ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗುತ್ತಿದೆ. ಹೊನ್ನಾಳಿಯಲ್ಲಿ ಈಗಾಗಲೇ ತುಂಗಭದ್ರಾ ನದಿ ನೀರಿನಮಟ್ಟ ಯಾವುದೇ ಸಮಯದಲ್ಲಿ ಅಪಾಯದ ಮಟ್ಟ ತಲುಪಬಹುದು. ಜೊತೆಗೆ ಆಸ್ತಿಗಳಿಗೆ ಹಾನಿಯಾಗುವ ಸಂಭವವಿದೆ. ಕಂದಾಯ, ಪುರಸಭೆ, ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿರಬೇಕು. ನಿರಂತರ ಪರಿಸ್ಥಿತಿ ಅವಲೋಕಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ತಾಕೀತು ಮಾಡಿದರು.ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಪ್ರಕೃತಿ ವಿಕೋಪ ಹಾನಿ ಅಂದರೆ ಮನೆ, ಆಸ್ತಿ, ಬೆಳೆಗಳಿಗೆ ನಷ್ಟ ಸಂಭವಿಸಿದಲ್ಲಿ ಕೂಡಲೇ ಸ್ಥಳಗಳಿಗೆ ಭೇಟಿ ನೀಡಿ ನಿಖರ ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದರು.
24 ಪಕ್ಕಾ ಮನೆಗಳಿಗೆ ಹಾನಿ:ಹೊನ್ನಾಳಿ ತಾಲೂಕಿನಲ್ಲಿ 9, ನ್ಯಾಮತಿ ತಾಲೂಕಿನಲ್ಲಿ 15 ಪಕ್ಕಾ ಮನೆಗಳಿಗೆ ಹಾನಿಯಾಗಿದೆ. ಇವುಗಳ ಅಂದಾಜು ನಷ್ಟ ಇನ್ನೂ ನಿರ್ಧರಿಸಿಲ್ಲ. ಸರ್ಕಾರದಿಂದ ಪರಿಹಾರ ನೀಡುವ ಕುರಿತು ಯಾವುದೇ ಗೈಡ್‍ಲೈನ್ ಇನ್ನೂ ಬಂದಿಲ್ಲ. ಗೈಡ್‍ಲೈನ್ ಆಧರಿಸಿ ಪರಿಹಾರ ನೀಡಲಾಗುವುದು. ಹೊನ್ನಾಳಿ ತಾಲೂಕಿನಲ್ಲಿ 2 ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳದಲ್ಲಿ ನೀರು ನಿಂತು ಬೆಳೆ ನಾಶವಾಗಿದೆ. ನ್ಯಾಮತಿ ತಾಲೂಕಿನಲ್ಲಿ 35 ಗುಂಟೆ ಪ್ರದೇಶದಲ್ಲಿನ ಬಾಳೆ ಬೆಳೆ ನಾಶವಾಗಿದೆ. ತಾಲೂಕಿನಲ್ಲಿ ಯಾವುದೇ ಜನ-ಜಾನುವಾರುಗಳ ಪ್ರಾಣಹಾನಿ ಸಂಭವಿಸಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.
ಮಾನವೀಯತೆ ತೋರಬೇಕು:ಅತಿವೃಷ್ಠಿಯಿಂದ ಯಾವ ಮನೆಗಳು ಬಹುತೇಕ ಪೂರ್ಣ ಪ್ರಮಾಣದಲ್ಲಿ ಹಾನಿ ಆಗಿರುವುದಿಲ್ಲ. ಆದರೆ ಶೇ.40ಕ್ಕಿಂತ ಹೆಚ್ಚು ಮನೆಹಾನಿ ಸಂಭವಿಸಿದ್ದರೆ ಅಂತಹ ಮನೆಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಮಾನವೀಯತೆ ದೃಷ್ಠಿಯಿಂದ ಪೂರ್ಣಹಾನಿ ಎಂದು ಪರಿಗಣಿಸಬೇಕು. ಏಕೆಂದರೆ ನಾವು ಕೊಡುವ ಪರಿಹಾರದ ಮೊತ್ತದಲ್ಲಿ ಮನೆ ನಿರ್ಮಾಣ ಇರಲಿ, ದುರಸ್ತಿ ಮಾಡಿಸಲೂ ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಅಧಿಕಾರಿಗಳು ಸ್ಪಂದಿಸಬೇಕು ಎಂದರು.
ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಭರ್ತಿ:ಅವಳಿ ತಾಲೂಕಿನಲ್ಲಿ ಒಟ್ಟು 38 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳಿವೆ. ಅವುಗಳ ಪೈಕಿ ಕೇವಲ 30 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈ 30 ಜನರ ಪೈಕಿ 6 ಜನ ತಾಲೂಕು ಕಚೇರಿಯಲ್ಲಿದ್ದು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮ ಲೆಕ್ಕಾಧಿಕಾರಿಗಳ ಕೊರತೆ ಇದೆ. ಹುದ್ದೆಗಳಿಗೆ ನೇಮಕಾತಿ ಆಗಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ, ಅಗತ್ಯ ಹುದ್ದೆಗಳ ಭರ್ತಿ ಬಗ್ಗೆ ಕ್ರಮ ವಹಿಸಲಾಗವುದು ಎಂದರು.
