ಒನಕೆ ಓಬವ್ವ ಸಾಧನೆ ಪತಿಭಕ್ತಿ, ದೇಶಭಕ್ತಿಗೆ ಸಾಕ್ಷಿ

KannadaprabhaNewsNetwork |  
Published : Nov 13, 2023, 01:16 AM ISTUpdated : Nov 13, 2023, 01:17 AM IST
ಪೋಟೋ: 12ಎಸ್ಎಂಜಿಕೆಪಿ05ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ತಹಶೀಲ್ದಾರ್ ನಾಗರಾಜ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಓಬವ್ವ, ಪ್ರಾಮಾಣಿಕತೆ, ಶಿಸ್ತು, ದಕ್ಷತೆ, ಪ್ರೀತಿ-ವಿಶ್ವಾಸಕ್ಕೆ ಹೆಸರುವಾಸಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಚಿತ್ರದುರ್ಗ ಕೋಟೆ ಮತ್ತು ಜನರನ್ನು ಬಹು ಅಪಾಯದಿಂದ ಕಾಪಾಡಿ, ಕರ್ತವ್ಯದ ಮೂಲಕವೇ ಜೀವ-ಜೀವನದ ಶಕ್ತಿಯನ್ನು ತಿಳಿಸಿರುವವಳು ವೀರವನಿತೆ ಓಬವ್ವ ಎಂದು ಕುವೆಂಪು ವಿಶ್ವವಿದ್ಯಾಲಯ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಛಲವಾದಿ ಮಹಾಸಭಾದ ಸಹಯೋಗದಲ್ಲಿ ಆಯೋಜಿಸಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲೂಕಿನ ಛಲವಾದಿ ಚಿನ್ನಪ್ಪನ ಮಗಳಾದ ಓಬವ್ವ, ಪ್ರಾಮಾಣಿಕತೆ, ಶಿಸ್ತು, ದಕ್ಷತೆ, ಪ್ರೀತಿ-ವಿಶ್ವಾಸಕ್ಕೆ ಹೆಸರುವಾಸಿ ಆಗಿದ್ದಳು. ಪತಿಭಕ್ತಿ ಮತ್ತು ದೇಶಭಕ್ತಿಯನ್ನು ಲೋಕಕ್ಕೆ ಪರಿಚಯಿಸಿದ ದಿಟ್ಟ ಮಹಿಳೆ. ಹೈದರಾಲಿಯು 1766 ರಲ್ಲಿ ಚಿತ್ರದುರ್ಗದ ಕೋಟೆಯ ಮೇಲೆ ಆಕ್ರಮಣ ಮಾಡುತ್ತಿರುವುದನ್ನು ತಿಳಿದ ಓಬವ್ವ, ಒನಕೆಯನ್ನು ಅಸ್ತ್ರವಾಗಿಟ್ಟುಕೊಂಡು ರಣಚಂಡಿಯಂತೆ ಶತ್ರುಸೈನಿಕರನ್ನು ಕೊಂದು ಹಾಕುತ್ತಾಳೆ. ಅನಂತರ ಆತನ ಗಂಡ ಹೆಣದ ರಾಶಿಗಳನ್ನು ಮತ್ತು ಹರಿಯುತ್ತಿದ್ದ ರಕ್ತದ ಕಾಲುವೆಯನ್ನು ಕಂಡು ಆಶ್ಚರ್ಯಚಕಿತನಾಗಿ ರಣಕಹಳೆ ಊದುತ್ತಾನೆ. ಎಚ್ಚರಿಕೆ ದನಿಯನ್ನು ಕೇಳಿದ ಮದಕರಿ ನಾಯಕನ ಸೈನಿಕರು ಶತ್ರು ಸೈನಿಕರೊಂದಿಗೆ ಯುದ್ಧಕ್ಕೆ ಸಿದ್ಧರಾಗುತ್ತಾರೆ. ಅಂದಿನಿಂದ ಓಬವ್ವಳಿಗೆ ವೀರವನಿತೆ ಒನಕೆ ಓಬವ್ವ ಎಂದು ಮತ್ತು ಆ ಕಳ್ಳಕಿಂಡಿಗೆ ಒನಕೆ ಓಬವ್ವನ ಕಿಂಡಿ ಎಂದು ಬಿರುದು ಬಂದಿತು ಎಂದು ತಿಳಿಸಿದರು.

ಕೊನೆಯದಾಗಿ ಕಳ್ಳಕಿಂಡಿಯಿಂದ ಬಂದ ಶತ್ರು ಸೈನಿಕನೊಬ್ಬ ಓಬವ್ವನ ಬೆನ್ನಿಗೆ ಚೂರಿ ಹಾಕುವುದರಿಂದ ಓಬವ್ವ ಅಲ್ಲಿ ಮರಣ ಹೊಂದುತ್ತಾಳೆ ಎಂಬುದು ಪುಟ್ಟಣ್ಣ ಕಣಗಲ್ ಇತಿಹಾಸಕ್ಕೆ ಮಾಡಿರುವ ಒಂದು ತಪ್ಪು ಕಲ್ಪನೆ. ಓಬವ್ವ ಯುದ್ಧ ನಡೆದ ಮೂರು ವರ್ಷಗಳ ನಂತರ ಅಂದರೆ, 1769ರಲ್ಲಿ ಮರಣ ಹೊಂದುತ್ತಾಳೆ. ಸಮಯಪ್ರಜ್ಞೆಯಿಂದ ದುರ್ಗಕ್ಕೆ ಮತ್ತು ದುರ್ಗದ ಜನತೆಗೆ ಒದಗಿದ ಅಪಾಯವನ್ನು ನಿಸ್ವಾರ್ಥ ಸೇವೆಯಿಂದ ತಪ್ಪಿಸಿರುವ ಕಾರಣ ಒನಕೆ ಓಬವ್ವಳನ್ನು ಮನುಕುಲದ ಸಾಂಸ್ಕೃತಿಕ ಲೋಕದ ಧೃವತಾರೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಸೀಲ್ದಾರ್ ನಾಗರಾಜ್ ಮಾತನಾಡಿ, ಚರಿತೆಯ ಮಹಾಪುರುಷರನ್ನು ಮತ್ತು ವೀರವನಿತೆಯರ ಸಾಧನೆಯನ್ನು ಕೇವಲ ವೇದಿಕೆಯಲ್ಲಿ ಹೇಳಿ ಮುಗಿಸುವಂತಾಗಬಾರದು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಉಮೇಶ್, ಛಲವಾದಿ ಸಮುದಾಯದ ಮುಖಂಡರು, ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

- - - -12ಎಸ್ಎಂಜಿಕೆಪಿ05:

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶನಿವಾರ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ತಹಸೀಲ್ದಾರ್ ನಾಗರಾಜ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!