ಪಾಂಡವಪುರ: ವಾಹನ ಚಲಾಯಿಸುವ ಪ್ರತಿಯೊಬ್ಬ ನಾಗರಿಕರೂ ರಸ್ತೆ ಸುರಕ್ಷತೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಪಟ್ಟಣದ ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಆರ್.ಮಹೇಶ್ ತಿಳಿಸಿದರು.
ಪ್ರತಿಯೊಬ್ಬ ಸವಾರರು ವಾಹನ ಚಾಲನೆ ವೇಳೆ ನಿಯಮ ಪಾಲನೆ ಮಾಡಬೇಕು. ಸಂಚಾರಿ ನಿಯಮ ಉಲ್ಲಂಘನೆ ಮಾಡಬಾರದು, ವಿಮೆ, ಎಫ್‌ಸಿ, ವಾಹನ ಚಲಾವಣೆಯ ಪರವಾನಗಿ ಹೊಂದಬೇಕು. ರಸ್ತೆಯ ತಿರುವುಗಳಲ್ಲಿ ಸೂಚನಾ ಫಲಕ ನೋಡಿ ಪಾಲಿಸಬೇಕು. ವಾಹನಗಳ ಸಮಯಕ್ಕೆ ತಕ್ಕಂತೆ ಪರಿಶೀಲನೆ, ಸರ್ವೀಸ್ ಮಾಡಿಸಿಕೊಂಡು ಕ್ರಮಬದ್ಧವಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವ ಸಮುದಾಯ ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್, ಕುಡಿದು, ಡ್ರಗ್ಸ್ ಸೇವನೆ ಮಾಡಿ ವಾಹನ ಚಲಾವಣೆ, ಹೆಲ್ಮೆಟ್ ಹಾಕದೆ ವಾಹನ ಸವಾರಿ ಮಾಡುವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಪೊಲೀಸ್ ಇಲಾಖೆ ಯಾವುದೇ ಪ್ರಕರಣವನ್ನು ದಾಖಲಿಸಿ ಕೋರ್ಟ್ ಮುಂದೆ ಹಾಜರು ಪಡಿಸಿಲ್ಲ. ಕೂಡಲೇ ಸಂಚಾರಿ ನಿಯಮ ಪಾಲಿಸದವರ ವಿರುದ್ಧ ಕ್ರಮತೆಗೆದುಕೊಳ್ಳುವ ಕೆಲಸ ಮಾಡಬೇಕು ಎಂದು ಸೂಚಿಸಿದರು.ಈ ವೇಳೆ ನಾಯಾಧೀಶರಾದ ಎನ್.ಬಾಬು, ಬಿ.ಪಾರ್ವತಮ್ಮ, ವಕೀಲ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಮೋಹನ್‌ಕುಮಾರ್ ಸೇರಿ ಹಲವು ವಕೀಲರು, ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.