ಭಟ್ಕಳ: ಇಲ್ಲಿನ ಪುರಸಭೆ ಅಭಿಯಂತರರು ಹಾಗೂ ಸಿಬ್ಬಂದಿಯನ್ನು ಬೇರೆ ಕಡೆ ನಿಯೋಜಿಸಿದ್ದರ ಬಗ್ಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಮರ್ಪಕ ಸಿಬ್ಬಂದಿ ಇಲ್ಲದಿದ್ದರೆ ಪುರಸಭೆಯಲ್ಲಿ ಕೆಲಸ ಆಗುವುದು ಹೇಗೆ ಎಂದು ಪ್ರಶ್ನಿಸಿದರು.
ಪುರಸಭೆಯಲ್ಲಿ ಇರುವುದು ಒಬ್ಬರೇ ಅಭಿಯಂತರರು. ಇಂತಹ ಪರಿಸ್ಥಿತಿಯಲ್ಲೂ ಅವರನ್ನು ವಾರದಲ್ಲಿ ನಾಲ್ಕು ದಿನ ಬೇರೆ ಕಡೆ ನಿಯೋಜಿಸಿದರೆ ಇಲ್ಲಿನ ಕಾಮಗಾರಿ ಗುಣಮಟ್ಟ ಹಾಗೂ ಆಗಬೇಕಾದ ಕೆಲಸಗಳನ್ನು ನಿರ್ವಹಿಸುವವರು ಯಾರು? ಪುರಸಭಾ ವ್ಯಾಪ್ತಿಯಲ್ಲಿ ಕೋಟ್ಯಂತರ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರರ ಶೇ. 20ಕ್ಕಿಂತ ಕಡಿಮೆ ದರ ಕೋಟ್ ಮಾಡಿ ಟೆಂಡರ್ ಪಡೆದು ಕಾಮಗಾರಿ ನಡಸುತ್ತಿದ್ದಾರೆ. ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ನಡೆಯುತ್ತಿದೆ ಎನ್ನುವುದನ್ನು ಪರೀಕ್ಷಿಸಲು ಪೂರ್ಣ ಪ್ರಮಾಣದಲ್ಲಿ ಅಭಿಯಂತರರಿಗೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಅವರನ್ನು ಬೇರೆ ಪುರಸಭೆಗೆ ನಿಯೋಜನೆ ಮಾಡದಂತೆ ಆಗ್ರಹಿಸಿದರು.ಪಟ್ಟಣದ ಬಂದರು ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಸುತ್ತಿರುವ ರಸ್ತೆ ಕಾಮಗಾರಿಯನ್ನು ಸರಿಯಾದ ವಿನ್ಯಾಸದಲ್ಲಿ ಮಾಡುತ್ತಿಲ್ಲ. ಚರಂಡಿ, ಪುಟ್‌ಪಾತ್ ಸೇರಿದಂತೆ ಎಲ್ಲವನ್ನೂ ಅಕ್ರಮಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಯಾರದೋ ಖಾಸಗಿ ವ್ಯಕ್ತಿಯ ಜಾಗ ಉಳಿಸಲು ಹೋಗಿ ರಸ್ತೆಯ ಅಗಲ ಕಡಿತ ಮಾಡಲಾಗುತ್ತಿದೆ. ಇದರ ಬಗ್ಗೆ ಪುರಸಭೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಫಾಸ್ಕಲ್ ಗೋಮ್ಸ್ ಹಾಗೂ ಸುರೇಶ ನಾಯ್ಕ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ವೆಂಕಟೇಶ ನಾವಡ ಅವರು, ಲೋಕೋಪಯೋಗಿ ಅಭಿಯಂತರರ ಜತೆ ಮುಂದಿನ ವಾರ ಸದಸ್ಯರ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ಶಿಥಿಲಾವಸ್ಥೆಯಲ್ಲಿದ್ದ ಪುರಸಭೆಯ ಮಾಲೀಕತ್ವದ ಎಲ್ಲ ಅಂಗಡಿ ಮಳಿಗೆಗಳನ್ನು ರಿಪೇರಿ ಮಾಡಿ ಏಕಕಾಲದಲ್ಲಿ ಹರಾಜು ಹಾಕುವಂತೆ ಸದಸ್ಯರು ಸೂಚಿಸಿದರು. ಚೌಥನಿಯಲ್ಲಿ ಹೊಸ ಮೀನು ಮಾರುಕಟ್ಟೆ ನಿರ್ಮಾಣ ಹಾಗೂ ಹಳೆಯ ಎಸಿ ಕಚೇರಿ ಹಿಂಭಾಗದಲ್ಲಿ ಈಜುಕೋಳ ಹಾಗೂ ಒಳ ಕ್ರೀಡಾಂಗಣ ನಿರ್ಮಿಸಲು ಪುರಸಭೆಯ ಪ್ರಭಾರೆ ಅಧ್ಯಕ್ಷ ಅಲ್ತಾಫ್ ಖರೂರಿ ಸಭೆಯ ಅನುಮೋದನೆ ಪಡೆದುಕೊಂಡರು. ಸ್ಥಾಯಿ ಸಮಿತಿ ಅಧ್ಯಕ್ಷ ಕೈಸರ್ ಮೊಹತೆಶ್ಯಾಂ, ಅಭಿಯಂತರ ಅರವಿಂದ್ ರಾವ್, ವ್ಯವಸ್ಥಾಪಕ ವೆಂಕಟೇಶ ನಾಯ್ಕ, ಆರೋಗ್ಯಾಧಿಕಾರಿ ಸುಜಿಯಾ ಸೋಮನ್ ಮುಂತಾದವರಿದ್ದರು.