ಯಕ್ಷಗಾನಕ್ಕೆ ಅಡ್ಡಿ, ಹಿಂದೂ ಭಾವನೆಗೆ ಧಕ್ಕೆ: ಯಶ್ಪಾಲ್‌

KannadaprabhaNewsNetwork |  
Published : Jan 18, 2025, 12:47 AM IST
ಯಶಪಾಲ್‌ | Kannada Prabha

ಸಾರಾಂಶ

ಕಾರ್ಕಳದಲ್ಲಿ ಪೋಲಿಸ್ ಇಲಾಖೆ ಯಕ್ಷಗಾನ ಪ್ರದರ್ಶನಕ್ಕೆ ತಡೆ ಒಡ್ಡುವ ಮೂಲಕ ಕರಾವಳಿ ಜಿಲ್ಲೆಯ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಹಿಂದೂಗಳ ಧಾರ್ಮಿಕ ಭಾವನೆ, ಸಂಸ್ಕೃತಿ ಆಚರಣೆಗೆ ನಿರಂತರ ಧಕ್ಕೆ ತರುವ ಕಾರ್ಯಕ್ಕೆ ಮುಂದಾಗಿದೆ. ಇದರ ಮುಂದುವರಿದ ಭಾಗವಾಗಿ ಕಾರ್ಕಳದಲ್ಲಿ ಪೋಲಿಸ್ ಇಲಾಖೆ ಯಕ್ಷಗಾನ ಪ್ರದರ್ಶನಕ್ಕೆ ತಡೆ ಒಡ್ಡುವ ಮೂಲಕ ಕರಾವಳಿ ಜಿಲ್ಲೆಯ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಾವಳಿಯ ಗಂಡು ಕಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯಕ್ಷಗಾನ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿಯೂ ನಡೆಯುತ್ತಿತ್ತು. ಯಕ್ಷಗಾನ ಕಲೆಯ ಪ್ರದರ್ಶನಕ್ಕೆ ಹಲವು ಕಾನೂನುಗಳ ನೆಪವೊಡ್ಡಿ ತಡೆ ಮಾಡಿ ಮತೀಯ ಶಕ್ತಿಗಳ ಓಲೈಕೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಅವರು ದೂರಿದ್ದಾರೆ.

ಯಕ್ಷಗಾನ, ನಾಗಮಂಡಲ, ದೈವಾರಾಧನೆಯ ಭಾಗವಾಗಿ ಸಾಂಪ್ರದಾಯಿಕ ಕೋಳಿ ಅಂಕಗಳು ತುಳುನಾಡಿನ ಸಂಸ್ಕೃತಿಯ ಭಾಗವಾಗಿದ್ದರೂ ಪೊಲೀಸ್ ಇಲಾಖೆ ರಾಜ್ಯ ಸರ್ಕಾರದ ಕೈಗೊಂಬೆಯಾಗಿ ಅನುಮತಿ ನೀಡದೆ ಪರೋಕ್ಷವಾಗಿ ಹತ್ತಿಕ್ಕಲು ಸಿದ್ದರಾಮಯ್ಯ ಸರ್ಕಾರ ಯತ್ನಿಸುತ್ತಿದೆ. ರಾಜ್ಯ ಸರ್ಕಾರ ಒಂದು ಕಡೆ ಯಕ್ಷಗಾನ ಆಕಾಡೆಮಿ ಸ್ಥಾಪಿಸಿ ಯಕ್ಷಗಾನ ಉಳಿವಿಗೆ ಕೊಡುಗೆ ನೀಡುವಂತೆ ಬಿಂಬಿಸಿ, ಇನ್ನೊಂದು ಕಡೆ ಯಕ್ಷಗಾನ ಪ್ರದರ್ಶನಕ್ಕೆ ತಡೆ ಒಡ್ಡುವ ಮೂಲಕ ಸರ್ಕಾರದ ದ್ವಂದ್ವ ನೀತಿಯನ್ನು ಜನತೆಯ ಮುಂದೆ ಪ್ರದರ್ಶಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಲವಾರು ಭಕ್ತರು ತಮ್ಮ ಹರಕೆ ಸೇವೆಗಾಗಿ ಹಲವು ವರ್ಷಗಳ ಕಾಲ ಕಾದು ಆಯೋಜಿಸಿರುವ ವಿವಿಧ ಮೇಳಗಳ ಯಕ್ಷಗಾನ ಪ್ರದರ್ಶನಕ್ಕೆ ಸರ್ಕಾರ ತೊಂದರೆ ನೀಡುತ್ತಿರುವುದು ಅಕ್ಷಮ್ಯವಾಗಿದ್ದು ಸರ್ಕಾರ ಕೂಡಲೇ ಕರಾವಳಿ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಮುಕ್ತ ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ.

ಗೋವು, ಹಿಂದೂಗಳಿಗೆ ರಕ್ಷಣೆ ಇಲ್ಲ:

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಮತೀಯ ಶಕ್ತಿಗಳು ಹಾಡಹಗಲೇ ರಾಜಾರೋಷವಾಗಿ ಹಿಂದೂ ಸಮಾಜ ತಾಯಿಯ ಸ್ಥಾನದಲ್ಲಿ ಗೌರವಿಸುವ ಪೂಜ್ಯನೀಯ ಗೋ ಮಾತೆಯ ಕೆಚ್ಚಲು ಕೊಯ್ಯುವ ಕೆಲಸಕ್ಕೆ ಮುಂದಾಗಿದ್ದಾರೆ. ಅಮಾನುಷ ಕೃತ್ಯ ಎಸಗಿದ ಮತಾಂಧನಿಗೆ ಮಾನಸಿಕ ಅಸ್ವಸ್ಥನೆಂದು ಬಿಂಬಿಸಿ ರಕ್ಷಿಸುವ ಕೆಲಸಕ್ಕೆ ಖುದ್ದು ರಾಜ್ಯ ಸರ್ಕಾರವೇ ಮುಂದಾಗಿರುವುದು ವಿಪರ್ಯಾಸ. ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಾ, ರಾಷ್ಟ್ರೀಯವಾದಿ ಚಿಂತನೆಯ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು ರಾಜ್ಯದ ಜನತೆ ಶೀಘ್ರದಲ್ಲೇ ಸರ್ಕಾರಕ್ಕೆ ದಿಟ್ಟ ಉತ್ತರ ನೀಡಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರು ದೇವಸ್ಥಾನಕ್ಕೆ ಡಿಸಿ ಭೇಟಿ
ವಾಕ್, ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಯೋಜನೆ ಮಾದರಿ