ಆಣೆ ಪ್ರಮಾಣಗಳಿಗೆ ಬೆಲೆ ಇಲ್ಲದಂತಾಗಿದೆ: ಶಾಸಕ ಬಾಲಕೃಷ್ಣ

KannadaprabhaNewsNetwork |  
Published : Aug 13, 2024, 12:58 AM IST
2.ಮಣಿಗನಹಳ್ಳಿ ಗ್ರಾಮದ ನರಸಿಂಹಸ್ವಾಮಿ ದೇವಾಲಯದ ಜೀರ್ಣೋದ್ದಾರ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ದೇವಾಲಯದ ಅಂಗಳದೊಳಗೆ ಕೂತು ನ್ಯಾಯ ಮಾಡಿದರೆಂದರೆ ಅದೆಂತಹದ್ದೇ ವ್ಯಾಜ್ಯ ಆಗಿದ್ದರೂ ತೀರ್ಮಾನವಾಗುತ್ತಿತ್ತು. ಅಂತಹ ಪರಂಪರೆ ಮರೆಯಾಗುತ್ತಿರುವುದು ವಿಷಾದನೀಯ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು. ಕುದೂರಿನಲ್ಲಿ ತಿಮ್ಮರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮತ್ತು ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

-ಮಣಿಗನಹಳ್ಳಿಯಲ್ಲಿ ನರಸಿಂಹಸ್ವಾಮಿ, ತಿಮ್ಮರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುದೂರು

ದೇವಾಲಯಗಳು ನೆಮ್ಮದಿಯ ತಾಣ ಮಾತ್ರವಾಗಿರದೆ ಅದು ನ್ಯಾಯಾಲಯದ ಅಂಗಳವೂ ಆಗಿತ್ತು. ದೇವಾಲಯದ ಅಂಗಳದೊಳಗೆ ಕೂತು ನ್ಯಾಯ ಮಾಡಿದರೆಂದರೆ ಅದೆಂತಹದ್ದೇ ವ್ಯಾಜ್ಯ ಆಗಿದ್ದರೂ ತೀರ್ಮಾನವಾಗುತ್ತಿತ್ತು. ಅಂತಹ ಪರಂಪರೆ ಮರೆಯಾಗುತ್ತಿರುವುದು ವಿಷಾದನೀಯ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ಮಣಿಗನಹಳ್ಳಿಯ ನರಸಿಂಹಸ್ವಾಮಿ ಮತ್ತು ತಿಮ್ಮರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮತ್ತು ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂದಿನ ದಿನಗಳಲ್ಲಿ ದೇವಾಲಯಗಳಲ್ಲಿ ದೇವರ ಮೇಲೆ ಪ್ರಮಾಣ ಮಾಡಿ ನ್ಯಾಯಕ್ಕೆ ಕೂರುತ್ತಿದ್ದರು. ಈಗ ಆಣೆ ಪ್ರಮಾಣಗಳಿಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ಆಣೆ ಮಾಡಿ ತಪ್ಪು ಕಾಣಿಕೆ ಹಾಕಿ ತಪ್ಪಾಯ್ತು ಅಂದರೆ ದೇವರು ಕ್ಷಮಿಸುತ್ತಾನೆ ಎಂಬ ತಪ್ಪು ತಿಳಿವಳಿಕೆಯಲ್ಲಿ ಜನರಿದ್ದಾರೆ. ಆದರೆ ತಪ್ಪು ಮಾಡಿದ ಕರ್ಮಗಳಿಗೆ ಪ್ರತಿಫಲ ಅನುಭವಿಸಲೇಬೇಕು ಎಂದು ಹೇಳಿದರು.

ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ, ಗ್ರಾಮದೊಳಗಾಗಲಿ ಅಥವಾ ಗ್ರಾಮಕ್ಕೆ ಹೊಂದಿಕೊಂಡಂತಾಗಲಿ ದೇವಾಲಯಗಳಿದ್ದರೆ ಅಂತಹ ಸ್ಥಳಗಳಲ್ಲಿ ಒಂದು ಸಕಾರಾತ್ಮಕ ಪ್ರಭಾವಳಿ ಇರುತ್ತದೆ. ಭಾರತದ ಪ್ರತಿ ಮಣ್ಣಿನ ಕಣದಲ್ಲೂ ಅಧ್ಯಾತ್ಮದ ಶಕ್ತಿ ಅಡಗಿದೆ. ಇಂದಿನ ತಲೆಮಾರಿಗೆ ಅದನ್ನು ಪರಿಚಯಿಸಬೇಕಿದೆ ಎಂದರು.

ಕಳ್ಳಿಪಾಳ್ಯದ ಭಕ್ತಮುನೇಶ್ವರ ಸ್ವಾಮಿ ದೇವಾಲಯದ ಶ್ರೀ ರಂಗನಾಥನಂದ ಸ್ವಾಮೀಜಿ ಮಾತನಾಡಿ, ದೇವಾಲಯ ಕಟ್ಟಿದರಷ್ಟೆ ಸಾಲದು, ಅಲ್ಲಿ ನಿತ್ಯ ಪೂಜಾ ಕೈಂಕರ್‍ಯಗಳೂ ನಡೆಯಬೇಕು. ಮನೆಯ ಮಕ್ಕಳನ್ನು ದೇವಾಲಯಕ್ಕೆ ಕರೆತರಬೇಕು. ಮಕ್ಕಳೇ ದೇವರ ಅಸ್ತಿತ್ವದ ಪ್ರಶ್ನೆ ಹಾಕಿಕೊಂಡು, ದೇವಾಲಯದ ಮಹತ್ವಗಳಿಗೆ ಅವರೇ ಉತ್ತರ ಕಂಡುಕೊಂಡಾಗ ಸತ್ಯ ಸೂರ್‍ಯನಂತೆ ಕಂಗೊಳಿಸುತ್ತದೆ ಎಂದರು.

ಸರ್ಕಾರಿ ಉಚಿತ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಮಾಗಡಿ ನಿರ್ಮಾತೃ ಕೆಂಪೇಗೌಡರಿಗೆ ಇಂತಹ ಒಂದು ಮುನ್ನೋಟ ಇತ್ತು. ಹಾಗಾಗಿ ತಾಲೂಕಾದ್ಯಂತ ಮಠ ಮಂದಿರಗಳನ್ನು ಕಟ್ಟಿದರು. ಭಗವಂತನ ಅಸ್ತಿತ್ವ ಎಲ್ಲ ಕಡೆಗೂ ಇರುತ್ತದೆ. ಭಕ್ತ ಕನಕದಾಸನಿಗೆ ಕಿಂಡಿಯಲ್ಲಿ ದೇವರು ದರ್ಶನ ನೀಡಲಿಲ್ಲವೇ. ಬಸವಣ್ಣ ಹೇಳಿದಂತೆ ಕಾಯಕದಲ್ಲಿ ಕೈಲಾಸ ಕಾಣಲಿಲ್ಲವೇ? ಶುದ್ಧ ಮನಸಿನ ಭಕ್ತಿಯನ್ನಷ್ಟೆ ಭಗವಂತ ಒಪ್ಪುವುದು ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ. ತಾಪಂ ಮಾಜಿ ಅಧ್ಯಕ್ಷ ಸುರೇಶ್, ಮರೂರು ಮರೀಗೌಡ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