ಮೂರ್ನಾಡಿನ ಪಾಂಡಾಣೆ ಮೈದಾನದಲ್ಲಿ ಮೈದಳೆದ ಯಕ್ಷಗಾನ

KannadaprabhaNewsNetwork |  
Published : Feb 10, 2025, 01:50 AM IST
ಭೋಜನ  | Kannada Prabha

ಸಾರಾಂಶ

ತುಳುನಾಡಿನ ಜನರ ರಕ್ತದಲ್ಲೇ ಒಡಮೂಡಿ ಇಂದಿಗೂ ಪ್ರಚಲಿತದಲ್ಲಿರುವ ಯಕ್ಷಗಾನ ಕಲೆಗೆ ಎಲ್ಲಿಲ್ಲದ ಆಕರ್ಷಣೆಯಿದೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ತುಳುನಾಡಿನ ಜನರ ರಕ್ತದಲ್ಲೇ ಒಡಮೂಡಿ ಇಂದಿಗೂ ಪ್ರಚಲಿತದಲ್ಲಿರುವ ಯಕ್ಷಗಾನ ಕಲೆಗೆ ಎಲ್ಲಿಲ್ಲದ ಆಕರ್ಷಣೆಯಿದೆ. ಆದರೆ ದಕ್ಷಿಣ ಕನ್ನಡದ ಗಡಿಯಾಚೆಗೆ ಅಂತಹ ಜನಪ್ರಿಯತೆ ಇದೇ ಎನ್ನಲಾಗುವುದಿಲ್ಲ. ಕೊಡಗಿನಲ್ಲಂತೂ ಯಕ್ಷಗಾನ ಕಾರ್ಯಕ್ರಮ ನಡೆದರೆ ಪ್ರೇಕ್ಷಕ ಜನರು ಸೇರುವುದೇ ಕಷ್ಟ. ಈ ಅಪ್ರತಿಮ ಕಲೆಯನ್ನು ನಾಡಿನಾದ್ಯಂತ ಪ್ರಚುರಪಡಿಸುವ ಸದುದ್ದೇಶದಿಂದ ‘ಆಪ್ತಮಿತ್ರ ಬಳಗದ’ ಮೂರ್ನಾಡು ಕಲಾ ಸೇವೆಯೊಂದನ್ನು ಆಯೋಜಿಸಿದೆ.

ಬಳಗವು ಹಮ್ಮಿಕೊಂಡಿರುವ ಎರಡನೇ ವರ್ಷದ ಈ ಕಲಾಸೇವೆ ಯಕ್ಷೋತ್ಸವ ಮೂರ್ನಾಡಿನ ಪಾಂಡಾಣೆ ಮೈದಾನದಲ್ಲಿ ಶನಿವಾರ ರಾತ್ರಿ ಮೈದಳೆಯಿತು. ಕಲಾಭಿಮಾನಿಗಳಿಗಾಗಿ ಉಚಿತ ಯಕ್ಷಗಾನ ಬಯಲಾಟ ಆಯೋಜಿಸಲಾಗಿತ್ತು. ಇದರಲ್ಲೇನು ವಿಶೇಷ ಅಂತೀರಾ? ಯಕ್ಷಗಾನವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು, ಹೊಟ್ಟೆ ತುಂಬಾ ಭೋಜನವನ್ನೂ ಸ್ವೀಕರಿಸಿದ್ದೇ ವಿಶೇಷ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಗಜಮೇಳ’ ಎಂದೇ ಪ್ರಖ್ಯಾತಿ ಪಡೆದ ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಖ್ಯಾತ ಕಲಾವಿದರು ‘ಸಾಕೇತ ಸಾಮ್ರಾಜ್ಞಿ’ ಎಂಬ ಯಕ್ಷ ಪ್ರಸಂಗವನ್ನು ನಡೆಸಿಕೊಟ್ಟರು. ನಾಪೋಕ್ಲು, ಮೂರ್ನಾಡು ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಪ್ರೇಕ್ಷಕರಿಗೆ ಸಂಜೆ ಕಾಫಿ, ಲಘು ಉಪಾಹಾರ ಮತ್ತು ರಾತ್ರಿ ವೇಳೆ ಊಟ ಹಾಗೂ ಕಾಫಿ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ನುರಿತ ಕಲಾವಿದರ ವೇಷ-ಭೂಷಣಗಳು, ಭಾಗವತಿಕೆ, ನೃತ್ಯ, ತಾಳ- ಮೇಳ ಹಾಗೂ ಮಾತುಗಾರಿಕೆಗೆ ಮಾರು ಹೋದ ಪ್ರೇಕ್ಷಕರು, ಚಪ್ಪಾಳೆ, ವಿಷಲ್ಗಳ ಸರಿಮಳೆಯೊಂದಿಗೆ ಕಲಾವಿದರಿಗೆ ಹಾಗೂ ಮೇಳಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದರು . ಆಪ್ತಮಿತ್ರ ಬಳಗದ ಪರವಾಗಿ ವಿಜಯ್ ಎಲ್ಲರನ್ನು ಸ್ವಾಗತಿಸಿ ವಂದಿಸಿದರು. ---------------------------------------------