ತಾಲೂಕು ಕಚೇರಿ ಸಭಾಂಗಣ ಮಳೆಯಿಂದ ಸೋರಿಕೆ ಆಗುತ್ತಿರುವುದನ್ನು ಕಂಡ ಶಾಸಕರು ತಹಸೀಲ್ದಾರ್ ಅವರಿಗೆ, ಎಂಜಿನಿಯರ್‌ಗಳನ್ನು ಕರೆಸಿ ಎಸ್ಟೀಮೇಟ್ ಮಾಡಿಸಿ, ದುರಸ್ತಿಗೊಳಿಸಲು ಸೂಚನೆ ನೀಡಿದರು. ಅದೇ ರೀತಿ ತಾಲೂಕಿನಲ್ಲಿ ಕೆಲವೊಂದು ಶಾಲೆ ಕಟ್ಟಡದ ಮೇಲ್ಚಾವಣೆಗಳು ಸೋರಿಕೆ ಆಗುತ್ತಿವೆ. ಅವುಗಳನ್ನೂ ಪರಿಶೀಲಿಸಿ ದುರಸ್ತಿ ಮಾಡಿಸಲು ಶಿಕ್ಷಣ ಇಲಾಖೆ ಸಂಬಂಧಪಟ್ಟವರು ಮುಂದಾಗಬೇಕು ಎಂದು ಸೂಚನೆ ನೀಡಿದರು.ಬಾಲರಾಜ್ ಘಾಟ್‌ಗೆ ಭೇಟಿ:
ತುಂಗಭದ್ರಾ ನದಿ ನೀರಿನಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಯಾವ ಕ್ಷಣದಲ್ಲಾದರೂ ನದಿ ನೀರು ಅಪಾಯದ ಮಟ್ಟವನ್ನು ಮೀರಬಹುದು. ಆದ್ದರಿಂದ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿಯೇ ಇರಬೇಕು. ಅಗತ್ಯಬಿದ್ದರೆ ಆರೈಕೆ ಕೇಂದ್ರವನ್ನು ತೆರೆಯಬೇಕು. ಅನಧಿಕೃತ ಮನೆಗಳಲ್ಲಿ ವಾಸ ಮಾಡುತ್ತಿದ್ದರೆ ಅಂಥವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡವಂತೆ ಶಾಸಕರು ಸೂಚನೆ ನೀಡಿದರು.ಈ ಸಂದರ್ಭ ಉಪವಿಭಾಗಾಧಿಕಾರಿ ವಿ.ಅಭಿಷೇಕ್, ತಹಸೀಲ್ದಾರ್ ಪಟ್ಟರಾಜಗೌಡ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ತಾಪಂ ಇಒ ರಾಘವೇಂದ್ರ, ಗ್ರೇಡ್-2 ತಹಸೀಲ್ದಾರ್ ಸುರೇಶ್ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.
- - -ಬಾಕ್ಸ್
* 28 ಕುಟುಂಬಗಳಿಗೆ ಅಂಬೇಡ್ಕರ್ ಭವನದಲ್ಲಿ ವ್ಯವಸ್ಥೆಉಪವಿಭಾಗಾಧಿಕಾರಿ ಅಭಿಷೇಕ್ ಮಾತನಾಡಿ, ಅತಿವೃಷ್ಠಿ ಪರಿಸ್ಥಿತಿ ನಿಭಾಯಿಸಲು ಅವಳಿ ತಾಲೂಕು ಆಡಳಿತಗಳು ಸನ್ನದ್ಧವಾಗಿವೆ. ಹೊನ್ನಾಳಿಯಲ್ಲಿ ನೆರೆಪೀಡಿತ ಬಾಲರಾಜ್ ಘಾಟ್ ಮತ್ತು ಬಂಬೂ ಬಜಾರ್ ಪ್ರದೇಶಗಳಲ್ಲಿ ವಾಸವಿದ್ದ 28 ಕುಟುಂಬಗಳ 125 ಜನರಿಗಾಗಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ವ್ವವಸ್ಥೆ ಮಾಡಲಾಗಿದೆ. ಸಾಸ್ವೇಹಳ್ಳಿಯಲ್ಲಿ ಕೂಡ ಒಂದು ಆರೈಕೆ ಕೇಂದ್ರ ತೆರೆಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
- - - ಕೋಟ್ ಹೊನ್ನಾಳಿ ತಾಲೂಕಿನಲ್ಲಿ ಅತಿವೃಷ್ಠಿ ಹಿನ್ನೆಲೆ ಜಿಲ್ಲಾಧಿಕಾರಿ ಅವರು ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಆದ್ದರಿಂದ ಎಲ್ಲ ಅಧಿಕಾರಿಗಳು ಹಾಜರಿದ್ದು ಅಂಕಿಅಂಶ ಸಹಿತ ಮಾಹಿತಿ ನೀಡಬೇಕು- ಡಿ.ಜಿ.ಶಾಂತನಗೌಡ, ಶಾಸಕ, ಹೊನ್ನಾಳಿ ಕ್ಷೇತ್ರ
- - - -20ಎಚ್.ಎಲ್.ಐ1ಃ: ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿಗಳಲ್ಲಿ ಅತಿವೃಷ್ಠಿ ಪರಿಸ್ಥಿತಿ ನಿಭಾಯಿಸಲು ಶನಿವಾರ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ತಾಲೂಕು ಕಚೇರಿ ಸಭಾಂಗಣದಲ್ಲಿ ಅವಳಿ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದರು.-20ಎಚ್.ಎಲ್.ಐ1ಎ: ನೆರೆಪೀಡಿತ ಹೊನ್ನಾಳಿ ಬಾಲರಾಜ್ ಘಾಟ್ ಪ್ರದೇಶಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಖುದ್ದು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.