ಕನ್ನಡ ಶಾಲೆಗಳ ಮುಚ್ಚುವುದಕ್ಕೆ ನಾಗರಿಕ ಸಮಾಜ ಅಷ್ಟಾಗಿ ಪ್ರತಿರೋಧ ವ್ಯಕ್ತಪಡಿಸುತ್ತಿಲ್ಲ. ನಾಗರಿಕರು ಒಗ್ಗೂಡಿ ಧ್ವನಿ ಎತ್ತಿದರೆ ಕನ್ನಡ ಶಾಲೆಗಳು ಉಳಿವು ಸಾಧ್ಯ. ಇಲ್ಲವಾದರೆ, ಕನ್ನಡ ಅಸ್ಮತೆಯೂ ನಶಿಸಲಿದೆ ಎಂದು ಡಾ. ಹೇಮಾ ಪಟ್ಟಣಶೆಟ್ಟು ಆತಂಕ ವ್ಯಕ್ತಪಡಿಸಿದರು.
ಧಾರವಾಡ:
ದೇಶದೆಲ್ಲಡೆ ಸರ್ಕಾರಿ ಶಾಲೆ ಮುಚ್ಚುವ ಪ್ರಕ್ರಿಯೆ ನಡೆದಿದೆ. ಈ ವಿಷಯದಲ್ಲಿ ಕರ್ನಾಟಕವೇ ಹೆಚ್ಚು ಧಾವಂತದಲ್ಲಿದೆ. ಶಿಕ್ಷಣವನ್ನು ಮಾರುಕಟ್ಟೆ ಸರಕಾಗಿಸುವ ಸರ್ಕಾರದ ನಡೆಗೆ ಸಾಹಿತಿ ಹಾಗೂ 18ನೇ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಡಾ. ಹೇಮಾ ಪಟ್ಟಣಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಭವನದಲ್ಲಿ ಸೋಮವಾರ ನಡೆದ ಧಾರವಾಡ ಜಿಲ್ಲಾ 18ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣದಲ್ಲಿ ಮಾತನಾಡಿದ ಅವರು, ಕನ್ನಡ ಶಾಲೆಗಳ ಮುಚ್ಚುವುದಕ್ಕೆ ನಾಗರಿಕ ಸಮಾಜ ಅಷ್ಟಾಗಿ ಪ್ರತಿರೋಧ ವ್ಯಕ್ತಪಡಿಸುತ್ತಿಲ್ಲ. ನಾಗರಿಕರು ಒಗ್ಗೂಡಿ ಧ್ವನಿ ಎತ್ತಿದರೆ ಕನ್ನಡ ಶಾಲೆಗಳು ಉಳಿವು ಸಾಧ್ಯ. ಇಲ್ಲವಾದರೆ, ಕನ್ನಡ ಅಸ್ಮತೆಯೂ ನಶಿಸಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಕನ್ನಡ ಶಾಲೆಗಳ ರಕ್ಷಣೆ ಮತ್ತು ಪೋಷಣೆ ಸರ್ಕಾರದ ಜವಾಬ್ದಾರಿ. ಆದರೆ, ಅವುಗಳನ್ನು ಮುಚ್ಚುತ್ತಿರುವ ಸರ್ಕಾರದ ಅರ್ಥಶಾಸ್ತ್ರ ಪ್ರಾಜ್ಞರು, ಚಿಂತಕರು ರಾಜಕೀಯ ಅರಿಯಬೇಕು. ಶಿಕ್ಷಣ ಉದ್ಯಮಿಗಳ ಕೈಸೇರುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಣ, ಉದ್ಯೋಗ ಮತ್ತು ಆಡಳಿತದಲ್ಲಿ ಕನ್ನಡ ಅನಿವಾರ್ಯ. ಈ ನಿಟ್ಟಿನಲ್ಲಿ ಸರ್ಕಾರವು ನೀತಿ-ನಿರೂಪಣೆ ರೂಪಿಸಬೇಕು. ಈ ಬಗ್ಗೆ ತಾತ್ವಿಕ ನಿಲುವು ಸ್ಪಷ್ಟಪಡಿಸಬೇಕು. ಕನ್ನಡವು ಹಲವು ಬಿಕ್ಕಟ್ಟಿನಿಂದ ಪಾರಾಗಲು ಕಾರ್ಯಸೂಚಿ ಸಿದ್ಧಪಡಿಸಲು ಹೇಳಿದರು.
ಕನ್ನಡ ಭಾಷೆಯ ಕಲಿಕೆ, ಶಿಕ್ಷಣದ ಮಾಧ್ಯಮ, ಉದ್ಯೋಗಕ್ಕೆ ಕನ್ನಡವೇ ಮುಖ್ಯ ಎಂಬ ಮಾನದಂಡ ತರಬೇಕು. ಬಹುರಾಷ್ಟ್ರೀಯ ಕಂಪನಿಗಳಲ್ಲೂ ಕನ್ನಡಿಗರಿಗೆ ಆದ್ಯತೆ ನೀಡಿದಾಗ ಮಾತ್ರವೇ ಕನ್ನಡ ಭಾಷೆಗೆ ಉಳಿಗಾಲವಿದೆ ಎಂದ ಅವರು, ತಂತ್ರಜ್ಞಾನ ಮತ್ತು ಮೊಬೈಲ್‌ನಲ್ಲೂ ಕನ್ನಡ ಬಳಕೆಗೆ ಹೆಚ್ಚಿನ ಅನುವು ಮಾಡಿಕೊಟ್ಟಿದೆ. ಕನ್ನಡ ನೋಡುವ-ಕೇಳುವು ಅವಕಾಶವೂ ಹೆಚ್ಚಿವೆ. ಇದೀಗ ಎಐ ಬಳಕೆಯು ಮನುಕುಲದ ಒಳಿತಿಗೆ ಒಂದು ದಾರಿ ಆಗಬಲ್ಲದೇ? ಎಂಬ ಪ್ರಶ್ನೆ ಉದ್ಭವಿಸಿದೆ ಎಂದರು.
ಶಿಕ್ಷಣ, ಮಾರುಕಟ್ಟಿ, ವಿವಿಧ ವಸ್ತು ತಯಾರಿಕೆಯಲ್ಲಿ ಎಐ ಬಳಕೆ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸಿದೆ. ಹೀಗಾಗಿ ನಮ್ಮ ಭಾಷೆಯ ಭವಿಷ್ಯ ಹಾಗೂ ಸಾಹಿತ್ಯ ಉಳಿವಿನ ಕುರಿತು ಹೆಚ್ಚಿನ ಆಸ್ಥೆ ವಹಿಸುವುದು ಕೂಡ ಅಗತ್ಯವಿದೆ ಎಂದು ಹೇಳಿದರು.
ಪ್ರತಿಯೊಬ್ಬರು ಕನ್ನಡದಲ್ಲಿ ರುಜು ಹಾಕಬೇಕು. ಈ ಮೂಲಕ ಕನ್ನಡದ ಅಸ್ಮಿತೆಯ ಉಳಿಸಬೇಕು. ಅಕ್ಷರ ಅರಿವು ನೀಡಿದರೆ, ಸಾಹಿತ್ಯ ಬದುಕಿನ ದಾರಿಯನ್ನು ತೋರಿಸುತ್ತದೆ. ನಾವು ಅಕ್ಷರಸ್ಥರಾಗುವುದರ ಜೊತೆ ಸಾಹಿತ್ಯಾಸಕ್ತರಾಗಬೇಕಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.