ಅಣು ವಿದ್ಯುತ್ ಸ್ಥಾವರ: ಜಾಗದ ಲಭ್ಯತೆ ವರದಿ ಕೇಳಿದ ಸರ್ಕಾರ

KannadaprabhaNewsNetwork | Published : Jan 12, 2025 1:18 AM

ಸಾರಾಂಶ

ಜಿಲ್ಲೆಯಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಲಿಮಿಟೆಡ್‌(ಎನ್ ಟಿ ಪಿಸಿಎಲ್‌) ಉದ್ದೇಶಿಸಿದ್ದು, ಈ ಕುರಿತು ಜಾಗೆ ಗುರುತಿಸುವಂತೆ ಈಗಾಗಲೇ ಸೂಚಿಸಿದ್ದು, ಈ ಕುರಿತು ವರದಿ ನೀಡುವಂತೆ ಕೇಳಿದ್ದು, ಇದುವರೆಗೂ ವರದಿ ಸಲ್ಲಿಸಿಲ್ಲವಾದ್ದರಿಂದ ಕೂಡಲೇ ವರದಿ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ಜಿಲ್ಲಾಧಿಕಾರಿಗಳಿಂದ ಸ್ಥಳದ ಕುರಿತು ತುರ್ತು ವರದಿ ಕೇಳಿದ ರಾಜ್ಯ ಸರ್ಕಾರ

ಅಣು ವಿದ್ಯುತ್ ಸ್ಥಾವರ ಉಹಾಪೋಹ ಎನ್ನುವವರಿಗೆ ಇಲ್ಲಿದೆ ದಾಖಲೆ

ಕೊಪ್ಪಳ ಡಿಸಿಗೆ ಕಂದಾಯ ಕಾರ್ಯದರ್ಶಿ ಬರೆದ ಪತ್ರ ಕನ್ನಡಪ್ರಭಕ್ಕೆ ಲಭ್ಯಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಲಿಮಿಟೆಡ್‌(ಎನ್ ಟಿ ಪಿಸಿಎಲ್‌) ಉದ್ದೇಶಿಸಿದ್ದು, ಈ ಕುರಿತು ಜಾಗೆ ಗುರುತಿಸುವಂತೆ ಈಗಾಗಲೇ ಸೂಚಿಸಿದ್ದು, ಈ ಕುರಿತು ವರದಿ ನೀಡುವಂತೆ ಕೇಳಿದ್ದು, ಇದುವರೆಗೂ ವರದಿ ಸಲ್ಲಿಸಿಲ್ಲವಾದ್ದರಿಂದ ಕೂಡಲೇ ವರದಿ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಗದೀಶ ಕೆ. ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ತುರ್ತು ಕ್ರಮವಹಿಸಿ, ವರದಿ ನೀಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಸರ್ಕಾರದ ಪ್ರಧಾನ ಕಾರ್ಯದರ್ಶಿ ಬರೆದಿರುವ ಪತ್ರ ಕನ್ನಡಪ್ರಭಕ್ಕೆ ಲಭ್ಯವಾಗಿದೆ. ಸರ್ಕಾರದ ಹಂತದಲ್ಲಿಯೇ ಜಿಲ್ಲೆಯಲ್ಲಿ ಅಣು ವಿದ್ಯುತ್‌ ಸ್ಥಾವರ ಸ್ಥಾಪಿಸುವ ಕುರಿತು ಯಾವುದೇ ಪ್ರಸ್ತಾವ ಇಲ್ಲ ಎನ್ನುತ್ತಿದ್ದವರಿಗೆ ಈ ಪತ್ರ ಸ್ಪಷ್ಟ ಸಂದೇಶ ನೀಡುತ್ತದೆ.

ಪತ್ರದಲ್ಲಿ ಏನಿದೆ:

