು ದಿನೇಶ್ ಹೇಳಿದರು. ಕೊಡವ ಸಮುದಾಯದ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ನಮ್ಮ ಕುಲದ ನಾಚಪ್ಪನವರ ಬಗ್ಗೆ ಇಡೀ ಕೊಡವ ಸಮುದಾಯ ಮತ್ತು ವಿಶೇಷವಾಗಿ ನಂದಿನೆರವಂಡ ಕುಲ ಹೆಮ್ಮೆ ಪಡಬೇಕೆಂದು ಒತ್ತಿ ಹೇಳಿದರು.ಕುಲದ ಹಿರಿಯ ಸದಸ್ಯರಾದ ಪಾಲಿ ಗಣೇಶ್, ಸೀತಾ ಸೋಮಯ್ಯ, ಶಾಂತಿ ಗಣಪತಿ, ಹಿರಿಯರಾದ ಅಪ್ಪಯ್ಯ, ಗಣೇಶ್ ಚೀಯಣ್ಣ, ರವಿ ಬಸಪ್ಪ, ರವಿ ಕುಟ್ಟಪ್ಪ, ಅಯ್ಯಣ್ಣ, ಮಂದಪ್ಪ, ಮಧು, ನಂದಾ, ಬಿದ್ದಪ್ಪ, ಜಗದೀಶ್, ನಿತಿನ್, ಕಾಶಿ, ಸುರೇಶ್, ಅಚ್ಚಯ್ಯ, ಅಪ್ಪಚ್ಚು, ರಮೇಶ್, ಸೋಮಣ್ಣ ಸೇರಿ ಹಲವು ಹಿರಿಯ, ಕಿರಿಯ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು. ಕುಟುಂಬಸ್ಥರು ನಾಚಪ್ಪ ಕೊಡವರವರಿಗೆ ನೆನಪಿನ ಕಾಣಿಕೆ ನೀಡಿದರು.