ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಮ್ ಟೀಮ್ ಬದ್ಧ

KannadaprabhaNewsNetwork | Published : Dec 10, 2024 12:31 AM

ಸಾರಾಂಶ

ಸೊರಬ: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಲಹ ಹೈಕಮಾಂಡ್‌ನ ಅಂಗಳದಲ್ಲಿದೆ. ನಮ್ ಟೀಮ್‌ ಅನ್ನು ತೆಗೆದು ಹಾಕುವ ಅಥವಾ ಪಕ್ಷದಲ್ಲಿಯೇ ಉಳಿಸಿಕೊಳ್ಳುವ ತೀರ್ಮಾನ ವರಿಷ್ಠರಿಗೆ ಬಿಟ್ಟ ವಿಚಾರ. ಆದರೆ ನಾವು ಎಲ್ಲದಕ್ಕೂ ಬದ್ಧರಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಂಪಿನಲ್ಲಿ ಗುರ್ತಿಸಿಕೊಂಡಿರುವ ಮಾಜಿ ಸಚಿವ ಕುಮಾರ ಬಂಗಾರಪ್ಪ ಮಾರ್ಮಿಕವಾಗಿ ನುಡಿದರು.

ಸೊರಬ: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಲಹ ಹೈಕಮಾಂಡ್‌ನ ಅಂಗಳದಲ್ಲಿದೆ. ನಮ್ ಟೀಮ್‌ ಅನ್ನು ತೆಗೆದು ಹಾಕುವ ಅಥವಾ ಪಕ್ಷದಲ್ಲಿಯೇ ಉಳಿಸಿಕೊಳ್ಳುವ ತೀರ್ಮಾನ ವರಿಷ್ಠರಿಗೆ ಬಿಟ್ಟ ವಿಚಾರ. ಆದರೆ ನಾವು ಎಲ್ಲದಕ್ಕೂ ಬದ್ಧರಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಂಪಿನಲ್ಲಿ ಗುರ್ತಿಸಿಕೊಂಡಿರುವ ಮಾಜಿ ಸಚಿವ ಕುಮಾರ ಬಂಗಾರಪ್ಪ ಮಾರ್ಮಿಕವಾಗಿ ನುಡಿದರು.ಸೋಮವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಟುಂಬ ಎಂದ ಮೇಲೆ ಭಿನ್ನಾಭಿಪ್ರಾಯಗಳು ಸಹಜ. ಇದು ಯಾವುದೇ ಪಕ್ಷದಿಂದಲೂ ಹೊರತಾಗಿಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರೊಂದಿಗೆ ಈಗಾಗಲೇ ಮಾತುಕತೆ ನಡೆದಿದೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರವಾಣಿ ಮೂಲಕ ಸಂಪರ್ಕಿಸಿ ಆಂತರಿಕ ಭಿನ್ನಾಭಿಪ್ರಾಯಗಳು ಯಾವುದೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಮಾತುಕತೆ ನಡೆಸಿ, ಬಗೆಹರಿಸಿಕೊಳ್ಳೋಣ ಎನ್ನುವ ಭರವಸೆ ನೀಡಿದ್ದಾರೆ. ಹಾಗಾಗಿ ಶೀಘ್ರದಲ್ಲಿಯೇ ಎಲ್ಲವೂ ಸುಖಾಂತ್ಯವಾಗುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.ರೈತರ, ಮಠ, ಮಂದಿರ, ಜಮೀನು ಹಾಗೂ ಹಿಂದೂ-ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯದವರ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿರುವುದರ ವಿರುದ್ಧ ಯತ್ನಾಳ್ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಯಶಸ್ವಿಯಾಗಿದ್ದು, ನಾನು ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಒಡಗೂಡಿ ಕೇಂದ್ರದ ವರಿಷ್ಠರಿಗೆ ವರದಿ ಸಲ್ಲಿಸಿದ್ದೇವೆ. ಇದರಿಂದ ಕೇಂದ್ರ ನಾಯಕರು ಸಂತೃಪ್ತಗೊಂಡು ವಕ್ಫ್ ಹೋರಾಟ ಮುಂದುವರೆಸಿ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ತಂಡ ಶಿವಮೊಗ್ಗ ಜಿಲ್ಲೆಯಲ್ಲಿ ಹೋರಾಟ ನಡೆಸುವ ಯೋಜನೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ರೈತರು ಮತ್ತು ಸಾರ್ವಜನಿಕರ ಯಾವುದೇ ಸಮಸ್ಯೆಗಳು ಬಗೆಹರಿದಿಲ್ಲ. ತಾಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಲಂಚ ತಾಂಡವವಾಡುತ್ತಿದೆ. ಅಕ್ಷರ ಜ್ಞಾನ ಇಲ್ಲದವರಿಗೆ ಸಚಿವ ಸ್ಥಾನ ನೀಡಿದರೆ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಎಂದು ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಹರಿಹಾಯ್ದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಮುಖಂಡರಾದ ಗುರುಕುಮಾರ್ ಪಾಟೀಲ್, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಪುರಸಭೆ ಸದಸ್ಯ ಎಂ.ಡಿ.ಉಮೇಶ್, ಕೃಷ್ಣಮೂರ್ತಿ ಕೊಡಕಣಿ, ಅಭಿಷೇಕ್‌ಗೌಡ ಬೆನ್ನೂರು, ಶಿವಮೂರ್ತಿ, ಚಂದ್ರಣ್ಣ ಕೊಡಕಣಿ, ರಂಗನಾಥ ಮೋಗವೀರ ಮತ್ತಿತರರಿದ್ದರು.

Share this article