ಓಬವ್ವ ಸಾಹಸ ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿ: ರೇಣುಕಾ ರಾಜ್ ಅಭಿಮತ

KannadaprabhaNewsNetwork | Published : Nov 11, 2024 11:51 PM

ಸಾರಾಂಶ

ಒನಕೆ ಓಬವ್ವ ನಮಗೆಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ. ಮಹಿಳೆಯರು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ನಾಡಿನ ಐಕ್ಯತೆಗೆ ಪಣತೊಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ವೀರ ವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ರೇಣುಕಾ ರಾಜ್ ಹೇಳಿದರು.

ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆಯು ಸೋಮವಾರ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಎದುರಾಳಿ ಸೈನಿಕರು ಕೋಟೆಯನ್ನು ಮುತ್ತಿದಾಗ ತನ್ನ ಮನೆಯಲ್ಲಿ ಆಹಾರ ಸಂಸ್ಕರಣೆಗೆ ಬಳಸುವಂತಹ ಒನಕೆಯನ್ನೇ ಆಯುಧವಾಗಿ ಬಳಸಿ, ನೂರಾರು ಸೈನಿಕರ ರುಂಡಗಳನ್ನು ಚೆಂಡಾಡಿ, ಕೋಟೆಯನ್ನು ರಕ್ಷಿಸಿ ಮಹಾಮಾತೆ ನಮ್ಮ ಓಬವ್ವ. ಇಂತಹವರ ಚರಿತ್ರೆಗಳು ನಾಡಿನಾಚೆಗೂ ಪಸರಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಅವರು ಹೇಳಿದರು.

ಮನೋರೋಗ ತಜ್ಞರಾದ ಡಾ. ರೇಖಾ ಮನಃಶಾಂತಿ ಮಾತನಾಡಿ, ಒನಕೆ ಓಬವ್ವ ನಮಗೆಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ. ಮಹಿಳೆಯರು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ನಾಡಿನ ಐಕ್ಯತೆಗೆ ಪಣತೊಡಬೇಕು ಎಂದರು.

ನಗರ ಪಾಲಿಕೆ ಮಾಜಿ ಸದಸ್ಯ ಪ್ರಮೀಳಾ ಭರತ್ ಮಾತನಾಡಿ, ಓರ್ವ ಕೋಟೆ ಕಾವಲುಗಾರನ ಹೆಂಡತಿಯಾಗಿ, ಕೋಟೆಗೆ ಆಪತ್ತು ಎದುರಾದಾಗ, ಸಮಯಪ್ರಜ್ಞೆಯಿಂದ ವೈರಿಗಳ ರುಂಡ ಚೆಂಡಾಡಿದ ಓಬವ್ವ ಎಲ್ಲರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೂಡಾ ಮಾಜಿ ಸದಸ್ಯ ನವೀನ್ ಕುಮಾರ್, ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಎಸ್. ಪ್ರಕಾಶ್ ಪ್ರಿಯಾದರ್ಶನ, ಪತ್ರಕರ್ತೆ ಸಹನಗೌಡ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಮುಖಂಡರಾದ ಚಕ್ರಪಾಣಿ, ಸಚಿಂದ್ರ, ವಿಘ್ನೇಶ್ವರ ಭಟ್, ಸುದರ್ಶನ್, ಶ್ರೀನಿವಾಸ್, ಚರಣ್, ರಾಮು, ನಾಗೇಶ್ ಯಾದವ್, ಸುಕನ್ಯಾ, ನಾಗಮಣಿ, ಮಹಾನ್ ಶ್ರೇಯಸ್ ಮೊದಲಾದವರು ಇದ್ದರು.

Share this article