ಹೂವಿನಹಡಗಲಿ: ಗಣೇಶ ವಿಸರ್ಜನೆ ಮೆರವಣಿಗೆಗೆ ಮುಸ್ಲಿಂ ಮಹಿಳೆಯರು, ಯುವಕರು ಅಡ್ಡಿಪಡಿಸಿದ್ದಾರೆಂಬ ಕಾರಣಕ್ಕಾಗಿ ಗಣೇಶ ಮೂರ್ತಿ ಮರು ಪ್ರತಿಷ್ಠಾಪಿಸಿದ ಘಟನೆಗೆ ಹೂವಿನಹಡಗಲಿ ಕೊರವರ ಓಣಿ ಸಾಕ್ಷಿಯಾಗಿ ನಿಂತಿದೆ.
ಭಾನುವಾರ ಬೆಳಗಿನಿಂದ ಪಟ್ಟಣದ ಗೋಣಿ ಬಸವೇಶ್ವರ ದೇಗುಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಮುಖಂಡರು, ಯುವಕರು ಸೇರಿ ಶಾಸಕ ಕೃಷ್ಣನಾಯ್ಕ, ಅಭಿನವ ಹಾಲವೀರಪ್ಪಜ್ಜ ನೇತೃತ್ವದಲ್ಲಿ ಸಭೆ ಮಾಡಿ ಕೊರವರ ಓಣಿಗೆ ಸಾವಿರಾರು ಸಂಖ್ಯೆಯ ಹಿಂದೂ ಯುವಕರು ಕೇಸರಿ ಶಾಲು ಹಾಕಿಕೊಂಡು ಗೋಣಿ ಬಸವೇಶ್ವರ ದೇಗುಲದಿಂದ ಇಸ್ಲಾಂಪೇಟೆ ಮೂಲಕ ಪಾದಯಾತ್ರೆಯೊಂದಿಗೆ ತೆರಳಿ ಗಣೇಶ ಮೂರ್ತಿ ಮರು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಶಾಸಕ ಕೃಷ್ಣನಾಯ್ಕ ಮಾತನಾಡಿ, ಕೊರವರ ಓಣಿಯ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆಲ ಕಿಡಿಗೇಡಿಗಳು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರು. ಇದಕ್ಕೆ ಉತ್ತರ ಕೇವಲ ಹೂವಿನಹಡಗಲಿ ಅಷ್ಟೇ ಅಲ್ಲ, ಭಾರತ ದೇಶದಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆ ತಂದರೆ ಏನು ಆಗಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೇ, ಯಾರೂ ಕೂಡಾ ಇಂತಹ ಹರಸಾಹಸ ಮಾಡಲು ಮುಂದಾಗಬಾರದು ಎಂದರು.ಇಂದು ಕೊರವರ ಓಣಿಯಲ್ಲಿ ಗಣೇಶ ಮೂರ್ತಿ ಮರು ಪ್ರತಿಷ್ಠಾಪನೆ ಮಾಡಿದ್ದೇವೆ, ಸೆ.28 ರಂದು ಹಿಂದೂ ಮಹಾಗಣಪತಿ ಜತೆಗೆ ವಿರ್ಸಜನೆ ಮೆರವಣಿಗೆ ಮಾಡುತ್ತೇವೆ, ಶನಿವಾರ ನಡೆದ ಜಿಲ್ಲಾಡಳಿತದ ಶಾಂತಿ ಸಭೆಯಲ್ಲಿ ನಮ್ಮ ಬೇಡಿಕೆ ಇದೇ ಆಗಿತ್ತು. ಸಮಾಜದಲ್ಲಿ ಯಾವುದೇ ಅನಾಹುತ ಆಗಬಾರದು, ಕ್ಷೇತ್ರಕ್ಕೆ ಯಾವುದೇ ಕಾರಣಕ್ಕೂ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳುತ್ತೇವೆ. ಗಣೇಶ ಪ್ರತಿಷ್ಠಾಪನೆ ಮಾಡಿರುವ ಜಾಗದಿಂದ ಇಸ್ಲಾಂಪೇಟೆ ಮೂಲಕ ಮುಖ್ಯ ರಸ್ತೆಗೆ ವಿಸರ್ಜನೆ ಮೆರವಣಿಗೆಗೆ ನಿರ್ಧರಿಸಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಸಂಜೀವ ರಡ್ಡಿ, ಉಪಾಧ್ಯಕ್ಷ ಹಣ್ಣಿ ಶಶಿಧರ, ಈಟಿ ಲಿಂಗರಾಜ, ಮಂಡಲ ಅಧ್ಯಕ್ಷ ಪೂಜಾರ ಮಲ್ಲಿಕಾರ್ಜುನ, ಕೆ.ಪುತ್ರೇಶ್, ವಿಲ್ಸನ್ ಸ್ವಾಮಿ ಸೇರಿದಂತೆ ಸಾವಿರಾರು ಸಂಖ್ಯೆಯ ಹಿಂದೂ ಯುವಕರು ಉಪಸ್ಥಿತರಿದ್ದರು.
ಗಣೇಶ ಮರು ಪ್ರತಿಷ್ಠಾಪನೆ ಹಿನ್ನೆಲೆ ಕೊರವರ ಓಣಿಯ ಮಹಿಳೆಯರು ರಸ್ತೆ ಸ್ವಚ್ಛ ಮಾಡಿ ರಂಗೋಲಿ ಹಾಕಿದ್ದರು. ಬೃಹತ್ ಸಂಖ್ಯೆಯ ಹಿಂದೂ ಕಾರ್ಯಕರ್ತರು ಗಣೇಶ ಭಾವಚಿತ್ರ ಹಿಡಿದು ಮುಸ್ಲಿಂ ಏರಿಯಾ ಹಾಗೂ ಗೌಸಿಯಾ ಮಸೀದಿ ಮಾರ್ಗವಾಗಿ ಬೃಹತ್ ಪಾದಯಾತ್ರೆ ಜರುಗಿತು.