ಆಪ್ತಮಿತ್ರ ಬಳಗ ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. 6 ವರ್ಷಗಳ ಹಿಂದೆ ಸ್ಥಾಪನೆಯಾದ ಈ ಬಳಗ ತುರ್ತು ಸಂದರ್ಭಗಳಲ್ಲಿ ವಾಟ್ಸಪ್ ಗ್ರೂಪ್ ನ ಸದಸ್ಯರಿಂದ ಮಾತ್ರ ದೇಣಿಗೆ ಸಂಗ್ರಹಿಸಿ ಅಗತ್ಯವಿದ್ದವರಿಗೆ ನೆರವು ನೀಡುತ್ತಿದ್ದೇವೆ. ಸಮಾಜ ಸೇವೆಯೊಂದಿಗೆ ಕಲೆ ಮತ್ತು ಸಂಸ್ಕೃತಿಗೆ ಒತ್ತು ನೀಡುವ ನಿಟ್ಟಿನಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ ಯಶಸ್ವಿಯಾಗಿದೆ. 3,000ಕ್ಕೂ ಅಧಿಕ ಮಂದಿ ಕಾರ್ಯಕ್ರಮವನ್ನು ವೀಕ್ಷಿಸಿ ಯಶಸ್ವಿಗೊಳಿಸಿದ್ದಾರೆ. ಆಪ್ತಮಿತ್ರ ಬಳಗದ ಪ್ರತಿಯೊಬ್ಬ ಸದಸ್ಯರ ಅವಿರತ ಶ್ರಮದಿಂದ ಇದು ಸಾಧ್ಯವಾಗಿದೆ.

। ಚಂದ್ರಶೇಖರ ಕುಲಾಲ್, ಕಾರ್ಯಕ್ರಮದ ಸಂಘಟಕರು. ಆಪ್ತಮಿತ್ರ ಬಳಗ ಮೂರ್ನಾಡು

----------------------------------------------

ನಮ್ಮೊಂದಿಗೆ ಸಹಕರಿಸಿ ಪ್ರೋತ್ಸಾಹಿಸಿದ ಆಪ್ತಮಿತ್ರ ಬಳಗ ಹಾಗೂ ಕಲಾ ಪ್ರೇಮಿಗಳಿಗೆ ತುಂಬು ಹೃದಯದ ಧನ್ಯವಾದಗಳು. ಮುಂದೆಯೂ ನಮ್ಮಂಥ ಕಲಾವಿದರಿಗೆ ಇದೇ ರೀತಿಯ ಸಹಕಾರ ಸಿಗಲೆಂದು ಮನವಿ ಮಾಡುತ್ತೇನೆ.

। ಹರೀಶ್ ಭಟ್ ಬಲಂತಿಲ ಮಗೇರು, ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಡಗಿ ಮುಖ್ಯ ರಸ್ತೆ ಅಗಲೀಕರಣಕ್ಕೆ 15 ದಿನ ಗಡುವು
45 ದಿನವಾದರೂ ತೆರೆಯದ ಇ-ಸ್ವತ್ತು 2.0 ತಂತ್ರಾಂಶ