ಮಡಿಕೇರಿ : ಮುಂದಿನ ದಿನಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ಆಚರಣೆಗಳು ಬರಲಿದ್ದು, ಈ ಸಂದರ್ಭದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಹಿಸಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ನೇತೃತ್ವದಲ್ಲಿ ಸಭೆ ನಡೆಯಿತು.
ಈಗಾಗಲೇ ಏಕಗವಾಕ್ಷಿ ಸಮಿತಿ ರಚಿಸಲಾಗಿದ್ದು, ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಂಬಂಧ ಸೆಪ್ಟೆಂಬರ್ 13 ರೊಳಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ಏಕಗವಾಕ್ಷಿ ಸಮಿತಿಯಲ್ಲಿ ಆಯಾಯ ತಾಲ್ಲೂಕಿನ ತಹಸೀಲ್ದಾರರು ಅಧ್ಯಕ್ಷರಾಗಿ, ಪರಿಸರ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ತಾಲೂಕಿನ ಪೊಲೀಸ್ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಸೆಸ್ಕ್ ಇಲಾಖೆಯ ಎಇಇಗಳು, ತಾ.ಪಂ.ಇಒ ಗಳು ಮತ್ತು ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು/ ಮುಖ್ಯಾಧಿಕಾರಿಗಳು ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಡಿಜೆಯನ್ನು ಹೆಚ್ಚು ಬಳಸುತ್ತಿದ್ದು, ಈ ಸಂದರ್ಭ ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಸರ್ಕಾರದ ನಿಯಮಗಳ ಬಗ್ಗೆ ಮನವರಿಕೆ ಮಾಡಬೇಕು ಎಂದು ಸಲಹೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಮಾತನಾಡಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಂಬಂಧ ಏಕಗವಾಕ್ಷಿ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯ ಎಂದರು. ಗೌರಿ ಗಣೇಶ ವಿಸರ್ಜನೆಯ ಮೆರವಣಿಗೆ ಸಂದರ್ಭದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸಿಸಿಟಿವಿ ಕಡ್ಡಾಯ ಅಳವಡಿಸಬೇಕು. ಮೆರವಣಿಗೆ ಸಾಗುವ ಪ್ರದೇಶದಲ್ಲಿ ಹೆಚ್ಚಿನ ಬೆಳಕು ವ್ಯವಸ್ಥೆ ಇರಬೇಕು. ವಿಸರ್ಜನೆ ಸಂದರ್ಭದಲ್ಲಿ ಜೀವರಕ್ಷಕ ಜಾಕೆಟ್ ಬಳಸಬೇಕು. ಹೀಗೆ ಏಕಗವಾಕ್ಷಿ ಸಮಿತಿಯು ಈ ಎಲ್ಲಾ ಬಗ್ಗೆ ಗಮನಿಸಿ ಮೇಲುಸ್ತುವಾರಿ ವಹಿಸಬೇಕು ಎಂದು ನಿರ್ದೇಶನ ನೀಡಿದರು. ಜಿಲ್ಲಾ ಪರಿಸರ ಅಧಿಕಾರಿ ಕೀರ್ತಿ ಕುಮಾರ್ ಮಾತನಾಡಿ, ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣದ ವಿಗ್ರಹಗಳನ್ನು ಬಳಸದೆ, ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಪೊಲೀಸ್ ಅಧಿಕಾರಿಗಳಾದ ಸೂರಜ್ ಮತ್ತು ಮೇದಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಟಿ.ಸತೀಶ್, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ, ತಹಶೀಲ್ದಾರರಾದ ಪ್ರವೀಣ್ ಕುಮಾರ್, ಶ್ರೀಧರ, ಕೃಷ್ಣಮೂರ್ತಿ, ಸಂಜನಾ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಕೃಷ್ಣ ಪ್ರಸಾದ್, ನಾಚಪ್ಪ, ಗೋಪಿ, ಗಿರೀಶ್, ತಾ.ಪಂ.ಇಒಗಳಾದ ಶೇಖರ್, ಅಪ್ಪಣ್ಣ, ರಾಜೇಶ್, ಇತರರು ಇದ್ದರು.