ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ: ಡಿಸಿ ಮಾಹಿತಿ
ಜಿಲ್ಲೆಯಲ್ಲಿನ ವಿಪತ್ತು ನಿರ್ವಹಣಾ ವ್ಯವಸ್ಥೆಯ ಸಿದ್ಧತೆ ಪರಿಶೀಲಿಸುವ ಉದ್ದೇಶದಿಂದ ಅಣಕು ಕಾರ್ಯಾಚರಣೆಯನ್ನು ಡಿ.11ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯು ವಿಪತ್ತು ಎದುರಿಸಲು ಎಷ್ಟು ಸಿದ್ಧವಾಗಿದೆ ಎಂಬುದನ್ನು ಎಲ್ಲರಿಗೂ ತಿಳಿಸಲು ಮತ್ತು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಈ ಪೂರ್ವಭಾವಿ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ಮೆಂಟ್‌ನ ನಿರ್ದೇಶನದಂತೆ ಪ್ರತಿ ವರ್ಷವೂ ಜಿಲ್ಲೆಯ ಸಿದ್ಧತೆಗಳನ್ನು ಪರೀಕ್ಷಿಸಲು ಈ ಮಾಕ್ ಡ್ರಿಲ್ ನಡೆಸಲಾಗುತ್ತದೆ. ಈ ಬಾರಿ, ಸೈಕ್ಲೋನ್ ಕಾರಣದಿಂದ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ನಿಂದ ರೇಡಿಯೇಶನ್ ಸೋರಿಕೆಯಾದ ನಿರ್ದಿಷ್ಟ ಸನ್ನಿವೇಶ ಆಧರಿಸಿ ಕಾರ್ಯಾಚರಣೆ ರೂಪಿಸಲಾಗಿದೆ ಎಂದರು.ಎನ್‌ಪಿಸಿಐಎಲ್ ನಿರ್ದೇಶನಗಳ ಪ್ರಕಾರ, ಗ್ರಾಪಂ ಮಟ್ಟದಲ್ಲಿ ಹಳ್ಳಿಗಳು ಹೇಗೆ ಸಿದ್ಧರಾಗಬೇಕು ಎಂಬುದರ ಕುರಿತು ಕಾರ್ಯನಿರ್ವಹಿಸಲಾಗುತ್ತದೆ. ರೇಡಿಯೇಶನ್ ಘಟನೆಯ ಸಂದರ್ಭದಲ್ಲಿ ಶೆಲ್ಟರಿಂಗ್ ಅಥವಾ ಆಶ್ರಯ ಪಡೆಯುವುದು ಮುಖ್ಯವಾಗಿದ್ದು, ಆರ್‌ಸಿಸಿ ಮನೆಯೊಳಗೆ ರಕ್ಷಿತ ವಾತಾವರಣದಲ್ಲಿ ಇರಬೇಕಾಗುತ್ತದೆ. ಅಗತ್ಯವಿದ್ದರೆ, ರೇಡಿಯೇಶನ್ ತಡೆಗಟ್ಟಲು ಐಟಿಬಿ ಮಾತ್ರೆಗಳ ವಿತರಣೆಯನ್ನು ಪ್ರಾಯೋಗಿಕವಾಗಿ ತೋರಿಸಲಾಗುತ್ತದೆ. ಅಗತ್ಯಬಿದ್ದರೆ ಜನರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಹಾಗೂ ಬಾಹ್ಯವಾಗಿ ಆಹಾರ ಸಾಮಗ್ರಿಗಳನ್ನು ಪೂರೈಸುವ ಪ್ರಕ್ರಿಯೆಗಳನ್ನು ಈ ಅಣಕು ಪ್ರದರ್ಶನ ಒಳಗೊಂಡಿದೆ.
ಇದು ಸಂಪೂರ್ಣವಾಗಿ ಅಣಕು ಪ್ರದರ್ಶನವಾಗಿದ್ದು, ಇದರಲ್ಲಿ 60-70 ಆಪ್ತ ಮಿತ್ರ ಸ್ವಯಂಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆ ರೇಡಿಯೇಶನ್ ಸಂಬಂಧಿತ ಘಟನೆಗಳು ಜಿಲ್ಲೆಯಲ್ಲಿ ಸಂಭವಿಸದಿದ್ದರೂ, ಸಿದ್ಧರಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂಬ ಉದ್ದೇಶದಿಂದ ಈ ಮಾಕ್ ಡ್ರಿಲ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ರೀತಿಯಲ್ಲಿ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.---ಎನ್‌ಡಿಆರ್‌ಎಫ್ ಉಪಕರಣಗಳ ಪ್ರದರ್ಶನ
ಈ ಪ್ರದರ್ಶನವನ್ನು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಜಿಪಂ ಸಿಇಒ ಡಾ. ದಿಲೀಶ್ ಶಶಿ ಹಾಗೂ ಕೈಗಾದ ಎನ್‌ಪಿಸಿಐಎಲ್ ಅಧಿಕಾರಿಗಳು ವೀಕ್ಷಿಸಿದರು.
ಘಟನೆಯಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡುವ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಾಚರಣೆಯ ಕೊನೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾಗೆ ಅಗ್ನಿಶಾಮಕ ಅಧಿಕಾರಿಗಳು ಘಟನೆ ಬಗ್ಗೆ ವರದಿ ನೀಡಿದರು.