ಮುಂಡಗೋಡ: ನುಲಿಯ ಚಂದಯ್ಯನವರು ೧೨ನೇ ಶತಮಾನದಲ್ಲಿ ಕಾಯಕದಲ್ಲಿಯೇ ದೇವರನ್ನು ಕಂಡ ಮಹಾನ್ ವ್ಯಕ್ತಿ. ಒಳ್ಳೆಯ ಕೆಲಸ ಮಾಡಿದವರ ಹೆಸರು ಸಮಾಜದಲ್ಲಿ ಅಜರಾಮರವಾಗಿ ಉಳಿಯುತ್ತದೆ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಬಣ್ಣಿಸಿದರು.ಪಟ್ಟಣದ ನಗರಸಭಾ ಭವನದಲ್ಲಿ ಶುಕ್ರವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಯ ಆಶ್ರಯದಲ್ಲಿ ನುಲಿಯ ಚಂದಯ್ಯನವರ ೯೧೭ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮ ಮತ್ತು ಕಾಯಕ ಇವೆರಡೂ ನಮ್ಮ ಕೈ ಹಿಡಿಯುತ್ತವೆ. ಶ್ರದ್ಧಾ ಮನೋಭಾವನೆಯಿಂದ ಕೆಲಸ ಮಾಡಿದರೆ ಯಶಸ್ಸು ಲಭಿಸುತ್ತದೆ. ಇದೇ ಸಂದೇಶವನ್ನು ಸಮಾಜಕ್ಕೆ ಸಾರಿದ ಕೀರ್ತಿ ನುಲಿಯ ಚಂದಯ್ಯನವರಿಗೆ ಸಲ್ಲುತ್ತದೆ. ಸಾಹಿತ್ಯ ಮತ್ತು ಧರ್ಮದ ಹಾದಿಯನ್ನು ಮಕ್ಕಳಿಗೆ ಹಾಕಿ ಕೊಡಬೇಕು. ಸಾಧಕರ ಜಯಂತಿ ಆಚರಣೆ ಒಂದು ದಿನಕ್ಕೆ ಸೀಮಿತವಾಗದೆ ಅವರ ತತ್ವ- ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಧ್ಯಾಪಕ ಡಾ. ಬಿ.ಎಸ್. ಭಜಂತ್ರಿ ಮಾತನಾಡಿ, ಕೇವಲ ಪೂಜೆಗೆ ಸೀಮಿತವಾಗಿದ್ದ ವಚನ ಸಾಹಿತ್ಯ ೮೦೦ ವರ್ಷಗಳ ಕಾಲ ಭೂಗತವಾಗಿತ್ತು. ದೇವರಿಗಿಂತ ಕಾಯಕ ಮುಖ್ಯ ಎಂಬ ಪ್ರತಿಪಾದಕ ನುಲಿ ಚಂದಯ್ಯನವರು ಢಾಂಬಿಕ ಭಕ್ತಿಗೆ ಜೋತು ಬೀಳದೆ ಕಾಯಕದಲ್ಲಿ ನಿರತರಾಗಿದ್ದರು. ಅವರ ಕಾಯಕವನ್ನು ಮೆಚ್ಚಿ ದೇವರೇ ನುಲಿಯ ಚಂದಯ್ಯನನ್ನು ಹುಡುಕಿಕೊಂಡು ಬಂದ ಇತಿಹಾಸವಿದೆ ಎಂದರುತಹಸೀಲ್ದಾರ್ ಶಂಕರ್ ಗೌಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಎಕೆಎಂಎಸ್ ರಾಜ್ಯಾಧ್ಯಕ್ಷ ಶಿವಾನಂದ ಭಜಂತ್ರಿ ಮಾತನಾಡಿದರು. ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ., ಉಪನ್ಯಾಸಕ ರವಿ ಭಜಂತ್ರಿ, ಮುಖಂಡರಾದ ಹನುಮಂತ ಭಜಂತ್ರಿ, ರಮೇಶ ಭಜಂತ್ರಿ, ಶಿವಾನಂದ ಭಜಂತ್ರಿ, ಹನ್ಮಂತ ಆರೆಗೊಪ್ಪ, ಹನ್ಮಂತಪ್ಪ ಕೊರವರ, ನಾಗಪ್ಪ ಕೊರವರ, ಪರಶುರಾಮ ಕೊರವರ, ರಾಜು ಕೊರವರ, ಶಿವಪ್ಪ ಕೊರವರ, ಮಂಜುನಾಥ ರಾಮಾಪುರ, ಈರಪ್ಪ ಭಜಂತ್ರಿ, ರಮೇಶ ಕೊರವರ ಮುಂತಾದವರಿದ್ದರು.ಮಲ್ಲಿಕಾರ್ಜುನ ಭಜಂತ್ರಿ ಸ್ವಾಗತಿಸಿದರು. ರವಿ ಭಜಂತ್ರಿ ನಿರೂಪಿಸಿದರು. ಸಂಜನಾ ಭಜಂತ್ರಿ ಕೊಳಗಿ ಅವರಿಂದ ಮಂಗಳ ವಾದ್ಯ ನುಡಿಸಿ ಗೀತೆ ಹೇಳುವ ಮೂಲಕ ಎಲ್ಲರ ಗಮನ ಸೆಳೆದಳು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ನುಲಿಯ ಚಂದಯ್ಯನವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.