ಕನ್ನಡಪ್ರಭ ವಾರ್ತೆ ಪುತ್ತೂರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನಲ್ಲಿ ಫೆ. 18 ಹಾಗೂ 19ರಂದು ನಡೆಯಲಿರುವ ತುಳುನಾಡ ಜಾತ್ರೆ ‘ಶ್ರೀ ಒಡಿಯೂರು ರಥೋತ್ಸವ’ ಹಾಗೂ ‘ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನ’ಕ್ಕೆ ೧೬ರಂದು ಪುತ್ತೂರಿನಿಂದ ಬೃಹತ್ ಮಟ್ಟದಲ್ಲಿ ಹಸಿರು ಹೊರೆ ಕಾಣಿಕೆ ಸಮರ್ಪಣೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಫೆ. ೧೪ರಂದು ಹೊರೆಕಾಣಿಕೆ ಸಮಿತಿ ಕಾರ್ಯಾಲಯಯನ್ನು ತೆರೆಯಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಪುತ್ತೂರಿನಿಂದ ತೆರಳುವ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಬೆಳಿಗ್ಗೆ ೧೦.೩೦ ಕ್ಕೆ ಒಡಿಯೂರಿಗೆ ತೆರಳಲಿದೆ. ಹೊರೆಕಾಣಿಕೆ ಸಮರ್ಪಣೆಗಾಗಿ ಈಗಾಗಲೇ ಎಲ್ಲಾ ತಾಲೂಕುಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಯಲ್ಲಿ ಹಲವಾರು ವಿಧದ ಸಾಮಾಜಿಕ ಸಂಸ್ಥೆಯಲ್ಲಿ ಗುರುತಿಸಿಕೊಂಡವರು ಇದ್ದು, ಧಾರ್ಮಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಜತೆಗೆ ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಈ ಕಾರ್ಯದಿಂದ ನಡೆಯಲಿದೆ. ಹೊರೆಕಾಣಿಕೆ ಸಮರ್ಪಣೆಗಾಗಿ ತಾಲೂಕಿನ ಒಂದೊಂದು ವಲಯಗಳಿಗೆ ಒಬ್ಬರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.ಪುತ್ತೂರಿನಿಂದ ಸುಮಾರು ೫೦ ಕ್ವಿಂಟಾಲ್ ಅಕ್ಕಿ ಸಮರ್ಪಣೆ ಮಾಡುವ ಗುರಿ ಹೊಂದಲಾಗಿದೆ. ಹೊರೆಕಾಣಿಕೆ ಮೆರವಣಿಗೆ ಫೆ.೧೬ ರಂದು ಬೆಳಿಗ್ಗೆ ಪುತ್ತೂರಿನಿಂದ ಹೊರಟು ವಿಟ್ಲ, ಕನ್ಯಾನ ಮಾರ್ಗವಾಗಿ ಒಡಿಯೂರಿಗೆ ತೆರಳಲಿದೆ. ಬೆಳಗ್ಗೆ ೧೦ ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.
ಕಾರ್ಯಾಲಯ ಉದ್ಘಾಟನೆ:ಹೊರೆಕಾಣಿಕೆ ಸಮರ್ಪಣೆ ಅಂಗವಾಗಿ ಫೆ.೧೪ ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ರಥಬೀದಿ ಬಳಿ ಕಾರ್ಯಾಲಯ ಉದ್ಘಾಟನೆಗೊಳ್ಳಲಿದೆ. ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಕಾರ್ಯಾಲಯವನ್ನು ಉದ್ಘಾಟಿಸಲಿದ್ದಾರೆ. ಹಸಿರುವಾಣಿ ನೀಡುವ ಭಕ್ತಾದಿಗಳು ಫೆ.೧೪ ರಿಂದ ೧೫ ರಾತ್ರಿಯೊಳಗೆ ಕಾರ್ಯಾಲಯಕ್ಕೆ ತಂದು ಒಪ್ಪಿಸಬೇಕೆಂದು ಸಮಿತಿ ವಿನಂತಿಸಿದೆ.
ಸುದ್ದಿಗೋಷ್ಠಿಯಲ್ಲಿ ಒಡಿಯೂರು ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ, ಪುತ್ತೂರು ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಕಾರ್ಯಾಧ್ಯಕ್ಷ ಕೃಷ್ಣ ಎಂ. ಅಳಿಕೆ, ಗೌರವಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಮತ್ತು ಡಾ. ಸುರೇಶ್ ಪುತ್ತೂರಾಯ, ಉಪಾಧ್ಯಕ್ಷ ಸುಧೀರ್ ನೋಂಡ ಉಪಸ್ಥಿತರಿದ್ದು ಮಾಹಿತಿ ನೀಡಿದರು.