ಎನ್ ಟಿ ಪಿಎಸ್ ನವರು ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಅನುಷ್ಠಾನಗೊಳಿಸಲು ಉದ್ದೇಶಿಸಿ ಕೊಪ್ಪಳ ಜಿಲ್ಲೆಯ ಕರಡಿಗುಡ್ಡ(15.44ಎನ್ 76.23 ಇ) , ರಾಯಚೂರು ಜಿಲ್ಲೆಯ ಹಲ್ಕವಟಗಿ(16.12 ಎನ್,76.25 ಇ) ನಲ್ಲಿ ಸ್ಥಳ ಗುರುತಿಸಿರುತ್ತಾರೆ. 2000 ಮೆಗಾವ್ಯಾಟ್ ಪರಮಾಣು ವಿದ್ಯುತ್ ಸ್ಥಾವರಕ್ಕೆ ಕನಿಷ್ಠ 1200 ಎಕರೆಗಳಷ್ಟು ಜಮೀನು ಅಗತ್ಯವಿರುತ್ತದೆ. ಸದರಿ ಜಾಗಗಳು ಪರಮಾಣು ಯೋಜನೆಯ ಅಭಿವೃದ್ಧಿಗೆ ಸೂಕ್ತವಾಗಿದೆಯೇ ಎಂದು ತಿಳಿದುಕೊಳ್ಳಲು ಪ್ರಾಥಮಿಕ ಅಧ್ಯಯನ ಕೈಗೊಳ್ಳಲು ಅನುಮತಿ ನೀಡಲು ಪ್ರಸ್ತಾಪಿತ ಜಾಗವು ಲಭ್ಯವಿದೆಯೇ , ಬೇರೆ ಯಾವುದೇ ನಿರ್ಮಾಣ ಯೋಜನೆಗಳನ್ನು ಹೊಂದಿಲ್ಲ ಎಂಬುದರ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಉಲ್ಲೇಖಿತ ಪತ್ರದಲ್ಲಿ ಕೋರಲಾಗಿತ್ತು. ಆದರೆ, ಮಾಹಿತಿಯನ್ನು ಇಲ್ಲಿಯವರೆಗೂ ಕಳುಹಿಸಿಲ್ಲ. ಆದ್ದರಿಂದ ತುರ್ತಾಗಿ ಜಾಗ ಲಭ್ಯತೆಯನ್ನು ಒದಗಿಸುವಂತೆ ಮತ್ತೊಮ್ಮೆ ನಿರ್ದೇಶನ ಮಾಡಲಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ 2024ರ ಡಿ. 5ರಂದೇ ಪತ್ರ ಸ್ವೀಕಾರ ಮಾಡಿದ್ದಾರೆ.

ಯಾವ ಕರಡಿಗುಡ್ಡ:

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿಯೊಂದು ಕರಡಿಗುಡ್ಡ ಇದ್ದು, ಕೊಪ್ಪಳ ತಾಲೂಕಿನ ಕಾಮನೂರು ಗ್ರಾಮದ ಬಳಿ ಮತ್ತೊಂದು ಕರಡಿಗುಡ್ಡ ಇದೆ. ಆದರೆ, ಯಾವುದು ಎನ್ನುವುದು ಪಕ್ಕಾ ಇಲ್ಲ. ಆದರೆ, ಗುರುತಿಸಲಾಗಿರುವ ಅಂಕ್ಷಾಂಶ ಮತ್ತು ರೇಖಾಂಶವನ್ನು ಆಧರಿಸಿ, ಕನಕಗಿರಿ ತಾಲೂಕಿನ ಕರಡಿಗುಡ್ಡದಲ್ಲಿ ಎಂದು ಮೇಲ್ನೋಟಕ್ಕೆ ಅಧಿಕಾರಿಗಳು ಹೇಳುತ್ತಾರೆ.

ಸರ್ಕಾರದಿಂದಲೇ ಪತ್ರ:

ಕೊಪ್ಪಳ ಜಿಲ್ಲೆಯಲ್ಲಿ ಪರಮಾಣು ವಿದ್ಯುತ್ ಯೋಜನೆಯನ್ನು ಪ್ರಾರಂಭಿಸುವ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಂತದಲ್ಲಿ ಯಾವುದೇ ತೀರ್ಮಾನ ಆಗಿಲ್ಲ ಎನ್ನುತ್ತಿದ್ದವರಿಗೆ ಈ ಪತ್ರದಲ್ಲಿ ಸ್ಪಷ್ಟ ಉತ್ತರ ಇದೆ.

ರಾಜ್ಯ ಸರ್ಕಾರ ಪತ್ರ ಬರೆದಿರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಂತದಲ್ಲಿ ಜಿಲ್ಲೆಯಲ್ಲಿ ಪರಮಾಣು ವಿದ್ಯುತ್ ಸ್ಥಾಪಿಸುವ ಯೋಜನೆ ಇರುವುದು ಸ್ಪಷ್ಟವಾಗುತ್ತದೆ.

Share this article