ಕನ್ನಡಪ್ರಭ ವಾರ್ತೆ ಆಳಂದ
ತರಕಾರಿ ಮಾರುವ ಸ್ಥಳದಲ್ಲೇ ಕ್ಯಾಂಟಿನ್ ನಿರ್ಮಾಣದಿಂದಾಗಿ ಬಡ ವ್ಯಾಪಾರಿಗಳು ಬೀದಿಪಾಲಾಗುತ್ತಾರೆಂದು ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ ಕಾಮಗಾರಿಗೆ ನಡೆಸಲು ಬಿಡುವುದಿಲ್ಲ ಎಂದಾಗ, ಕಾಂಗ್ರೆಸ್ ಬೆಂಬಲಿತ ಪುರಸಭೆ ಸದಸ್ಯ ಈರಣ್ಣಾ ಹತ್ತರಕಿ ಮತ್ತು ಮಹೇಶ್ವರಿ ವಾಲಿ ಅವರ ನಡುವೆ ಏಕವಚನದಲ್ಲಿ ಮಾತಿನ ಚಕಮುಕಿ ನಡೆದು ಪರಿಸ್ತಿತಿ ವಿಕೋಪಕ್ಕೆ ತಿರುಗಿತ್ತು.
ಮುಖ್ಯಾಧಿಕಾರಿ ಸಂಗಮೇಶ ಪನ್ನಶೆಟ್ಟಿ ಬಡಜನರಿಗಾಗಿಯೇ ಕ್ಯಾಂಟಿನ ನಿರ್ಮಾಣ ಮಾಡಲಾಗುತ್ತಿದೆ ಎಂದಾಗ, ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ವಿರೋಧಿಸುತ್ತಿಲ್ಲ. ಸೂಕ್ತಸ್ಥಳದಲ್ಲಿ ನಿರ್ಮಿಸಬೇಕು. 10 ಜನರಿಗೆ ಊಟು ಕೊಡಲು ಹೋಗಿ ನೂರು ಜನ ವ್ಯಾಪಾರಿಗಳ ಹೊಟ್ಟೆ ಮೇಲೇಕೆ ಹೊಡೆಯುತ್ತಿರಂದು ಮಹೇಶ್ವರಿ ಆಕ್ಷೇಪಿಸಿದರು.ಕ್ಯಾಂಟಿನ ಬೇಕಾದಷ್ಟು ಸ್ಥಳವಿದ್ದು ಅಲ್ಲಿ ಕಟ್ಟಬೇಕು. ಇಲ್ಲಿ ಕಟ್ಟಲು ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿರುವ ಮಹೇಶ್ವರಿ ಮಂಗಳವಾರ ಬೆಂಬಲಿತ ವ್ಯಾಪಾರಿಗಳೊಂದಿಗೆ ಮಾರುಕಟ್ಟೆಯಲ್ಲೇ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿ ತಹಸೀಲ್ದಾರ್ ಗಮನ ಸೆಳೆದಿದ್ದಾರೆ.
ಇಂದಿರಾ ಕ್ಯಾಂಟಿನ ನಿರ್ಮಿಸುವ ಸ್ಥಳ ಪುರಸಭೆ ಮಾಲೀಕತ್ವವಿದೆ. ಹೀಗಾಗಿ ಯಾರಿಗೂ ತೊಂದರೆ ಆಗದಂತೆ, ಕ್ಯಾಂಟಿನ್ ನಿರ್ಮಿಸಲಾಗುತ್ತಿದೆ. ವ್ಯಾಪಾರಿಗಳು ಉಳಿದ ಸಾಕಷ್ಟು ಜಾಗದಲ್ಲಿ ಹೊಂದಾಣಿಕೆಯಾಗಿ ವ್ಯಾಪಾರ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಕ್ಯಾಂಟಿನ್ ನಿರ್ಮಾಣದಿಂದ ದಿನಕ್ಕೆ ಸಾವಿರ ಜನರಿಗೆ ಮೂರು ಹೊತ್ತಿನ ಊಟ ದೊರಕಲಿದೆ ಎಂದು ಪುರಸಬೆ ಇಓ ಸಂಗಮೇಶ ಹೇಳಿದ್ದಾರೆ.