ಕಲ್ಯಾಣ ಕರ್ನಾಟಕದಲ್ಲಿ ನರ್ಸರಿ ಮಾದರಿ ಶಾಲೆ ಆರಂಭ

KannadaprabhaNewsNetwork | Published : Jun 13, 2024 12:58 AM

ಸಾರಾಂಶ

ನರ್ಸರಿ ಶಾಲೆಗಳ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿನ 1,008 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ (2024-25) ಪ್ರಾಯೋಗಿಕವಾಗಿ ‘ಬಾಲ್ಯಪೂರ್ವ ಆರೈಕೆ ಮತ್ತು ಶಿಕ್ಷಣ’ (ಇಸಿಸಿಇ) ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿ 7.56 ಕೋಟಿ ರು. ಬಿಡುಗಡೆ ಮಾಡಿದೆ.

7 ಜಿಲ್ಲೆಗಳ 1008 ಪ್ರಾಥಮಿಕ ಶಾಲೆಗಳಲ್ಲಿ ಶುರು । ಸರ್ಕಾರದಿಂದ 7.56 ಕೋಟಿ ರು. ಬಿಡುಗಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ನರ್ಸರಿ ಶಾಲೆಗಳ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿನ 1,008 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ (2024-25) ಪ್ರಾಯೋಗಿಕವಾಗಿ ‘ಬಾಲ್ಯಪೂರ್ವ ಆರೈಕೆ ಮತ್ತು ಶಿಕ್ಷಣ’ (ಇಸಿಸಿಇ) ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿ 7.56 ಕೋಟಿ ರು. ಬಿಡುಗಡೆ ಮಾಡಿದೆ.

ಪ್ರತಿ ತರಗತಿಗೆ ಸರಾಸರಿ 30ರಿಂದ 40 ಮಕ್ಕಳು ಪ್ರವೇಶ ಪಡೆಯಬಹುದು. ಇದರಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸುಮಾರು 30,000ದಿಂದ 40,000 ಮಕ್ಕಳಿಗೆ ಅನುಕೂಲವಾಗಲಿದೆ. ನರ್ಸರಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿ 3 ವರ್ಷ ನಿಗದಿಪಡಿಸಲಾಗಿದೆ. ತರಗತಿಗಳ ಆರಂಭಕ್ಕೆ ಬೇಕಾದ ಬೋಧನೆ, ಕಲಿಕಾ ಸಾಮಗ್ರಿ ಖರೀದಿ, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಪ್ರತಿ ಶಾಲೆಗೆ 75 ಸಾವಿರ ರು. ಅನುದಾನವನ್ನು ನಿಗದಿಪಡಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ನಿಧಿಯಿಂದ ಅನುದಾನ ಬಳಸಿಕೊಳ್ಳಲು ನಿರ್ದೇಶನ ನೀಡಲಾಗಿದೆ.

ನರ್ಸರಿ ತರಗತಿಗಳಿಗೆ ಅಗತ್ಯವಿರುವ ಶಿಕ್ಷಕರು ಮತ್ತು ಆಯಾಗಳ ನೇಮಕಕ್ಕೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ಅತಿಥಿ ಶಿಕ್ಷಕರಿಗೆ ಮಾಸಿಕ 10 ಸಾವಿರ ರು. ಮತ್ತು ಆಯಾಗೆ ಮಾಸಿಕ 5 ಸಾವಿರ ರು. ಗೌರವ ಧನ ನಿಗದಿಪಡಿಸಲಾಗಿದೆ.

ತರಬೇತಿ ಮತ್ತು ವೇತನ:

ನೇಮಕಗೊಳ್ಳುವ ಶಿಕ್ಷಕರು ಮತ್ತು ಆಯಾ ಅವರಿಗೆ ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆಯಲ್ಲಿ(ಡಯಟ್) ಅಗತ್ಯ ತರಬೇತಿ ನೀಡಲಾಗುತ್ತದೆ. ಪಠ್ಯಕ್ರಮ ಮತ್ತು ಬೋಧನೆ ಉಪಕರಣಗಳನ್ನು ಶಿಕ್ಷಣ ಇಲಾಖೆಯಿಂದಲೇ ಒದಗಿಸಲಾಗುತ್ತದೆ. ನರ್ಸರಿ ತರಗತಿಗಳ ಅನುಷ್ಠಾನ ಜವಾಬ್ದಾರಿಯನ್ನು ಪ್ರಾಥಮಿಕ ಶಾಲೆಯ ಸಹ ಶಿಕ್ಷಕರು, ಉಪನ್ಯಾಸಕರು ನೋಡಿಕೊಳ್ಳುತ್ತಾರೆ. ನರ್ಸರಿ ಆರಂಭಿಸಲು ಪ್ರಾಥಮಿಕ ಶಾಲೆಯಲ್ಲೇ ಪ್ರತ್ಯೇಕವಾಗಿ ಒಂದು ತರಗತಿಯನ್ನು ಮೀಸಲಿಡಲಾಗುತ್ತದೆ.ಎಸ್‌ಡಿಎಂಸಿ ಮತ್ತು ಶಿಕ್ಷಕರು ಸ್ಥಳೀಯ ಮಟ್ಟದಲ್ಲಿ ಪ್ರಚಾರ ನಡೆಸುವ ಮೂಲಕ ನರ್ಸರಿ ತರಗತಿಗೆ ಮಕ್ಕಳ ಪ್ರವೇಶ ಪಡೆದುಕೊಳ್ಳಲು ನೆರವಾಗಬೇಕು. ಮೇಲ್ವಿಚಾರಣೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡಬೇಕು ಎಂದು ನರ್ಸರಿ ಆರಂಭಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತು ವಿವರವಾದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.ಪ್ರಮುಖಾಂಶಗಳು- ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ 1,008 ಪ್ರಾಥಮಿಕ ಶಾಲೆಗಳಲ್ಲಿ ನರ್ಸರಿ(ಇಸಿಸಿಇ) ತರಗತಿಗಳು ಆರಂಭ.

- ಸಮಯ ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರ ವರೆಗೆ.

- ಅಂಗನವಾಡಿಗಳಂತೆ ನರ್ಸರಿ ಮಕ್ಕಳಿಗೆ ಹಾಲು, ಉಪಾಹಾರ ಮತ್ತು ಮಧ್ಯಾಹ್ನದ ಊಟ ವಿತರಣೆ.

- ಪ್ರತಿ ತರಗತಿಯಲ್ಲಿ 30ರಿಂದ 40 ಮಕ್ಕಳ ಪ್ರವೇಶಕ್ಕೆ ಅವಕಾಶ.

- ಪ್ರತಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ 75 ಸಾವಿರ ರು. ಅನುದಾನ.

- ಬೋಧನೆಗೆ ಅತಿಥಿ ಶಿಕ್ಷಕರು, ಆಯಾಗಳ ನೇಮಕ.

- ನರ್ಸರಿ ಶಾಲೆಗಳ ಆರಂಭಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನ ಬಳಕೆ.ಜಿಲ್ಲಾವಾರು ಇಸಿಸಿಐ/ ನರ್ಸರಿ ತರಗತಿಗಳ ವಿವರ*ಬಳ್ಳಾರಿ-119*ಬೀದರ್-98*ಕಲಬುರಗಿ-234*ಕೊಪ್ಪಳ-131*ರಾಯಚೂರು-190*ಯಾದಗಿರಿ-94*ವಿಜಯನಗರ- 142

Share this article